ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆಮಾಡಿದೆ. ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಲಾಗಿದೆ.
ಬೆಂಗಳೂರು, ತೆಲಂಗಾಣ, ಆಂಧ್ರಪ್ರದೇಶದಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಇಂದು ಸುಬ್ರಹ್ಮಣ್ಯನ ದರ್ಶನ ಪಡೆದರೆ ದೋಷ ನಿವಾರಣೆಯಾಗುವ ನಂಬಿಕೆ ಇದೆ.
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮೀ. ಆದಿಶೇಷನ್ನು ಈ ಭೂಮಿಯನ್ನು ಹೊತ್ತಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಭೂಮಿಯನ್ನು ರಕ್ಷಿಸಬೇಕಾದರೆ ಭೂಮಿಯನ್ನು ಹೊತ್ತ ಸರ್ಪಗಳ ರಾಜನನ್ನು ಪೂಜಿಸಬೇಕು. ಅಲ್ಲದೆ ಆದಿಶೇಷನು ವಿಷ್ಣುವಿನ ವಾಹನವೂ ಹೌದು. ಹೀಗಾಗಿ ಸರ್ಪ ಪೂಜೆಗೆ ವಿಶೇಷ ಮಹಾತ್ವವಿದೆ.
ವಿಷ್ಣುವು ವಿಶ್ವದ ರಕ್ಷಕ. ಆದ್ದರಿಂದ ಆದಿಶೇಷನೂ ವಿಷ್ಣುವಿಗೂ ಭೂಮಿಗೂ ಅವಿನಾಭಾವ ಸಂಬಂಧವಿದೆ. ನಾಗದೇವತೆಯನ್ನು ಲೌಕಿಕ ಹಾಗು ಅಲೌಕಿಕ ಉನ್ನತಿಗೆ ಪೂಜಿಸುತ್ತಾರೆ. ಲೌಕಿಕವಾಗಿ ಸಂತಾನ, ಸುಖ, ಸಂಪತ್ತಿಗೆ ಮೂಲ ಕಾರಣ ಸರ್ಪವಾಗಿದೆ.
ನಾಗ ದೇವರನ್ನು ಪೂಜಿಸುವುದರಿಂದ ವ್ಯಕ್ತಿಯು ಎಲ್ಲಾ ತೊಂದರೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ. ನಾಗರ ಪಂಚಮಿಯ ದಿನದಂದು ಹಾವುಗಳನ್ನು ಪೂಜಿಸುವ ಜನರು ಹಾವು ಕಡಿತದಿಂದ ರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ.
ಈ ದಿನ ಹಾವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಿದರೆ ಶಾಶ್ವತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಮನೆಯ ಪ್ರವೇಶ ದ್ವಾರದಲ್ಲಿ ನಾಗ ಮೂರ್ತಿ ಮಾಡುವ ಸಂಪ್ರದಾಯವಿದೆ. ಇದು ಹಾವಿನ ಕಾಟದಿಂದ ಮನೆಯನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆಯಿದೆ.