- Kannada News Photo gallery Mysore, Goddess Chamundeshwari Vardhanti 2024, Celebration at Chamundi Hills, see photos
Photos: ಮೈಸೂರು, ಚಾಮುಂಡೇಶ್ವರಿ ದೇವಿಯ ವರ್ಧಂತಿ; ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ
ಮೈಸೂರಿನ ಚಾಮುಂಡಿ ಬೆಟ್ಟ ದೇಗುಲದಲ್ಲಿ ಇಂದು (ಶನಿವಾರ) ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ನಡೆಯುತ್ತಿದೆ. ಹೀಗಾಗಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಡಗರ ಸಂಭ್ರಮ ಮನೆಮಾಡಿದೆ. ನಾಡದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಬರುತ್ತಿದ್ದಾರೆ.
Updated on: Jul 27, 2024 | 10:52 AM

ಬೆಳಗ್ಗೆ 8 ಗಂಟೆಯಿಂದಲೇ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಅಭ್ಯಂಜನ ಸ್ನಾನ, ರುದ್ರಾಭಿಷೇಕ, ಪಂಚಾಮೃತಭಿಷೇಕ, ಕುಂಕುಮಾರ್ಚನೆ ಸೇವೆ ನಡೆಯುತ್ತಿವೆ.

ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿರುವುದು ಕಂಡುಬಂದಿದೆ. ವಿವಿಧ ಬಗೆಯ ಹೂವುಗಳಿಂದ ದೇವಸ್ಥಾನದ ಗರ್ಭಗುಡಿ ಅಲಂಕಾರ ಮಾಡಲಾಗಿದೆ.

ಯದುವೀರ್ ಒಡೆಯರ್, ಪ್ರಮೋದಾದೇವಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಇಂದು ರಾತ್ರಿ 8 ಗಂಟೆ ಬಳಿಕ ದರ್ಬಾರ್ ಉತ್ಸವ ನಡೆಯಲಿದೆ. ಅರಮನೆಯ ದರ್ಬಾರ್ ಮಾದರಿಯಲ್ಲೇ ಅಮ್ಮನವರಿಗೆ ದರ್ಬಾರ್ ಉತ್ಸವ ನೆರವೇರಲಿದೆ.

ಮೂರನೇ ಆಷಾಢ ಶುಕ್ರವಾರದ ಪ್ರಯುಕ್ತ ಜುಲೈ 26ರಂದು ದೇಗುಲಕ್ಕೆ ಭಕ್ತ ಸಾಗರವೇ ಹರಿದುಬಂದಿತ್ತು. ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಭಕ್ತರು ಬೆಳಗ್ಗೆ 6 ಗಂಟೆಯಿಂದಲೇ ಬೆಟ್ಟಕ್ಕೆ ಆಗಮಿಸಿ ದೇವಿಯ ಆಶೀರ್ವಾದ ಪಡೆಯಲು ಸರದಿಯಲ್ಲಿ ನಿಂತಿರುವುದು ಕಂಡುಬಂದಿತ್ತು.

ಪ್ರಧಾನ ಅರ್ಚಕ ಡಾ ಎನ್ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕರು ಶುಕ್ರವಾರ ಮುಂಜಾನೆ 3 ಗಂಟೆಯಿಂದಲೇ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ದೇಗುಲದ ಬಾಗಿಲು ತೆರೆಯಲಾಯಿತು. ಆಷಾಢ ಶುಕ್ರವಾರದ ನಿಮಿತ್ತ ಚಾಮುಂಡೇಶ್ವರಿ ದೇವಿಯನ್ನು ‘ನಾಗಲಕ್ಷ್ಮಿ’ಯಾಗಿ ಅಲಂಕರಿಸಲಾಗಿತ್ತು.

ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದರಿಂದ ಕೆಎಸ್‌ಆರ್‌ಟಿಸಿಯು ಚಾಮುಂಡಿ ಬೆಟ್ಟದ ತಪ್ಪಲಿನಿಂದ ಭಕ್ತರಿಗೆ ಉಚಿತ ಬಸ್ ಸೇವೆ ಒದಗಿಸುತ್ತಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಎಂಎಲ್‌ಸಿ ಸೂರಜ್ ರೇವಣ್ಣ ಕೂಡ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದರು.



















