- Kannada News Photo gallery wfi president brij bhushan sharan singh to be sacked his post after ayodhya meeting says reports
ಲೈಂಗಿಕ ದೌರ್ಜನ್ಯ ಆರೋಪ; ಕುಸ್ತಿ ಫೆಡರೇಷನ್ ಅಧ್ಯಕ್ಷರ ತಲೆದಂಡ ಸಾಧ್ಯತೆ
ವರದಿಗಳ ಪ್ರಕಾರ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದು, ಸ್ವತಃ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರೇ ರಾಜೀನಾಮೆ ನೀಡದಿದ್ದರೆ ಫೆಡರೇಶನ್‌ನಿಂದ ರಾಜೀನಾಮೆ ಕೇಳಲಾಗುವುದು ಎಂದು ತಿಳಿದುಬಂದಿದೆ.
Updated on:Jan 19, 2023 | 5:23 PM

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ತಲೆದಂಡವಾಗುವಂತಹ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕುಸ್ತಿ ಫೆಡರೇಶನ್ ಅಧ್ಯಕ್ಷ ವಿರುದ್ಧ ಖ್ಯಾತ ಕುಸ್ತಿಪಟುಗಳು ಗಂಭೀರ ಆರೋಪ ಹೊರಿಸಿದ್ದು, ಇದೀಗ ಬ್ರಿಜ್ ಭೂಷಣ್ ಅವರನ್ನು ಡಬ್ಲ್ಯುಎಫ್ಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬಹುದು ಎಂಬ ಸುದ್ದಿ ಹರಿದಾಡಲಾರಂಭಿಸಿದೆ.

ವಾಸ್ತವವಾಗಿ, ನಿನ್ನೆಯಿಂದ ಅಂದರೆ, ಜನವರಿ 18 ರಿಂದ ಭಾರತದ ಕುಸ್ತಿ ಒಕ್ಕೂಟದ ವಿರುದ್ಧ ಆರೋಪ ಹೊರಿಸಿ ಭಾರತದ ಎಲ್ಲಾ ಅಗ್ರ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈಗ ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಕ್ರಮಕ್ಕೆ ಮುಂದಾಗಿರುವ ಕ್ರೀಡಾ ಸಚಿವಾಲಯ ಜನವರಿ 22 ರಂದು ಅಯೋಧ್ಯೆಯಲ್ಲಿ ಭಾರತದ ಕುಸ್ತಿ ಫೆಡರೇಶನ್‌ನ ಎಜಿಎಂ ಮತ್ತು ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆಯಲಾಗಿದೆ.

ವರದಿಗಳ ಪ್ರಕಾರ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದು, ಸ್ವತಃ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರೇ ರಾಜೀನಾಮೆ ನೀಡದಿದ್ದರೆ ಫೆಡರೇಶನ್‌ನಿಂದ ರಾಜೀನಾಮೆ ಕೇಳಲಾಗುವುದು ಎಂದು ತಿಳಿದುಬಂದಿದೆ.

ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಮೇಲೆ ಲೈಂಗಿಕ ಶೋಷಣೆಯ ಗಂಭೀರ ಆರೋಪವನ್ನು ವಿನೇಶ್ ಫೋಗಟ್ ಹೊರಿಸಿದ್ದು, ಇದಕ್ಕೆ ಭಾರತದ ಖ್ಯಾತ ಕುಸ್ತಿಪಟುಗಳು ಧನಿಗೂಡಿಸಿದ್ದರು. ಜೊತೆಗೆ ಈ ಸಮಸ್ಯೆ ಬಗ್ಗೆಹರಿಸಲು ಪ್ರಧಾನಿ ಮೋದಿಯವರು ಮಧ್ಯಸ್ಥಿಕೆವಹಿಸಬೇಕು ಎಂದು ಆಗ್ರಹಿಸಿದ್ದರು.

ಆದರೆ ಕುಸ್ತಿಪಟುಗಳು, ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರೀಡಾ ಸಚಿವಾಲಯಕ್ಕೆ ನೀಡಿರುವ ಲಿಖಿತ ದೂರಿನಲ್ಲಿ ಎಲ್ಲಿಯೂ ಲೈಂಗಿಕ ಕಿರುಕುಳದ ಉಲ್ಲೇಖವಿಲ್ಲ ಎಂಬುದು ತಿಳಿದುಬಂದಿದೆ.
Published On - 5:23 pm, Thu, 19 January 23
