
ನಾಡಿನೆಲ್ಲೆಡೆ ಇಂದು ವಿಜಯದಶಮಿ ಸಂಭ್ರಮ ಜೋರಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗತವೈಭವ ಮರುಕಳಿಸಿದೆ. ಮೈಸೂರು ದಸರಾ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸಿದ್ದಾರೆ. ಆದರೆ ಇಲ್ಲೊಬ್ಬರು ವ್ಯಕ್ತಿ ದಸರಾ ನೋಡಲು ಹ್ಯಾಂಡಲ್ ಇಲ್ಲದ ಬೈಕ್ ಏರಿ ಆಗಮಿಸಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ.
ಇಳಕಲ್ ನಗರದ ವೀರಣ್ಣ ಕುಂದರಗಿಮಠ ಅವರು ಹ್ಯಾಂಡಲ್ ಇಲ್ಲದ ಬೈಕ್ ಏರಿ ಕೊಪ್ಪಳದಿಂದ ಮೈಸೂರಿನವರೆಗೆ ಆಗಮಿಸುವ ಮೂಲಕ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾರೆ.
ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದು ಸೋಮವಾರ ಬೆಳಿಗ್ಗೆ 7.30ಕ್ಕೆ ಆರಂಭಗೊಂಡ ಬೈಕ್ ಸವಾರಿ, ಮಂಗಳವಾರ ಬೆಳಿಗ್ಗೆ 7:30ಕ್ಕೆ ಚಾಮುಂಡಿ ಬೆಟ್ಟ ತಲುಪ್ಪಿದ್ದಾರೆ. ಬರೋಬ್ಬರಿ 460 ಕಿಮೀ ಹ್ಯಾಂಡಲ್ ಇಲ್ಲದ ಬೈಕ್ ಓಡಿಸುವ ಮೂಲಕ ವೀರಣ್ಣ ಕುಂದರಗಿಮಠ ದಾಖಲೆ ಬರೆದಿದ್ದಾರೆ.
ಕೊಪ್ಪಳ, ಹೊಸಪೇಟೆ, ಚಿತ್ರದುರ್ಗ, ತುಮಕೂರು, ಶ್ರೀರಂಗಪಟ್ಟಣ, ಮೈಸೂರು ಅರಮನೆ ಮಾರ್ಗವಾಗಿ ಚಾಮುಂಡಿ ಬೆಟ್ಟ ತಲುಪಿದ್ದಾರೆ. ಬಳಿಕ ಚಾಮುಂಡಿ ದರ್ಶನ ಪಡೆದು, ನಂತರ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಬಂದಿದ್ದಾರೆ.
ಇನ್ನು ವೀರಣ್ಣ ಅವರು ಈಗಾಗಲೇ ಹ್ಯಾಂಡಲ್ ಇಲ್ಲದ ಬೈಕ್ ಚಲಾಯಿಸಿ ಅನೇಕ ದಾಖಲೆ ಮಾಡಿದ್ದಾರೆ. ಕೇವಲ ಬೈಕ್ ಓಡಿಸುವುದು ಮಾತ್ರವಲ್ಲದೆ ಕನ್ನಡ ಬಗ್ಗೆ, ವ್ಯಸನ ಮುಕ್ತ ಸಮಾಜ ಬಗ್ಗೆ, ಬರಗಾಲ ತಡೆಗಟ್ಟಲು ಸಸಿ ನೆಡುವ ಬಗ್ಗೆಯೂ ವೀರಣ್ಣ ಕುಂದರಗಿಮಠ ಜಾಗೃತಿ ಮೂಡಿಸುತ್ತಿದ್ದಾರೆ.