ಕೋಲಾರ ಜಿಲ್ಲೆಯಲ್ಲಿ ಹಣ್ಣು-ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದ ರೈತರ ಕಷ್ಟಗಳನ್ನು ನೋಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ದಂಪತಿ ಪವನ್ ಕುಮಾರ್ ಹಾಗೂ ಪ್ರತಿಭಾ ಪುಷ್ಪೋದ್ಯಮ ಮಾಡಲು ನಿರ್ಧರಿಸಿ ಪಾಲಿಹೌಸ್‌ನಲ್ಲಿ ವಿವಿಧ ದೇಶಗಳಲ್ಲಿ ಬೇಡಿಕೆ ಇರುವ ಗುಲಾಬಿ ಹೂವು ಬೆಳೆಯಲು ಶುರುಮಾಡಿದ್ದು, ಈ ಗುಲಾಬಿ ಹೂ ಈಗ ಈ ಸಾಫ್ಟ್‌ವೇರ್ ಎಂಜಿನಿರ್ಗಳ ಬದುಕನ್ನೇ ಬದಲಾಯಿಸಿದೆ.
ಸ್ನೇತಕೋತ್ತರ ಪದವೀದರ ಪವನ್ ಕುಮಾರ್ ಜೊತೆಗೆ ಐಟಿ ಉದ್ಯೋಗಿಯಾಗಿರುವ ಪತ್ನಿ ಪ್ರತಿಭಾ ಜೊತೆಯಾಗಿ 30 ಎಕೆರೆ ಪ್ರದೇಶದಲ್ಲಿ ಗುಲಾಬಿ ಹೂ ಬೆಳೆಯುತ್ತಾ ದಿನನಿತ್ಯ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ವರ್ಷದ 365 ದಿನವೂ ದಿನವೊಂದಕ್ಕೆ 60 ಸಾವಿರ ಗುಲಾಬಿ ಬೆಳೆಯುತ್ತಾರೆ. ಇವರು ಬೆಳೆಯುವ ಗುಲಾಬಿ ಹೂವೊಂದಕ್ಕೆ 6 ರಿಂದ 7 ರೂಪಾಯಿ ಕೊಟ್ಟು ವಿವಿಧ ಹೂವು ಖರೀದಿದಾರರು ಖರೀದಿ ಮಾಡುತ್ತಿದ್ದಾರೆ.
ವರ್ಷದ 2 ಸೀಸನ್ ಮಾತ್ರ ಅಂದ್ರೆ ಆಷಾಢ ಸಮಯದಲ್ಲಿ ಬೇಡಿಕೆ ಸ್ವಲ್ಪ ಕಡಿಮೆಯಾಗುವುದು ಬಿಟ್ಟರೆ, ಉಳಿದಂತೆ ವರ್ಷವಿಡೀ ಕಳೆದ 10 ವರ್ಷಗಳಿಂದ ನಷ್ಟ ಅನ್ನೋದನ್ನೆ ಕಂಡಿಲ್ಲ. ಇನ್ನೂ 30 ಎಕರೆ ಹೂವಿನ ತೋಟವನ್ನ ನಿರ್ವಹಣೆ ಮಾಡಲು 250ಕ್ಕೂ ಹೆಚ್ಚು ಜನರಿದ್ದು ತಮ್ಮ ಶ್ರಮಕ್ಕೂ, ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸುತ್ತಿದ್ದಾರೆ.
ಒಂದು ಗುಲಾಬಿ ಹೂ ಕೆಲವೊಮ್ಮೆ 12 ರಿಂದ 14 ರೂಪಾಯಿಗೆ ಮಾರಾಟವಾದರೆ ಬೇಡಿಕೆ ಇದ್ದಾಗ 18 ರಿಂದ 25 ರೂಪಾಯಿವರೆಗೆ ಮಾರಾಟವಾಗುತ್ತೆ. ಆದರೆ ಇವರು ವರ್ಷ ಪೂರ್ತಿ ಗುಲಾಬಿ ಹೂವನ್ನು ಬೆಳೆದು ಪ್ಯಾಕ್ ಮಾಡಿ 6 ರೂಪಾಯಿಯಂತೆ ಮಾರಾಟ ಮಾಡುತ್ತಾ ಪ್ರತಿನಿತ್ಯ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.
ಬರದ ನಾಡು ಎಂದು ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಗುಲಾಬಿ ಬೆಳೆಯುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸದ್ಯ ಜಿಲ್ಲೆಯಲ್ಲಿ ಒಟ್ಟು 624 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆದ್ರೆ ಸುಮಾರು 70 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಹೂವನ್ನು ಜಿಲ್ಲೆಯ ರೈತರು ಪಾಲಿ ಹೌಸ್‌ನಲ್ಲಿ ಬೆಳೆಯುತ್ತಾರೆ.
ಕೋಲಾರದ ಗುಲಾಬಿ ಹೂವಿಗೆ ದೇಶ, ವಿದೇಶಗಳಲ್ಲೂ ಬಹುಬೇಡಿಕೆ ಇದೆ. ಲೈಟ್ ಪಿಂಕ್, ಆರೆಂಜ್, ಕ್ರೀಮ್ ಕಲರ್ ರೋಸ್, ಎಲ್ಲೋ ರೋಸ್, ತಾಜ್‌ಮಹಲ್, ಅವಲಂಚ್ ವೈಟ್, ಸೇರಿದಂತೆ 10 ಕ್ಕೂ ಹೆಚ್ಚು ಬಗೆಯ ಗುಲಾಬಿ ಹೂ ಗಳನ್ನು ಬೆಳೆದು ನಮ್ಮ ದೇಶದ ವಿವಿಧ ನಗರಗಳಿಗೆ ರಪ್ತು ಮಾಡುತ್ತಾರೆ. ಅಷ್ಟೇ ಅಲ್ಲದೆ ದುಬೈ, ಸಿಂಗಾರಪುರ, ಮಲೇಶಿಯಾ, ಪಿಲಿಪೈನ್ಸ್ ದೇಶಗಳಿಗೂ ರಪ್ತು ತಮಾಡಲಾಗುತ್ತೆ. ಪ್ರತಿ ವರ್ಷ ಫ್ರೆಬ್ರವರಿ ಬಂತೆಂದ್ರೆ ಸಾಕು ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ ಅದರಲ್ಲೂ ನಮ್ಮ ದೇಶಕ್ಕಿಂತ ಬೇರೆ ದೇಶಗಳಲ್ಲೇ ಇದಕ್ಕೆ ಡಿಮ್ಯಾಂಡ್ ಜಾಸ್ತಿ ಇರುತ್ತದೆ. ಇದರಿಂದ ಗುಲಾಬಿ ಹೂವು ಇಲ್ಲಿನ ರೈತರ ಬದುಕನ್ನೇ ಬದಲಾಯಿಸಿದೆ.
ಕಷ್ಟಪಟ್ಟು ಬೆಳೆದ ರೈತರ ಬದುಕನ್ನು ಹಸನು ಮಾಡುವ ಶಕ್ತಿ ಈ ಗುಲಾಬಿ ಹೂವಿಗಿದೆ ಅನ್ನೋದಕ್ಕೆ ಈ ಯುವ ಉದ್ಯಮಿಗಳೇ ಸಾಕ್ಷಿಯಾಗಿದ್ದಾರೆ. ಮುದ್ದಾದ ಮನಸ್ಸುಗಳ ಬೆಸೆಯುವ ಗುಲಾಬಿಯನ್ನು ನಂಬಿದವರಿಗೆ ಆರ್ಥಿಕವಾಗಿ ಶ್ರೀಮಂತರನ್ನಾಗಿ ಕೂಡಾ ಮಾಡುತ್ತದೆ ಅನ್ನೋದಕ್ಕೆ ಈ ದಂಪತಿ ಸಾಕ್ಷಿ.