- Kannada News Photo gallery Vinesh Phogat not get 16 crore rupees for Prize Money husband somvir rathee clarify
Vinesh Phogat: ವಿನೇಶ್ ಫೋಗಟ್‌ಗೆ 16 ಕೋಟಿ ರೂ. ಬಹುಮಾನ? ಸ್ಪಷ್ಟನೆ ನೀಡಿದ ಪತಿ ಸೋಮವೀರ್
Vinesh Phogat: ಸಮಾರಂಭದಲ್ಲಿ ಚಿನ್ನದ ಪದಕದ ಹೊರತಾಗಿ, ವಿನೇಶ್ ಫೋಗಟ್‌ಗೆ ಗ್ರಾಮಸ್ಥರು ಹಾಗೂ ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾವಿರಾರು ಜನರು ಬಹುಮಾನದ ಸುರಿಮಳೆಗೈದರು. ಏತನ್ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ವಿವಿಧ ಸಂಸ್ಥೆಗಳು ವಿನೇಶ್ ಫೋಗಟ್‌ಗೆ ಬಹುಮಾನದ ಹಣವನ್ನು ನೀಡಿರುವುದಾಗಿ ಮಾಹಿತಿ ಇದೆ.
Updated on: Aug 19, 2024 | 4:04 PM

ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 50 ಕೆಜಿ ಮಹಿಳೆಯರ ಕುಸ್ತಿ ಸ್ಪರ್ಧೆಯ ಫೈನಲ್ ಪಂದ್ಯಕ್ಕೂ ಮುನ್ನ ಅಧಿಕ ತೂಕ ಹೊಂದಿದ್ದ ಕಾರಣಕ್ಕಾಗಿ ಫೈನಲ್ ಸುತ್ತಿನಿಂದ ಅನರ್ಹಗೊಂಡಿದ್ದ ಭಾರತದ ಸ್ಟಾರ್ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಶನಿವಾರ ಭಾರತಕ್ಕೆ ವಾಪಸ್ಸಾಗಿದ್ದರು. ವಿನೇಶ್ ಅವರಿಗೆ ವಿಮಾನ ನಿಲ್ದಾಣದಿಂದ ಅವರ ಗ್ರಾಮದವರೆಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ತನಗೆ ಸಿಕ್ಕ ಭವ್ಯ ಸ್ವಾಗತದಿಂದಾಗಿ ವಿನೇಶ್ ಫೋಗಟ್ ತೀವ್ರ ಭಾವುಕರಾಗಿದ್ದರು. ವಿನೇಶ್ ಫೋಗಟ್ ಅವರನ್ನು ಸ್ವಾಗತಿಸಲು ಹರಿಯಾಣದಿಂದ ಅಪಾರ ಸಂಖ್ಯೆಯ ಜನರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲದೆ ರಸ್ತೆಯೂದಕ್ಕೂ ವಿನೇಶ್ ಫೋಗಟ್‌ಗೆ ಜನರಿಂದ ಜೈಕಾರಗಳ ಸ್ವಾಗತ ಸಿಕ್ಕಿತ್ತು. ಇದರಿಂದ ವಿನೇಶ್ ಫೋಗಟ್ ಅವರು ದೆಹಲಿ ವಿಮಾನ ನಿಲ್ದಾಣದಿಂದ ಅವರ ಮನೆಗೆ ತಲುಪಲು ಬರೋಬ್ಬರಿ 13 ಗಂಟೆಗಳು ಬೇಕಾಯಿತು.

ಕೊನೆಗೂ ತಮ್ಮ ಗ್ರಾಮವನ್ನು ತಲುಪಿದ ವಿನೇಶ್ ಫೋಗಟ್ ಅವರನ್ನು ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಅದ್ಧೂರಿ ಸಮಾರಂಭ ಏರ್ಪಡಿಸಿ ವಿನೇಶ್ ಫೋಗಟ್ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಈ ಗೌರವವನ್ನು ಸ್ವೀಕರಿಸಿದ ವಿನೇಶ್ ಫೋಗಟ್ ತೀವ್ರ ಭಾವುಕರಾದರು.

ಅಲ್ಲದೆ ಈ ಸಮಾರಂಭದಲ್ಲಿ ಚಿನ್ನದ ಪದಕದ ಹೊರತಾಗಿ, ವಿನೇಶ್ ಫೋಗಟ್‌ಗೆ ಗ್ರಾಮಸ್ಥರು ಹಾಗೂ ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾವಿರಾರು ಜನರು ಬಹುಮಾನದ ಸುರಿಮಳೆಗೈದರು. ಏತನ್ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ವಿವಿಧ ಸಂಸ್ಥೆಗಳು ವಿನೇಶ್ ಫೋಗಟ್‌ಗೆ ಬಹುಮಾನದ ಹಣವನ್ನು ನೀಡಿರುವುದಾಗಿ ಮಾಹಿತಿ ಇದೆ.

ಈ ಪೋಸ್ಟ್ ಪ್ರಕಾರ, ವಿನೇಶ್ ಫೋಗಟ್ ಅವರಿಗೆ ಅಂತರರಾಷ್ಟ್ರೀಯ ಜಾಟ್ ಮಹಾಸಭಾ, ಹರಿಯಾಣ ಟ್ರೇಡ್ ಆರ್ಗನೈಸೇಶನ್ ಮತ್ತು ಪಂಜಾಬ್ ಜಾಟ್ ಅಸೋಸಿಯೇಷನ್ ತಲಾ 2 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ನೀಡಿದೆ. ಇದಲ್ಲದೆ ಒಟ್ಟಾರೆಯಾಗಿ ವಿನೇಶ್ ಅವರು 16.30 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಪಡೆದಿದ್ದಾರೆ ಎಂದು ಪೋಸ್ಟ್ನಲ್ಲಿ ಉಲ್ಲೇಖ ಮಾಡಲಾಗಿದೆ.

ಆದರೆ ಈ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿರುವ ವಿನೇಶ್ ಫೋಗಟ್ ಅವರ ಪತಿ ಸೋಮವೀರ್ ರಾಠಿ, ‘ವಿನೇಶ್ ಫೋಗಟ್ ಈ ಕೆಳಗಿನ ಸಂಸ್ಥೆ, ಉದ್ಯಮಿ, ಕಂಪನಿ ಮತ್ತು ಪಕ್ಷಗಳಿಂದ ಯಾವುದೇ ರೀತಿಯ ಹಣವನ್ನು ಪಡೆದಿಲ್ಲ. ನೀವೆಲ್ಲರೂ ನಮ್ಮ ಹಿತೈಷಿಗಳು, ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ. ಇದರಿಂದ ನಮಗೆ ಖಂಡಿತ ಹಾನಿಯಾಗುತ್ತದೆ. ಸಾಮಾಜಿಕ ಮೌಲ್ಯಗಳಿಗೂ ಧಕ್ಕೆಯಾಗುತ್ತದೆ. ಸುಲಭವಾಗಿ ಜನಪ್ರಿಯತೆಯನ್ನು ಪಡೆಯುವ ಸಲುವಾಗಿ ಹೀಗೆಲ್ಲ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.




