ಚಿಕ್ಕಬಳ್ಳಾಪುರ (chikkaballapur): ಅದು ರಾಜಧಾನಿಗೆ ಕೂಗಳತೆಯಲ್ಲಿರುವ ಜಿಲ್ಲೆ. ಅಲ್ಲಿನ ಸ್ಥಳೀಯ ಶಾಸಕರು, ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರು ಸಹ. ಆದ್ರೂ ಕೂಡ ದಶಕಗಳಿಂದ ಅದೊಂದು ಸಮಸ್ಯೆ ಮಾತ್ರ ಬಗೆ ಹರಿದಿಲ್ಲ. ಅಲ್ಲಿಯ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಹೋಗಿ-ಬರಬೇಕು. ಸ್ವಲ್ಪ ಯಾಮಾರಿದ್ರೆ ಅಲ್ಲಿಯ (Gidnahalli) ವಿದ್ಯಾರ್ಥಿಗಳ ಬದುಕು ಮೂರಾಬಟ್ಟೆಯಾಗುತ್ತದೆ.
ಸಮಸ್ಯೆ ಎಲ್ಲಿದೆ, ಏನು ಸಮಸ್ಯೆ? ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ದೊಡ್ಡಕಿರುಗುಂಬಿಮ ಚಿಕ್ಕಕಿರುಗುಂಬಿ, ಎಲೇಹಳ್ಳಿ ಹಾಗೂ ಗಿಡ್ನಹಳ್ಳಿ ಎನ್ನುವ ಗ್ರಾಮಗಳಿವೆ. ದೊಡ್ಡಕಿರುಗುಂಬಿ, ಚಿಕ್ಕಕಿರುಗುಂಬಿ ಹಾಗೂ ಎಲೇಹಳ್ಳಿ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರುಗಳು ಗಿಡ್ನಹಳ್ಳಿ ಗ್ರಾಮ ಹಾಗೂ ಗಿಡ್ನಹಳ್ಳಿ ಗ್ರಾಮದಲ್ಲಿರುವ ಹೈಸ್ಕೂಲ್ ಗೆ ಬರುತ್ತಾರೆ.
ಆದ್ರೆ ಗಿಡ್ನಹಳ್ಳಿ ಗೇಟ್ ಹಾಗೂ ಗ್ರಾಮಕ್ಕೆ ಬರುವ ಮಧ್ಯೆ ಕೆರೆ ಕಾಲುವೆಯೊಂದು ಇದೆ. ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ಕೋಡಿ ಹರಿಯುತ್ತದೆ. ಇದ್ರಿಂದ ಇರುವ ರಸ್ತೆಯನ್ನು ಕೆರೆಯ ನೀರು ನುಂಗಿ ಹಾಕಿದೆ. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕೆರೆ ಕಾಲುವೆಯನ್ನು ದಾಟಿಕೊಂಡು ಹೋಗಬೇಕು. ಇದರಿಂದ ಸಮಸ್ಯೆ ಎದುರಾಗಿದೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಫುರ)
ಸೇತುವೆಗಾಗಿ ಪ್ರತಿಭಟನೆ ನಡೆಸಿದ್ದರು: ಈ ಮರದ ಸೇತುವೆಯ ಬದಲು ಅದೇ ಜಾಗದಲ್ಲಿ ಶಾಶ್ವತ ಕಾಂಕ್ರೀಟ್ ಸೇತುವೆ ಮಾಡಿಕೊಡುವಂತೆ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ್ದರು. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿ ಕೊಡಬೇಕಿದೆ
ಪರ್ಯಾಯ ರಸ್ತೆ ಇದೆ ಆದ್ರೆ ಇದೆ ಸೇತುವೆ ಮೂಲಕ ಸಂಚಾರ: ದೊಡ್ಡಕಿರುಗುಂಬಿ, ಚಿಕ್ಕಕಿರುಗುಂಬಿ, ಎಲೇಹಳ್ಳಿ ಗ್ರಾಮಗಳಿಂದ ಗಿಡ್ನಹಳ್ಳಿ ಗೇಟ್ ಹಾಗೂ ಶಾಲೆಗೆ ಬರಲು ಪರ್ಯಾವಾಗಿ ರಸ್ತೆ ಇದೆ.
ಆದ್ರೆ ಆ ರಸ್ತೆಯ ಮೂಲಕ ಗಿಡ್ನಹಳ್ಳಿ ಗೇಟ್ ಗೆ ಬರಲು 6 ಕೀಲೋ ಮೀಟರ್ ದೂರವಾಗುತ್ತದೆ. ರಸ್ತೆ ಇದ್ದರೂ ಸಮರ್ಪಕ ಬಸ್ ಹಾಗೂ ಸಾರಿಗೆ ಸಂಚಾರ ಇಲ್ಲ. ಇದ್ರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮರದ ಸೇತುವೆ ಮೇಲೆ ಸಾಗುತ್ತಿದ್ದಾರೆ.
ಕಾಲುವೆಗೆ ಮರದ ತುಂಡುಗಳನ್ನು ಹಾಕಿ ಸರ್ಕಸ್! ದೊಡ್ಡಕಿರುಗುಂಬಿ, ಚಿಕ್ಕಕಿರುಗುಂಬಿ, ಎಲೇಹಳ್ಳಿ ಗ್ರಾಮಗಳಿಂದ ಗಿಡ್ನಹಳ್ಳಿ ಗ್ರಾಮದ ಬರುವ ಮಧ್ಯೆ ನೀರಿನ ಕಾಲುವೆ ಇರುವ ಕಾರಣ ಸ್ಥಳೀಯರು ನೀಲಗಿರಿ ಮರಗಳನ್ನು ಅಡ್ಡ ಕಟ್ಟಿ ತಾತ್ಕಾಲಿಕ ಮರದ ಸೇತುವೆ ನಿರ್ಮಾಣ ಮಾಡಿದ್ದಾರೆ. ಇದ್ರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅನಿವಾರ್ಯವಾಗಿ ಜೋತಾಡುವ ಮರದ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರೆ... ನೀರಿನಲ್ಲಿ ಬಿದ್ದು ಒದ್ದಾಡುವ ಪರಿಸ್ಥಿತಿ ಎದುರಾಗಿದೆ.
Published On - 4:58 pm, Thu, 19 January 23