
ಶಮಿತಾ ಶೆಟ್ಟಿ ಅವರು ‘ಬಿಗ್ ಬಾಸ್ ಒಟಿಟಿ’ ಹಾಗೂ ‘ಹಿಂದಿ ಬಿಗ್ ಬಾಸ್ 15’ರ ಸ್ಪರ್ಧಿಯಾಗಿ ತೆರಳಿದ್ದರು. ಎರಡೂ ಕಡೆಗಳಲ್ಲಿ ಫಿನಾಲೆವರೆಗೆ ಇದ್ದರೂ ಅವರಿಗೆ ಗೆಲುವು ಸಿಕ್ಕಿಲ್ಲ. ಆದರೆ, ಅವರಿಗೆ ಭರಪೂರ ಜನಪ್ರಿಯತೆ ಸಿಕ್ಕಿದೆ. ಅವರಿಗೆ ಈಗ ಸಿನಿಮಾಗಳಿಂದ ಆಫರ್ಗಳು ಬರುತ್ತಿವೆ.

ಶಮಿತಾ ಶೆಟ್ಟಿ ಅವರು ದೀರ್ಘಕಾಲ ಬಿಗ್ ಬಾಸ್ ಮನೆಯಲ್ಲಿ ಕಳೆದು ಬಂದಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ. ದೊಡ್ಮನೆಯಲ್ಲಿ ಹೊರಜಗತ್ತಿನ ಸಂಪರ್ಕ ಇರುವುದಿಲ್ಲ. ಮೊಬೈಲ್ ಬಳಕೆ ಮಾಡೋಕೆ ಸಾಧ್ಯವಾಗುವುದಿಲ್ಲ. ಇದರ ಮಧ್ಯೆ ಹಲವು ಮನಸ್ಥಿತಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು.

ಶಮಿತಾಗೆ ಇದು ನಿಜಕ್ಕೂ ಕಷ್ಟವಾಗಿತ್ತು. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಶಮಿತಾ ಬಿಗ್ ಬಾಸ್ನಲ್ಲಿದ್ದಾಗ ಸಾಕಷ್ಟು ಆ್ಯಂಕ್ಸೈಟಿ ಕಾಡಿತ್ತು. ಮನೆಯಿಂದ ಹೊರ ಬಂದ ನಂತರದಲ್ಲಿ ಅವರು ಥೆರಪಿಗೆ ಒಳಗಾಗುತ್ತಿದ್ದಾರೆ. ಸಂದರ್ಶನದ ವೇಳೆ ಈ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

‘ನಾನು ಮರಳಿ ನನ್ನ ಹಿಂದಿನ ಜೀವನಕ್ಕೆ ಹಿಂತಿರುಗಿದ್ದೇನೆ ಎಂದು ನಾನು ಹೇಳುವುದಿಲ್ಲ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮನೆಯಲ್ಲಿದ್ದಾಗ ಓಡಿ ಬರಬೇಕು ಅನಿಸುತ್ತಿತ್ತು. ನಾನು ಈಗ ಥೆರೆಪಿಗೆ ಒಳಗಾಗುತ್ತಿದ್ದೇನೆ’ ಎಂದಿದ್ದಾರೆ ಶಮಿತಾ.

ಬಿಗ್ ಬಾಸ್ ಮನೆಯಲ್ಲಿ ಶಮಿತಾ ಹಾಗೂ ರಾಕೇಶ್ ಬಾಪಟ್ ಪ್ರೀತಿ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದರು. ಇಬ್ಬರೂ ಶೀಘ್ರವೇ ಮದುವೆ ಆಗುವ ಸಾಧ್ಯತೆ ಇದೆ. ಸದ್ಯ, ಇಬ್ಬರಿಗೂ ಅರ್ಥ ಮಾಡಿಕೊಳ್ಳೋಕೆ ಸಮಯ ಬೇಕು ಎಂದು ಹೇಳಿದ್ದಾರೆ.