‘ರಾಕಿಂಗ್ ಸ್ಟಾರ್’ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಕುಟುಂಬದ ಅನೇಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದುಂಟು. ಇಂಥ ಹಲವು ಕ್ಯೂಟ್ ಫೋಟೋಗಳನ್ನು ಸೆರೆ ಹಿಡಿದಿದ್ದು ನಿರ್ದೇಶಕ ನಾಗರಾಜ್ ಸೋಮಯಾಜಿ ಅವರ ತಂಡ. ಈ ಟೀಮ್ ಎಂದರೆ ಹಲವು ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚು.
ರಂಗಭೂಮಿಯಿಂದ ಬಂದ ನಾಗರಾಜ್ ಸೋಮಯಾಜಿ ಅವರಿಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿಯಿದ್ದು ‘ದಿ ಬೆಸ್ಟ್ ಆಕ್ಟರ್' ಎಂಬ 45 ನಿಮಿಷದ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನೂ ಸಾಬೀತು ಪಡಿಸಿದ್ದಾರೆ. ನಿರ್ಮಾಪಕನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಫೋಟೋಗ್ರಫಿಯಲ್ಲಿ ಅವರ ಸಖತ್ ಆಸಕ್ತಿ ಹೊಂದಿದ್ದು, ‘ಫೋಕಸ್ ಫೋಟೋಗ್ರಫಿ ಸರ್ವಿಸ್' ಎಂಡ ತಂಡವನ್ನು ಮುನ್ನಡೆಸುತ್ತಿದ್ದಾರೆ.
ರಮೇಶ್ ಅರವಿಂದ್ ಅವರ ಪರ್ಸನಲ್ ಫೋಟೋಶೂಟ್, ಅವರ ಮಗಳ ರಿಸೆಪ್ಷನ್, ಯಶ್-ರಾಧಿಕಾ ಫ್ಯಾಮಿಲಿ ಕಾರ್ಯಕ್ರಮದ ಫೋಟೋಗಳು, ನಿಖಿಲ್ ಕುಮಾರಸ್ವಾಮಿ ಎಂಗೇಜ್ಮೆಂಟ್, ಶ್ರೀರಾಮುಲು ಮಗಳ ಎಂಗೇಜ್ಮೆಂಟ್, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಹಲವು ಇವೆಂಟ್ ಸೇರಿ ಅನೇಕ ಸುಂದರ ಕ್ಷಣಗಳನ್ನು ಈ ತಂಡ ಸೆರೆ ಹಿಡಿದಿದೆ.
ನಾಗರಾಜ್ ಸೋಮಯಾಜಿ ಅವರ ಈ ಫೋಟೋಗ್ರಫಿ ತಂಡಕ್ಕೆ ಈಗ 7 ವರ್ಷಗಳನ್ನು ಪೂರೈಸಿದ ಖುಷಿ ಇದೆ. ‘ಸಂಚಾರಿ' ರಂಗಭೂಮಿಯಿಂದ ಬಂದು, ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತ, ಫೋಟೋಗ್ರಫಿಯಲ್ಲೂ ಅವರು ಒಂದೊಂದೇ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದಾರೆ.
‘ನಮ್ಮ ತಂಡ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದೆ. ನಮ್ಮ ಕೆಲಸವನ್ನು ನೋಡಿ ಡಿಮ್ಯಾಂಡ್ ಹೆಚ್ಚಿದೆ. ಇದು ತುಂಬ ಖುಷಿಯ ಸಂಗತಿ’ ಎಂದು ನಾಗರಾಜ್ ಸೋಮಯಾಜಿ ಹೇಳಿದ್ದಾರೆ. ಅವರ ತಂಡ ಕ್ಲಿಕ್ಕಿಸಿದ ಫೋಟೋಗಳಿಗೆ ಅಭಿಮಾನಿಗಳಿಂದ ಮತ್ತು ಸೆಲೆಬ್ರಿಟಿಗಳಿಂದ ಸಾಕಷ್ಟು ಮೆಚ್ಚುಗೆ ಸಿಗುತ್ತಿದೆ.