Pro Kabaddi 2022: ಪ್ರೋ ಕಬಡ್ಡಿ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪವನ್ ಸೆಹ್ರಾವತ್
Pro Kabaddi 2022: ಈ ಬಾರಿ ಹಲವು ಆಟಗಾರರು ಕೋಟಿ ಮೊತ್ತಕ್ಕೆ ಹರಾಜಾದರೂ ಇವರೆಲ್ಲರನ್ನು ಮೀರಿಸಿ ಪವನ್ ಶೆಹ್ರಾವತ್ ಭರ್ಜರಿ ಮೊತ್ತಕ್ಕೆ ಹರಾಜಾಗಿದ್ದಾರೆ.
Updated on: Aug 06, 2022 | 12:25 PM

ಪ್ರೋ ಕಬಡ್ಡಿ ಸೀಸನ್ 9 ರ ಮೊದಲ ದಿನದ ಹರಾಜಿನಲ್ಲಿ ಸ್ಟಾರ್ ಆಟಗಾರ ಪವನ್ ಸೆಹ್ರಾವತ್ ಹೊಸ ದಾಖಲೆ ಬರೆದಿದ್ದಾರೆ. ಹೌದು, ಪಿಕೆಎಲ್ ಇತಿಹಾಸದಲ್ಲೇ ಅತೀ ದುಬಾರಿ ಆಟಗಾರನಾಗಿ ಪವನ್ ಶೆಹ್ರಾವತ್ ಹೊರಹೊಮ್ಮಿದ್ದಾರೆ.

ಕಳೆದ ಸೀಸನ್ನಲ್ಲಿ ಬೆಂಗಳೂರು ಬುಲ್ಸ್ ಪರ ಆಡಿದ್ದ ಪವನ್ ಅವರನ್ನು ಈ ಸಲ ತಮಿಳ್ ತಲೈವಾಸ್ ತಂಡವು ಬರೋಬ್ಬರಿ 2 ಕೋಟಿ 26 ಲಕ್ಷ ರೂ. ನೀಡಿ ಖರೀದಿಸಿದೆ.

ಅಚ್ಚರಿ ಎಂದರೆ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲೇ ಇದುವರೆಗೆ ಯಾವುದೇ ಆಟಗಾರ 2 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿರಲಿಲ್ಲ. ಇದೀಗ ಭರ್ಜರಿ ಮೊತ್ತಕ್ಕೆ ಹರಾಜಾಗುವ ಮೂಲಕ ಪವನ್ ಶೆಹ್ರಾವತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಪ್ರೋ ಕಬಡ್ಡಿ ಲೀಗ್ನ ದುಬಾರಿ ಆಟಗಾರನ ದಾಖಲೆ ಪರ್ದೀಪ್ ನರ್ವಾಲ್ ಹೆಸರಿನಲ್ಲಿತ್ತು. ಕಳೆದ ಸೀಸನ್ನಲ್ಲಿ ಪರ್ದೀಪ್ ನರ್ವಾಲ್ರನ್ನು ಯುಪಿ ಯೋಧಾ ತಂಡ 1.65 ಕೋಟಿಗೆ ಖರೀದಿಸಿತ್ತು.

ಈ ಬಾರಿ ಹಲವು ಆಟಗಾರರು ಕೋಟಿ ಮೊತ್ತಕ್ಕೆ ಹರಾಜಾದರೂ ಇವರೆಲ್ಲರನ್ನು ಮೀರಿಸಿ ಪವನ್ ಸೆಹ್ರಾವತ್ ಬರೋಬ್ಬರಿ 2 ಕೋಟಿ 26 ಲಕ್ಷ ರೂ.ಗೆ ಹರಾಜಾಗಿದ್ದಾರೆ. ಈ ಮೂಲಕ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.



















