- Kannada News Photo gallery Phalguni River overflow affected Mangalore Hill collapses road, house, Vajradehi Matt flooded
ಮಂಗಳೂರಿನಲ್ಲಿ ಫಲ್ಗುಣಿ ನದಿ ಅಬ್ಬರ; ರಸ್ತೆ, ಮನೆ, ವಜ್ರದೇಹಿ ಮಠ ಜಲಾವೃತ, ದುರ್ಗಾಪರಮೇಶ್ವರಿ ದೇವಸ್ಥಾನದ ಮೇಲೆ ಗುಡ್ಡ ಕುಸಿತ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಲ್ಗುಣಿಯ ಅಬ್ಬರಕ್ಕೆ ಮಠ, ಗೋಶಾಲೆ, ದೇವಸ್ಥಾನಗಳೆಲ್ಲ ಮುಳುಗಿವೆ. ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ. ದೇವಸ್ಥಾನದ ಗರ್ಭಗುಡಿ ಮತ್ತು ಸುತ್ತು ಪೌಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ.
Updated on: Aug 01, 2024 | 12:20 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದೆ. ಭಾರಿ ಮಳೆಗೆ ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದ್ದು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ದ್ವೀಪದಂತಾಗಿದೆ. ಹಲವು ಮನೆಗಳಿಗೆ ನದಿ ನೀರು ನುಗ್ಗಿದೆ.

ಫಲ್ಗುಣಿ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿ ಅಮ್ಮುಂಜೆಯ ಸೋಮನಾಥೇಶ್ವರ ದೇಗುಲವು ಜಲಾವೃತಗೊಂಡಿದೆ. ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಿದ್ದು ನದಿಯಂತಾಗಿವೆ. ಪ್ರವಾಹ ಪೀಡಿತ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಇನ್ನು ಮತ್ತೊಂದೆಡೆ ಫಲ್ಗುಣಿ ನದಿಯ ನೆರೆಗೆ ವಜ್ರದೇಹಿ ಮಠ ಕೂಡ ಮುಳುಗಿದೆ. ಮಂಗಳೂರಿನ ಪ್ರಸಿದ್ಧ ಗುರುಪುರ ವಜ್ರದೇಹಿ ಮಠ ಮುಳುಗಿದೆ. 50 ವರ್ಷಗಳ ಬಳಿಕ ಗುರುಪುರದಲ್ಲಿ ರಣ ಭೀಕರ ನೆರೆ ಬಂದಿದೆ.

ಫಲ್ಗುಣಿಯ ಅಬ್ಬರಕ್ಕೆ ಮಠ, ಗೋಶಾಲೆ, ದೇವಸ್ಥಾನಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನು ವಜ್ರದೇಹಿ ಮಠದಲ್ಲಿದ್ದ ಗೋವುಗಳನ್ನ ಮಠದ ಆಡಳಿತ ಸಿಬ್ಬಂದಿ ಮಠದ ಮೇಲ್ಭಾಗದಲ್ಲಿರುವ ಜಾಗದಲ್ಲಿ ಕಟ್ಟಿ ಹಾಕಿದ್ದಾರೆ.

ನೀರು ಏರಿಕೆಯಾಗುತ್ತಿದ್ದು ಮಠದ ಒಳ ಭಾಗಕ್ಕೂ ನೀರು ನುಗ್ಗುವ ಆತಂಕ ಎದುರಾಗಿದೆ. ಇಂಥದ್ದೊಂದು ನೆರೆಯನ್ನ ಹಲವು ವರ್ಷಗಳ ಬಳಿಕ ಈಗಲೇ ನೋಡಿದ್ದು ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಮಂಗಳೂರು ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಎರಡು ಬದಿಯು ನೆರೆ ನೀರು ಆವರಿಸಿದೆ. ಮದುವೆ ಹಾಲ್, ದೇವಸ್ಥಾನ, ಮನೆಗಳು ಜಲಾವೃತಗೊಂಡಿವೆ. ನೂರಾರು ಎಕರೆ ಕೃಷಿ ಭೂಮಿಗೂ ನದಿ ನೀರು ನುಗ್ಗಿದೆ. ಅಪಾಯದಲ್ಲಿರುವವರನ್ನು ಎಸ್.ಡಿ.ಆರ್.ಎಫ್ ಪಡೆ ಸ್ಥಳಾಂತರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ. ದೇವಸ್ಥಾನದ ಗರ್ಭಗುಡಿ ಮತ್ತು ಸುತ್ತು ಪೌಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ನೀರಿನ ಜೊತೆಗೆ ದೇವಸ್ಥಾನದ ಒಳಗೆ ಮಣ್ಣು ಕೂಡ ನುಗ್ಗಿದೆ. ಮಳೆ ಹೆಚ್ಚಾದರೆ ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಎದುರಾಗಿದೆ.









