- Kannada News Photo gallery Pre wedding shoot ends in fatal accident, couple dies before marriage in Koppal
ಮದುವೆಗೂ ಮುನ್ನ ಮಸಣ ಸೇರಿದ ಜೋಡಿ: ಅಪಘಾತಕ್ಕೂ ಮೊದಲು ನಡೆದಿತ್ತು ಫೋಟೋ ಶೂಟ್
ಭೀಕರ ಅಪಘಾತದಲ್ಲಿ ಹಸೆಮಣೆ ಏರಬೇಕಿದ್ದ ಜೋಡಿಯೊಂದು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸುಕೊಂಡು ಬರುವ ವೇಳೆ ನಡೆದ ಬೈಕ್ ಅಪಘಾತದಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾನೆ. ಹೀಗಾಗಿ ಮದುವೆ ಸಂಭ್ರಮದಲ್ಲಿದ್ದ ಮನೆಗೆ ಭರಸಿಡಿಲು ಬಡಿದಂತಾಗಿದೆ.
Updated on:Dec 08, 2025 | 4:14 PM

ಅವರಿಬ್ಬರೂ ಬದುಕಿನ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದರು. ಜೊತೆಯಾಗಿ ಸಂತೋಷದಿಂದ ಬದುಕಿ ಬಾಳಬೇಕೆಂದು ಅಂದುಕೊಂಡಿದ್ದ ಅವರು, ಇನ್ನೊಂದು 12 ದಿನಗಳು ಕಳೆದರೆ ಸಪ್ತಪದಿಯನ್ನೂ ತುಳಿಯುತ್ತಿದ್ದರು. ಆದರೆ ಅಷ್ಟರಲ್ಲಾಗಲೇ ವಿಧಿ ಅವರ ಬಾಳಲ್ಲಿ ಚೆಲ್ಲಾಟ ಆಡಿದೆ. ಹಸೆಮಣೆ ಏರಬೇಕಿದ್ದ ಜೋಡಿ ಒಟ್ಟಿಗೆ ಪ್ರಾಣ ಬಿಟ್ಟಿದೆ.

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸುಕೊಂಡು ಬರುತ್ತಿದ್ದ ಜೋಡಿಯೊಂದು ಭೀಕರ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಬಳಿ ನಡೆದಿದೆ. ಎದುರಿನಿಂದ ಬರ್ತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಕರಿಯಪ್ಪ ಮಡಿವಾಳ (26) ಮತ್ತು ಕವಿತಾ (19) ಮೃತಪಟ್ಟಿದ್ದಾರೆ.

ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳರ ಜೊತೆ ಕಾರಟಗಿ ತಾಲೂಕಿನ ಮುಷ್ಟೂರು ಗ್ರಾಮದ ಕವಿತಾ ಮದುವೆ ಇದೇ ತಿಂಗಳ 20ರಂದು ನಿಶ್ಚಯವಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ಬೆಳಿಗ್ಗೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿಕೊಂಡು ಬರ್ತಿದ್ದ ವೇಳೆ ಇವರ ಬೈಕ್ ಎದುರಿನಿಂದ ಬರ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.

ಪಂಚರ್ ಆಗಿ ನಿಂತಿದ್ದ ಲಾರಿಯನ್ನು ಓವರ್ಟೇಕ್ ಮಾಡುವ ವೇಳೆ ಎದುರಿನಿಂದ ಬಂದ ಲಾರಿಗೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಕವಿತಾ ಸ್ಥಳದಲ್ಲಿಯೇ ಮೃತಪಟ್ಟರೆ, ಕರಿಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾರೆ. ಹೀಗಾಗಿ ಮದುವೆ ಸಂಭ್ರಮದಲ್ಲಿದ್ದ ಉಭಯ ಕುಟುಂಬಗಳು ಶೋಕ ಸಾಗರದಲ್ಲಿ ಮುಳುಗಿವೆ.

ಇನ್ನು ಕರಿಯಪ್ಪನ ಜೊತೆಗೆ ಆತನ ಅಣ್ಣ ರಮೇಶ್ರದ್ದು ಕೂಡವಿವಾಹ ನಿಶ್ಚಿತವಾಗಿತ್ತು.ಚಿಕ್ಕವರಿದ್ದಾಗಲೇ ಕರಿಯಪ್ಪ ತಂದೆ ತಾಯಿ ತೀರಿಕೊಂಡಿದ್ದ ಹಿನ್ನಲೆ ಸಂಬಂಧಿಕರು ಇವರನ್ನು ಸಾಕಿದ್ದರು. ಸ್ವಗ್ರಾಮ ಹನುಮನ ಹಟ್ಟಿಯಲ್ಲಿ ಡಿಸೆಂಬರ್ 20ರಂದು ನಡೆಯಲಿರೋ ಸಾಮೂಹಿಕ ಮದುವೆಯಲ್ಲಿ ಇವರಿಬ್ಬರ ವಿವಾಹ ನಿಶ್ವಯವಾಗಿತ್ತು. ಕಳೆದ ನಾಲ್ಕೈದು ತಿಂಗಳ ಹಿಂದೆ ಇಬ್ಬರದ್ದೂ ನಿಶ್ವಿತಾರ್ಥ ನಡೆದಿತ್ತು.
Published On - 4:06 pm, Mon, 8 December 25



