Updated on: Aug 12, 2022 | 6:45 AM
ಪ್ರೀಮಿಯಂ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಕಂಡಿರುವ ಒನ್ ಪ್ಲಸ್ (OnePlus) ಕಂಪನಿ ಈ ತಿಂಗಳು ಒಂದರ ಹಿಂದೆ ಒಂದರಂತೆ ಆಕರ್ಷಕ ಮೊಬೈಲ್ ಗಳನ್ನು ಅನಾವರಣ ಮಾಡುತ್ತಿದೆ. ಈ ಸಾಲಿಗೆ ಇದೀಗ ಹೊಸ ಒನ್‌ಪ್ಲಸ್ ಏಸ್ ಪ್ರೊ ಸ್ಮಾರ್ಟ್ ಫೋನ್ ಕೂಡ ಸೇರಿದೆ. ಈ ಫೋನ್ ಗೆ ವಿದೇಶದಲ್ಲಿ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.
ಭರ್ಜರಿ ಬ್ಯಾಟರಿ, ಬಲಿಷ್ಠ ಪ್ರೊಸೆಸರ್, ಅತ್ಯುತ್ತಮ ಕ್ಯಾಮೆರಾದಿಂದ ಕೂಡಿರುವ ಈ ಫೋನ್ ನಲ್ಲಿ 6.7 ಇಂಚಿನ ಅಮೋಲೆಡ್ ಡಿಸ್ ಪ್ಲೇಯನ್ನು ನೀಡಲಾಗಿದೆ. ಈ ಡಿಸ್ ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, 20.1:9 ರಚನೆಯ ಅನುಪಾತವನ್ನು ಹೊಂದಿದೆ.
ಒನ್ ಪ್ಲಸ್ ಏಸ್ ಪ್ರೊ ಆಕ್ಟಾ-ಕೋರ್ ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 8+ Gen 1 SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಆಧಾರಿತ ColorOS 12.1 ಬೆಂಬಲವನ್ನು ಪಡೆದಿದೆ.
ಅತ್ಯುತ್ತಮ ಕ್ವಾಲಿಟಿ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್, ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 MP ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದಲ್ಲದೆ 16MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
4,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 150W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6, ಬ್ಲೂಟೂತ್ v5.2, NFC ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ.
ಒನ್ ಪ್ಲಸ್ ಏಸ್ ಪ್ರೊ ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಅನಾವರಣಗೊಂಡಿದೆ. ಇದರ 16GB + 256GB ಸ್ಟೋರೇಜ್ ಆಯ್ಕೆಗೆ CNY 3,799, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 44,800ರೂ. ಎನ್ನಬಹುದು.