Updated on: Jun 13, 2023 | 9:09 AM
ಬೆಂಗಳೂರಿನಲ್ಲಿ ಜೂನ್ 12ರ ಸಂಜೆ ಭಾರಿ ಮಳೆಯಾಗಿದೆ. ವರುಣನ ಆರ್ಭಟಕ್ಕೆ ಜನ ತತ್ತರಿಸಿದ್ದು ಕೆರೆಯಂತಾದ ರಸ್ತೆಗಳಲ್ಲಿ ವಾಹನ ಚಲಾಯಿಸಲು ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದ ವಿಲ್ಸನ್ ಗಾರ್ಡಾನ್, ಶಾಂತಿ ನಗರ, ಕೋರಮಂಗಲ, ಲಾಲ್ ಬಾಗ್, ಮಾರತಹಳ್ಳಿ ಸುತ್ತಮುತ್ತ, ಆಡುಗೋಡಿ ಸುತ್ತ- ಮುತ್ತ ಗುಡುಗು ಸಹಿತ ಮಳೆಯಾಗಿದೆ.
ಮಳೆಯಿಂದಾಗಿ ಬೆಂಗಳೂರಿನಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರಗಳು ಸಂಭವಿಸಿವೆ. ಇಂದಿನಿಂದ ನಾಲ್ಕು ದಿನ ವರುಣಾರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಹಿನ್ನೆಲೆ ರಾಜ್ಯದ ಬಹುತೇಕ ಭಾಗದಲ್ಲಿ ಮಳೆಯಾಗಲಿದ್ದು ಕೆಲವೆಡೆ ಭಾರೀ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಜೂನ್ 13ರ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗಲಿದ್ದು ಬೆಂಗಳೂರು ಸೇರಿ ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ಸಾಧ್ಯತೆ ಇದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಉಡುಪಿ, ಹಾಸನ, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಬಹುತೇಕ ಭಾಗದಲ್ಲಿ ಮಳೆಯಾಗಲಿದೆ.
ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಮಳೆ ಸಂಭವವಿದ್ದು ರಾಜ್ಯದ ಕೆಲವೆಡೆ ಗುಡುಗು, ಮಿಂಚು ಬಿರುಗಾಳಿಯೊಂದಿಗೆ ಮಳೆ ಸುರಿಯಲಿದೆ.
ಕರಾವಳಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಿರುಗಾಳಿ ಎದ್ದಿರುವ ಕಾರಣ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.