Kannada News Photo gallery Sri Kshetra Ulavi Channa Basaveshwar Maharathotsava, which has a history of 800 years, was held in grand style today Feb 6th here is a glimpse of it
800 ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಉಳವಿ ಚನ್ನ ಬಸವೇಶ್ವರ ಮಹಾರಥೋತ್ಸವ ಇಂದು(ಫೆ.6) ಅದ್ದೂರಿಯಾಗಿ ನಡೆದಿದ್ದು, ಅದರ ಝಲಕ್ ಇಲ್ಲಿದೆ ನೋಡಿ
TV9 Web | Updated By: ಕಿರಣ್ ಹನುಮಂತ್ ಮಾದಾರ್
Updated on:
Feb 07, 2023 | 10:15 PM
ವಚನ ಕ್ರಾಂತಿಯ ಹರಿಕಾರ ಬಸವಣ್ಣ ಸ್ಥಾಪಿಸಿದ ಶ್ರೀ ಕ್ಷೇತ್ರ ಉಳವಿ ಚನ್ನ ಬಸವೇಶ್ವರ ಕ್ಷೇತ್ರದ ಮಹಾರಥೋತ್ಸವ ಇಂದು ಸಂಭ್ರಮದಿಂದ ನೆರವೇರಿತು. ಹರ ಹರ ಮಹಾದೇವ, ಅಡಕೇಶ್ವರ, ಮಡಕೇಶ್ವರ, ಉಳವಿ ಚೆನ್ನ ಬಸವೇಶ್ವರ ಎನ್ನುತ್ತಾ ತೇರನ್ನು ಎಳೆಯುವ ಮೂಲಕ ಹಾಗೂ ಬಾಳೆಹಣ್ಣು, ಖರ್ಜೂರ, ಹಣವನ್ನು ಅರ್ಪಿಸುವ ಮೂಲಕ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
1 / 8
ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಉಳವಿ ಚನ್ನ ಬಸವೇಶ್ವರ ಮಹಾರಥೋತ್ಸವ ಇಂದು(ಫೆ.6) ಅತ್ಯಂತ ಸಂಭ್ರಮ, ಸಡಗರದಲ್ಲಿ ನೆರವೇರಿತು. ಎರಡು ವರ್ಷಗಳ ಕಾಲ ಕೊರೊನಾ ಕಾಟದಿಂದ ಉಳವಿ ಜಾತ್ರೆ ಕಳೆಗುಂದಿತ್ತಾದ್ರೂ ಇಂದು ಮಾತ್ರ ಸುಮಾರು 5-6 ಲಕ್ಷ ಭಕ್ತರು ಜಯ ಘೋಷ ಹಾಕುತ್ತಾ ವಿಶಾಲವಾದ ರಥ ಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು.
2 / 8
ಉಳವಿ ಜಾತ್ರೆಯ ಹಿನ್ನೆಲೆ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ 150 ಮೀಟರ್ ಅಗಲ, ಅರ್ಧ ಕಿಲೋಮೀಟರ್ ಉದ್ದದ ಜಿಲ್ಲೆಯಲ್ಲಿಯೇ ಅತ್ಯಂತ ವಿಶಾಲವಾದ ರಥ ಬೀದಿ ನಿರ್ಮಾಣ ಮಾಡಲಾಗಿದೆ. ಈ ರಥ ಬೀದಿಯಲ್ಲಿ ಶೃಂಗರಿಸಿದ ರಥವನ್ನು ಮಾಘಾ ನಕ್ಷತ್ರದ ಶುಭ ಸಂದರ್ಭದಲ್ಲಿ ರಥ ಕಾಣಿಕೆ ಅರ್ಪಿಸಿ, ರಥ ಎಳೆದು ಸಂಭ್ರಮಿಸಿದರು.
3 / 8
ಕಾರವಾರದಿಂದ ಸುಮಾರು 75 ಕಿ.ಮೀ.ದೂರದಲ್ಲಿರುವ ಉಳವಿ ಕ್ಷೇತ್ರ ಲಿಂಗಾಯತ ಸಮುದಾಯದ ಜನರ ಒಂದು ಪ್ರಮುಖ ಯಾತ್ರಾಸ್ಥಳವಾಗಿದ್ದು, ಈ ಸಮುದಾಯದ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿದೆ. ಕಲ್ಯಾಣ ಕ್ರಾಂತಿಯ ಬಳಿಕ ವಚನಗಳನ್ನು ಸಮಾಜಕ್ಕೆ ಸಾರುತ್ತ ಸಂಚಾರ ಕೈಗೊಂಡ ಚನ್ನಬಸವಣ್ಣನವರು 12ನೇ ಶತಮಾನದಲ್ಲಿ ತಾಯಿ ಮತ್ತು ಸೋದರಿ ಅಕ್ಕ ನಾಗಲಾಂಬಿಕೆ ಜತೆ ಉಳವಿಗೆ ಬಂದು ಅನುಷ್ಠಾನ ನಡೆಸಿದ್ದು, ಬಳಿಕ ಇಲ್ಲಿಯೇ ನಿರ್ವಿಕಲ್ಪ ಸಮಾಧಿ ಹೊಂದಿದರು ಎಂಬ ಇತಿಹಾಸವಿದೆ.
4 / 8
ಈ ಹಿನ್ನೆಲೆಯಲ್ಲಿ ಉಳವಿ ಚನ್ನಬಸವೇಶ್ವರ ದೇವಾಲಯ ಮತ್ತು ಜಾತ್ರೆ ಮಹತ್ವ ಪಡೆದಿದೆ. ಕ್ಷೇತ್ರಕ್ಕೆ ಹರಕೆ ಕಟ್ಟಿಕೊಂಡು ಬರುವ ಭಕ್ತರ ಮನೋಕಾಮನೆಗಳು ಇಲ್ಲಿಗೆ ಭೇಟಿ ನೀಡಿದ ಬಳಿಕ ಈಡೇರುತ್ತದೆ. ರೈತರು ಹಳ್ಳನ್ನು ತೇರಿಗೆ ಕಟ್ಟುತ್ತಿದ್ದು, ಇದರ ಮೇಲೆ ತೇರಿನ ಚಕ್ರ ಎಳೆದುಬಂದ ನಂತರ ಬಿತ್ತಲು ಅಣಿಯಾದ ಬೀಜವಾಗಿ
ಮಾರ್ಪಾಡಾಗುವುದು ಇಲ್ಲಿನ ವಿಶೇಷತೆ.
5 / 8
ಉಳವಿ ಜಾತ್ರೆ ಚಕ್ಕಡಿ ಜಾತ್ರೆಯಂತಲೂ ಖ್ಯಾತಿ ಪಡೆದಿದೆ. ನೂರಾರು ಕಿ.ಮೀ.ದೂರದಿಂದ ರೈತರು ಚಕ್ಕಡಿಯಲ್ಲಿ ತಾವು ಬೆಳೆದ ಬೆಳೆಗಳ ಒಂದು ಪಾಲನ್ನು ಕ್ಷೇತ್ರಕ್ಕೆ ದಾನವಾಗಿ ನೀಡುವುದಲ್ಲದೇ, ಇಲ್ಲಿಗೆ ಬಂದು ತಮ್ಮ ಜಾನುವಾರುಗಳಿಗೆ ಬಸವಣ್ಣನ ದರ್ಶನ ಮಾಡಿಸ್ತಾರೆ. ಇದರಿಂದ ಬಸವಣ್ಣನ ಶಕ್ತಿ ತುಂಬುತ್ತದೆ ಅನ್ನೋದು ರೈತರ ನಂಬಿಕೆ.
6 / 8
ಧಾರವಾಡ, ಬೆಳಗಾವಿ, ಕಿತ್ತೂರು, ವಿಜಾಪುರ, ಕಲಬುರ್ಗಿ, ಗದಗ, ಕೊಪ್ಪಳ, ಸೇರಿದಂತೆ ವಿವಿಧೆಡೆಯಿಂದ ವಾರಗಳ ಮೊದಲೇ ಜಾತ್ರೆಗೆ ಬಂದು ಸೇರಿದ್ದ ಬಸವಣ್ಣನ ಭಕ್ತರು ಚನ್ನ ಬಸವಣ್ಣನ ದರ್ಶನ ಪಡೆದರು. ಎತ್ತುಗಳನ್ನು ಶೃಂಗರಿಸಿ ದೇವರ ಮುಂದೆ ತಂದು ಪೂಜಿಸಿದರು. ಜಾತ್ರೆ ಆರಂಭಕ್ಕೂ ಮೂರ್ನಾಲ್ಕು ದಿನ ಮೊದಲೇ ಭಕ್ತರು ತಮ್ಮ ಊರುಗಳಿಂದ ಕುಟುಂಬ ಸಮೇತರಾಗಿ ಚಕ್ಕಡಿಯಲ್ಲಿ ಉಳವಿಗೆ ಆಗಮಿಸಿ ಜಾತ್ರೆಯ ದಿನ ಉಳವಿ ತಲುಪುತ್ತಾರೆ.
7 / 8
ಉಳವಿಯ ಬಯಲುಗಳಲ್ಲಿ ಟೆಂಟ್ ಹೂಡಿಕೊಂಡು ವಾಸ ಮಾಡುತ್ತಾರೆ. ದೇವಸ್ಥಾನ ಮಂಡಳಿ ಇಂಥ ಭಕ್ತರಿಗೆ ನೀರು ಊಟದ ವ್ಯವಸ್ಥೆ ಕಲ್ಪಿಸುತ್ತದೆ. ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಹರಕೆ ಪೂರೈಸಲು ಉರುಳುಗಾಯಿ, ತುಲಾಭಾರ, ಜೋಳ ಸಮರ್ಪಣೆ, ದೀಡ ನಮಸ್ಕಾರ ಹಾಕಿದಲ್ಲದೇ, ದಾಸೋಹ ಸೇರಿದಂತೆ ವಿವಿಧ ಸೇವೆ ಸಲ್ಲಿಸಿದರು.
8 / 8
ಒಟ್ಟಿನಲ್ಲಿ ಎರಡು ವರ್ಷಗಳ ಕಾಲ ಕಾಣಿಸಿಕೊಂಡ ಕೊರೊನಾ ಕಾಟದ ಬಳಿಕ ಈ ಬಾರಿ ಅದ್ಧೂರಿಯಿಂದ ಉಳವಿಯ ಚನ್ನಬಸವೇಶ್ವರನ ಜಾತ್ರಾ ಮಹೋತ್ಸವ ನಡೆದಿದ್ದು, ಲಕ್ಷಾಂತರ ಭಕ್ತರು ರಥಾರೂಢನಾದ ಬಸವೇಶ್ವರನನ್ನು ಕಣ್ತುಂಬಿಕೊಂಡು ಮನೋಕಾಮನೆಗಳನ್ನು ದೇವರ ಮುಂದಿರಿಸಿದ್ದಲ್ಲದೇ, ರಥೋತ್ಸವದಲ್ಲಿ ಭಾಗಿಯಾಗಿ ಸಂತೋಷಪಟ್ಟರು.
Published On - 10:14 pm, Tue, 7 February 23