
ಶಾರುಖ್ ಖಾನ್ ಅವರನ್ನು ದುಬೈ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಇದರ ಭಾಗವಾಗಿ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಶಾರುಖ್ ಅವರ ಲುಕ್ ನೋಡಿ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಹೊಸ ಗೆಟಪ್ನಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಬಿಂದಾಸ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ಅವರು ಮನರಂಜಿಸಿದ್ದಾರೆ. ನೆಚ್ಚಿನ ನಟನನ್ನು ಕಂಡು ಖುಷಿಪಟ್ಟಿರುವ ಅಭಿಮಾನಿಗಳು ‘ಕಿಂಗ್ ಈಸ್ ಬ್ಯಾಕ್’ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಶಾರುಖ್ ಖಾನ್ ಎಂದರೆ ದುಬೈನಲ್ಲಿನ ಜನರಿಗೂ ಸಖತ್ ಪ್ರೀತಿ. ಅದೇ ರೀತಿ ಶಾರುಖ್ ಅವರಿಗೂ ದುಬೈ ಬಗ್ಗೆ ವಿಶೇಷ ಒಲವು ಇದೆ. ಅಲ್ಲಿನ ಪ್ರವಾಸಿ ತಾಣಗಳು ಅವರಿಗೆ ಇಷ್ಟ. ಅದನ್ನು ಈ ಜಾಹೀರಾತಿನಲ್ಲಿ ತೋರಿಸಲಾಗಿದೆ.

ಶಾರುಖ್ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಬಹಳ ಕಾಲ ಆಗಿದೆ. 2018ರಲ್ಲಿ ತೆರೆಕಂಡ ‘ಝೀರೋ’ ಸಿನಿಮಾದ ಬಳಿಕ ಅವರ ನಟನೆಯ ಯಾವುದೇ ಚಿತ್ರ ಬಿಡುಗಡೆ ಆಗಿಲ್ಲ. ಕಡೇ ಪಕ್ಷ ಈಗ ಜಾಹೀರಾತಿನ ಮೂಲಕವಾದರೂ ಅವರು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.

ಈ ಜಾಹೀರಾತಿನಲ್ಲಿ ದುಬೈನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹಾಡಿ ಹೊಗಳಲಾಗಿದೆ. ಜೊತೆಗೆ, ದುಬೈ ಮಂದಿಗೆ ಶಾರುಖ್ ಬಗ್ಗೆ ಎಷ್ಟು ಅಭಿಮಾನ ಇದೆ ಎಂಬುದನ್ನು ತೋರಿಸಲಾಗಿದೆ.