
ನಟ ಯಶ್, ತಮ್ಮ ಫಿಟ್ನೆಸ್ ಟ್ರೈನರ್ ಕಿಟ್ಟಿ ಅಲಿಯಾಸ್ ಪಾನಿಪುರಿ ಕಿಟ್ಟಿಯ ಹೊಸ ಜಿಮ್ ಉದ್ಘಾಟನೆ ಮಾಡಿದ್ದಾರೆ.

ಪಾನಿಪುರಿ ಕಿಟ್ಟಿ ಹಲವು ವರ್ಷಗಳಿಂದಲೂ ಯಶ್ರ ಪರ್ಸನಲ್ ಟ್ರೈಲರ್ ಆಗಿದ್ದಾರೆ. ಇದೀಗ ಕಿಟ್ಟಿ ಕಿಟ್ಟೀಸ್ ಮಸಲ್ ಪ್ಲಾನೆಟ್ ಹೆಸರಿನ ಹೊಸ ಜಿಮ್ ತೆರೆದಿದ್ದಾರೆ.

ನಟ ಯಶ್ ಆಗಮಿಸಿ ಉದ್ಘಾಟನೆ ನೆರವೇರಿಸಿದ್ದಾರೆ. ಈ ಸಮಯದಲ್ಲಿ ನಟ ಪ್ರೇಮ್ ಹಾಗೂ ಅಜಯ್ ರಾವ್ ಅವರುಗಳ ಸಹ ಜೊತೆಗಿದ್ದರು.

ಉದ್ಘಾಟನೆ ಕಾರ್ಯಕ್ರಮದ ಬಳಿಕ ತಮ್ಮ ಹಾಗೂ ಕಿಟ್ಟಿಯ ಬಂಧದ ಬಗ್ಗೆ, ಕಿಟ್ಟಿಯ ಶಿಸ್ತಿನ ಬಗ್ಗೆ, ಫಿಟ್ನೆಸ್ ಮೇಲಿರುವ ಅವರ ಕಾಳಜಿ ಬಗ್ಗೆ ಯಶ್ ಮಾತನಾಡಿದರು.

‘ನಾನು ಚೆನ್ನಾಗಿ ಕಂಡರು ಅದಕ್ಕೆ ಕಿಟ್ಟಿ ಕಾರಣ ಒಂದೊಮ್ಮೆ ನಾನು ಚೆನ್ನಾಗಿ ಕಾಣದಿದ್ದರೂ ಅದಕ್ಕೆ ಕಿಟ್ಟಿ ಕಾರಣ’ ಎಂದು ನಗೆ ಚಟಾಕಿ ಹಾರಿಸಿದರು ಯಶ್.

ಇದೇ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಯಶ್, ತಮ್ಮ ಮುಂದಿನ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಮಾತನಾಡಿ, ಆದಷ್ಟು ಬೇಗ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದರು.

ಈ ಬಾರಿಯೂ ಲೋಕಸಭೆ ಚುನಾವಣೆಗೆ ಮಂಡ್ಯದಲ್ಲಿ ಪ್ರಚಾರ ಮಾಡುತ್ತೀರ ಎಂಬ ಪ್ರಶ್ನೆಗೆ ರಾಜಕೀಯದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ, ನನ್ನ ಗುರಿ ಬೇರೆಯೇ ಇದೆ ಎಂದರು.