ಮೈಸೂರ್ ಪಾಕ್ : ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಪಾಕ್ ಸಿಕ್ಕಾಪಟ್ಟೆ ಫೇಮಸ್. ಮುಟ್ಟಿದರೆ ಮೃದುವಾಗಿರುವ, ಬಾಯಲ್ಲಿ ಇಟ್ಟರೆ ಕರಗುವ ಶತಮಾನಗಳಷ್ಟೇ ಹಿಂದಿನ ಈ ಸಿಹಿ ತಿನಿಸಿನ ಮೂಲ ರೆಸಿಪಿಯ ರುಚಿಯನ್ನು ಸವಿಯಬೇಕೆಂದರೆ ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್ ಮಾರ್ಟ್‌ನಲ್ಲಿ ಹೋಗಲೇಬೇಕು. ಮೈಸೂರಿಗೆ ಹೋದರೆ ಈ ಸಿಹಿ ತಿಂಡಿಯನ್ನು ಒಮ್ಮೆ ಸವಿಯಿರಿ.
ಮೈಸೂರ್ ಮಸಾಲೆ ದೋಸೆ : ಘಮ್ ಎನ್ನುವ ಮಸಾಲೆ ದೋಸೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ಆದರೆ ಮೈಸೂರಲ್ಲಿ ಸಿಗುವ ಮಸಾಲೆ ದೋಸೆ ಸ್ವಲ್ಪ ವಿಭಿನ್ನವಾಗಿದ್ದು , ಗರಿಗರಿಯಾಗಿರುವ ಈ ದೋಸೆಯನ್ನು ಬಾಳೆಎಲೆಯಲ್ಲಿ ಇಟ್ಟು ಕೊಡಲಾಗುತ್ತದೆ. ಈ ದೋಸೆಯನ್ನು ಅದ್ದಿ ತಿನ್ನಲು ಕಾಯಿ ಚಟ್ನಿ ಇರುತ್ತದೆ. ಇದರ ರುಚಿ ಸವಿದರೆ ಮತ್ತೆ ಬೇಡ ಎನ್ನುವುದೇ ಇಲ್ಲ.
ಬಿಸಿಬೇಳೆಬಾತ್ : ಕರ್ನಾಟಕದ ಪ್ರಸಿದ್ಧವಾದ ತಿಂಡಿ ಈ ಬಿಸಿಬೇಳೆಬಾತ್. ಆದರೆ ಈ ಸ್ಪೆಷಲ್ ತಿಂಡಿ ಮೈಸೂರಲ್ಲಿ ವಿಭಿನ್ನವಾಗಿಯೇ ಮಾಡಲಾಗುತ್ತದೆ. ಈ ಬಿಸಿಬೇಳೆಬಾತ್ ನಲ್ಲಿ ಬಳಸುವ ಪದಾರ್ಥಗಳು, ಬೇಳೆ, ತರಕಾರಿಗಳು ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಕಾರಣ ಇದನ್ನೊಮ್ಮೆ ನೀವು ಇಲ್ಲಿ ತಿನ್ನಲೇಬೇಕು.
ಮಲ್ಲಿಗೆ ಇಡ್ಲಿ : ದಕ್ಷಿಣ ಭಾರತದ ಬೆಳಗ್ಗಿನ ಬಹುತೇಕ ಉಪಹಾರಗಳಲ್ಲಿ ಒಂದು ಈ ಇಡ್ಲಿ. ವಿವಿಧ ರೀತಿಯ ಇಡ್ಲಿಗಳಿದ್ದು ಟೇಸ್ಟ್ ಕೂಡ ಭಿನ್ನವಾಗಿರುತ್ತದೆ. ಆದರೆ ಮೈಸೂರಿನಲ್ಲಿ ಮಲ್ಲಿಗೆ ಇಡ್ಲಿಯೊಂದಿಗೆ ಚಟ್ನಿಗಳು ಮತ್ತು ಸಾಂಬಾರ್‌ಗಳೊಂದಿಗೆ ನೀಡಲಾಗುತ್ತದೆ. ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.
ಖಾರಾ ಬಾತ್ : ರವಾ ಬಾತ್ ಎಂದೂ ಕರೆಯಲ್ಪಡುವ ಇದು ಮೈಸೂರಿನಲ್ಲಿ ಜನಪ್ರಿಯ ಉಪಹಾರ ಆಯ್ಕೆಯಾಗಿದೆ. ಮೈಸೂರಿನ ಈ ಪ್ರಸಿದ್ಧ ಆಹಾರವನ್ನು ಸೂಜಿ ರವೆ, ಈರುಳ್ಳಿ, ಟೊಮೆಟೊ, ಮಿಶ್ರ ತರಕಾರಿಗಳು ಮತ್ತು ಗೋಡಂಬಿಗಳನ್ನು ಬಳಸಿ ತಯಾರಿಸಲಾಗುತ್ತದೆ. ಉಪ್ಪಿಟ್ಟು ಅಥವಾ ಉಪ್ಮಾ ಎಂದು ಕೂಡ ಕರೆಯಲಾಗುವ ಖಾರಾ ಬಾತನ್ನು ಇಲ್ಲಿನ ಜನರು ಬಾಯಿಚಪ್ಪರಿಸಿಕೊಂಡು ಸವಿಯುತ್ತಾರೆ.