
ನಟಿ ಪ್ರಿಯಾಂಕಾ ಚೋಪ್ರಾ ಅವರು ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ಮದುವೆ ಆದ ನಂತರದಲ್ಲಿ ಅಮೆರಿಕದಲ್ಲಿಯೇ ಸೆಟಲ್ ಆಗಿದ್ದಾರೆ. ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಪ್ರಿಯಾಂಕಾ, ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ. ಜನವರಿ ತಿಂಗಳಲ್ಲಿ ಪ್ರಿಯಾಂಕಾ ಅವರೇ ಈ ವಿಚಾರ ಅಧಿಕೃತ ಮಾಡಿದ್ದರು.

ಪ್ರಿಯಾಂಕಾ ಚೋಪ್ರಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಪತಿಯನ್ನಾಗಲಿ, ಮಗುವನ್ನಾಗಲಿ ಕರೆದುಕೊಂಡು ಬಂದಿರಲಿಲ್ಲ. ಅವಧಿಗೂ ಮೊದಲೇ ಪ್ರಿಯಾಂಕಾ ಮಗು ಜನಿಸಿದೆ ಎನ್ನುವ ವದಂತಿಗೆ ಈ ವಿಚಾರ ಪುಷ್ಟಿ ನೀಡಿದೆ. ಪ್ರಿಯಾಂಕಾ ಶಾಪಿಂಗ್ ಮಾಡುತ್ತಿರುವ ಫೋಟೋ ಅವರ ಫ್ಯಾನ್ ಪೇಜ್ಗಳಲ್ಲಿ ವೈರಲ್ ಆಗಿದೆ.

2016ರ ಗ್ಲೋಬಲ್ ಸಿಟಿಜನ್ ಕಾರ್ಯಕ್ರಮದ ಶರ್ಟ್ ಧರಿಸಿರುವ ಪ್ರಿಯಾಂಕಾ, ಕೈಯಲ್ಲಿ ಒಂದು ಬ್ಯಾಗ್ ಹಿಡಿದು ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ‘ಮಗು ಎಲ್ಲಿ?’ ಎನ್ನುವ ಪ್ರಶ್ನೆಯನ್ನು ಕೆಲವರು ಕೇಳಿದ್ದಾರೆ. ಇದಕ್ಕೆ ಪ್ರಿಯಾಂಕಾ ಅಭಿಮಾನಿಗಳು ತಕ್ಕ ಉತ್ತರ ನೀಡಿದ್ದಾರೆ. ‘ಮಗು ಮನೆಯಲ್ಲಿ ಇರಬಹುದು, ತನ್ನ ತಂದೆಯ ಜತೆಗೆ. ನಿನಗೇ ಆ ಬಗ್ಗೆ ಚಿಂತೆ?’ ಎಂದು ಪ್ರಶ್ನೆ ಮಾಡಲಾಗಿದೆ.

‘ನಿಮ್ಮ ಮಗುವನ್ನು ನೋಡೋಕೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ಇದಕ್ಕೆ ಉತ್ತರಿಸಿರುವ ಪ್ರಿಯಾಂಕಾ ಅಭಿಮಾನಿಗಳು, ‘ಇದು ಅವರ ವೈಯಕ್ತಿಕ ಆಯ್ಕೆ. ಅದನ್ನು ಪ್ರಶ್ನಿಸುವ ಹಕ್ಕು ನಿಮಗೆ ಇಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಮಗು ಜನಿಸಿದ ಬಗ್ಗೆ ಜನವರಿ ತಿಂಗಳಲ್ಲಿ ಪ್ರಿಯಾಂಕಾ ಘೋಷಣೆ ಮಾಡಿದ್ದರು. ಆದರೆ, ಎಲ್ಲಿಯೂ ಅವರು ಮಗುವಿನ ಫೋಟೋ ಹಂಚಿಕೊಂಡಿರಲಿಲ್ಲ. ಮಗು ಗಂಡೋ ಅಥವಾ ಹೆಣ್ಣೋ ಎನ್ನುವ ಬಗ್ಗೆಯೂ ಮಾಹಿತಿ ನೀಡಿಲ್ಲ. ಪ್ರಿಯಾಂಕಾ ಸಹೋದರಿ ಮೀರಾ ಅವರು, ಜನಿಸಿದ ಮಗು ಹೆಣ್ಣು ಎಂದು ಸ್ಪಷ್ಟನೆ ನೀಡಿದ್ದರು.