8 Years Of Modi Government: ಭಾರತದ ರಾಜಕೀಯದಲ್ಲಿ ಮೋದಿಯಿಂದ ಹೊಸ ಇತಿಹಾಸ, 30 ವರ್ಷದ ಬಳಿಕ ಬಹುಮತದ ಸರ್ಕಾರ ಆಸ್ತಿತ್ವಕ್ಕೆ

8 Years Of Modi Government: ಭಾರತದ ರಾಜಕೀಯದಲ್ಲಿ ಮೋದಿಯಿಂದ ಹೊಸ ಇತಿಹಾಸ, 30 ವರ್ಷದ ಬಳಿಕ ಬಹುಮತದ ಸರ್ಕಾರ ಆಸ್ತಿತ್ವಕ್ಕೆ
ಭಾರತದ ರಾಜಕೀಯದಲ್ಲಿ ಮೋದಿಯಿಂದ ಹೊಸ ಇತಿಹಾಸ, 30 ವರ್ಷದ ಬಳಿಕ ಬಹುಮತದ ಸರ್ಕಾರ ಆಸ್ತಿತ್ವಕ್ಕೆ

PM Narendra Modi: ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಇಂದಿಗೆ ಎಂಟು ವರ್ಷ ಪೂರ್ತಿಯಾಗಿದೆ. ಗುಜರಾತ್‌ನ ವಡ್ ನಗರದ ಗಲ್ಲಿಯ ಓರ್ವ ಬಾಲಕ ದೇಶದ ಪ್ರಧಾನಿ ಹುದ್ದೆಗೇರಿದ್ದೇ ಒಂದು ರೋಚಕ ಕಥೆ. ಮೋದಿ ರಾಜಕೀಯ ಜೀವನ ಹೇಗಿತ್ತು? ಹಂತ ಹಂತವಾಗಿ ಮೋದಿ ರಾಜಕೀಯವಾಗಿ ಮೇಲೇರಿದ್ದು ಹೇಗೆ? ಎನ್ನುವುದರ ಫುಲ್ ಡೀಟೈಲ್ ವರದಿ ಇಲ್ಲಿದೆ ನೋಡಿ.

S Chandramohan

| Edited By: sadhu srinath

May 26, 2022 | 8:20 PM

ಭಾರತದಲ್ಲಿ ಏಕಪಕ್ಷದ ಸರ್ಕಾರದ ಯುಗ ಮುಗಿಯಿತು. ಇನ್ನೇನಿದ್ದರೂ ಸಮ್ಮಿಶ್ರ ಸರ್ಕಾರದ ಯುಗ ಎಂದು ಹೇಳುತ್ತಿದ್ದ ಎಲ್ಲ ರಾಜಕೀಯ ವಿಶ್ಲೇಷಕರು, ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದವರು ಪ್ರಧಾನಿ ನರೇಂದ್ರ ಮೋದಿ. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸ್ಪಷ್ಟ ಬಹುಮತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು ಈಗ ಇತಿಹಾಸ. ಜನರಿಂದ ಐತಿಹಾಸಿಕ ಜನಾದೇಶದ ನಂತರ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ 26 ಮೇ 2014 ರ ಸಂಜೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಹೊಸ ಇತಿಹಾಸವೇ ರಚನೆಯಾಯಿತು.

ನರೇಂದ್ರ ಮೋದಿ ತಮ್ಮ ತವರು ರಾಜ್ಯ ಗುಜರಾತ್‌ನ ಮುಖ್ಯಮಂತ್ರಿಯಾಗಿ 13 ವರ್ಷಗಳ ಸುದೀರ್ಘ ಅವಧಿಯಲ್ಲಿ ತಳಮಟ್ಟದ ಕಾರ್ಯಕರ್ತ, ಸಂಘಟಕರಾಗಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲಿ ಅವರು ಜನರ ಪರ ಮತ್ತು ಸಕ್ರಿಯವಾದ ಉತ್ತಮ ಆಡಳಿತದತ್ತ ಮಾದರಿ ಬದಲಾವಣೆಯನ್ನು ತಂದರು.

ವಡ್ ನಗರದ ಗಲ್ಲಿಯಿಂದ 7, ಲೋಕ ಕಲ್ಯಾಣ್ ಮಾರ್ಗನತ್ತ ಪ್ರಯಾಣ!

ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ವಡ್‌ನಗರದ ಈ ಚಿಕ್ಕಗಲ್ಲಿಯಿಂದ ಪ್ರಧಾನ ಮಂತ್ರಿ ಹುದ್ದೆಯವರೆಗಿನ ನರೇಂದ್ರ ಮೋದಿಯವರ ಸ್ಪೂರ್ತಿದಾಯಕ ಜೀವನ ಪಯಣ ಪ್ರಾರಂಭವಾಯಿತು. ನರೇಂದ್ರ ಮೋದಿ ಸೆಪ್ಟೆಂಬರ್ 17, 1950 ರಂದು ಜನಿಸಿದರು. ಭಾರತ ಸ್ವಾತಂತ್ರ್ಯ ಪಡೆದ ಮೂರು ವರ್ಷಗಳ ನಂತರ ಮೋದಿ ಜನಿಸಿದ್ದಾರೆ. ಈ ಮೂಲಕ ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಾಮೋದರದಾಸ್ ಮೋದಿ ಮತ್ತು ಹೀರಾಬಾಯಿ ಮೋದಿಗೆ ಜನಿಸಿದ ಮೂರನೇ ಮಗುವೇ ನರೇಂದ್ರ ಮೋದಿ. ಮೋದಿಯವರು ಮಧ್ಯಮ ವರ್ಗದ ಸಾಧಾರಣ ಕುಟುಂಬದಿಂದ ಬಂದವರು. ನಾಲ್ವರು ಸೋದರರೊಂದಿಗೆ ಇಡೀ ಕುಟುಂಬವು ವಡ್ ನಗರದ ಸುಮಾರು 40 ಅಡಿ ಉದ್ದ, 12 ಅಡಿಗಳಷ್ಟು ಅಗಲವಾದ ಚಿಕ್ಕದಾದ ಒಂದೇ ಅಂತಸ್ತಿನ ಈ ಮನೆಯಲ್ಲಿ ವಾಸಿಸುತ್ತಿತ್ತು. ಆದರೇ, ಈಗ ಈ ಮನೆಯನ್ನು ಮಾರಾಟ ಮಾಡಿ, ನರೇಂದ್ರ ಮೋದಿ ಸೋದರರು, ತಾಯಿ ಅಹಮದಾಬಾದ್ ನಲ್ಲಿ ವಾಸಿಸುತ್ತಿದ್ದಾರೆ.

ಬಾಲ್ಯದಲ್ಲಿ ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರಿದ್ದ ಮೋದಿ

ಬಾಲ್ಯದಲ್ಲಿ ಮನೆಯಲ್ಲಿ ಬಡತನವಿದ್ದ ಕಾರಣದಿಂದ ತಂದೆ ದಾಮೋದರ್ ದಾಸ್ ಮೋದಿ ಅವರ ಜೊತೆಗೆ ವಡ್ ನಗರ ರೈಲ್ವೇ ನಿಲ್ದಾಣದಲ್ಲಿ ಚಹಾ ಅಂಗಡಿಯಲ್ಲಿ ಮೋದಿ ಚಹಾ ಮಾರುತ್ತಿದ್ದರು. ಇದನ್ನು ವಡ್ ನಗರದ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ವಡ್ ನಗರದ ರೈಲ್ವೇ ನಿಲ್ದಾಣದಲ್ಲಿ ಮೋದಿ ಚಹಾ ಮಾರುತ್ತಿದ್ದ ಅಂಗಡಿ ಇಂದಿಗೂ ಇದೆ. ವಡ್ ನಗರ ರೈಲ್ವೇ ನಿಲ್ದಾಣವನ್ನು ಈಗ ಕೇಂದ್ರದ ರೈಲ್ವೇ ಇಲಾಖೆ ಹಾಗೂ ಸಂಸ್ಕೃತಿ ಇಲಾಖೆಗಳು ನವೀಕರಣ ಮಾಡಿವೆ. ಮೋದಿ ಚಹಾ ಮಾರುತ್ತಿದ್ದ ಅಂಗಡಿಯನ್ನು ಇಂದಿಗೂ ಉಳಿಸಿಕೊಳ್ಳಲಾಗಿದೆ.

ಯುವಕರಾಗಿದ್ದಾಗಲೇ ಭಾರತವನ್ನು ವಿಶ್ವ ಗುರು ಮಾಡುವ ಆಸೆ

ಮೋದಿ ಬಾಲ್ಯದಲ್ಲಿ ತುಂಬಾ ಶ್ರಮಜೀವಿಯಾಗಿದ್ದರು. ಚರ್ಚೆಗಳಲ್ಲಿ ಒಲವು ಮತ್ತು ಪುಸ್ತಕಗಳನ್ನು ಓದುವ ಕುತೂಹಲವನ್ನು ಹೊಂದಿದ್ದರು. ಶಾಲಾ ಸಹಪಾಠಿಗಳು ಮೋದಿಯವರು ಸ್ಥಳೀಯ ಲೈಬ್ರರಿಯಲ್ಲಿ ಓದಲು ಹಲವು ಗಂಟೆಗಳ ಕಾಲ ಹೇಗೆ ಕಳೆಯುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಬಾಲ್ಯದಲ್ಲಿ ಅವರಿಗೆ ಈಜುವ ಹವ್ಯಾಸವೂ ಇತ್ತು. ಬಾಲ್ಯದಲ್ಲಿಯೂ ಅವರು ಯಾವಾಗಲೂ ಸಮಾಜದಲ್ಲಿ ಬದಲಾವಣೆಯನ್ನು ಮಾಡುವ ಬಲವಾದ ಆಸೆ ಹೊಂದಿದ್ದರು. ಸ್ವಾಮಿ ವಿವೇಕಾನಂದರ ಕೃತಿಗಳಿಂದ ಅವರು ಹೆಚ್ಚು ಪ್ರಭಾವಿತರಾಗಿದ್ದರು. ಇದು ಆಧ್ಯಾತ್ಮಿಕತೆಯ ಕಡೆಗೆ ಅವರ ಪ್ರಯಾಣದ ಅಡಿಪಾಯವನ್ನು ಹಾಕಿತು . ಭಾರತವನ್ನು ಜಗತ್ ಗುರುವನ್ನಾಗಿ ಮಾಡುವ ಸ್ವಾಮಿ ವಿವೇಕಾನಂದರ ಕನಸನ್ನು ನನಸಾಗಿಸುವ ಉದ್ದೇಶವನ್ನು ಮುಂದುವರಿಸಲು ಅವರನ್ನು ಪ್ರೇರೇಪಿಸಿತು.

17 ನೇ ವಯಸ್ಸಿನಲ್ಲಿ ಅವರು ಭಾರತದಾದ್ಯಂತ ಪ್ರಯಾಣಿಸಲು ಮನೆ ತೊರೆದರು. ಎರಡು ವರ್ಷಗಳ ಕಾಲ ಅವರು ವಿವಿಧ ಸಂಸ್ಕೃತಿಗಳನ್ನು ಅನ್ವೇಷಿಸುತ್ತಾ ದೇಶಾದ್ಯಂತ ಪ್ರಯಾಣಿಸಿದರು. ಅವರು ಮನೆಗೆ ಹಿಂದಿರುಗಿದಾಗ ಅವರು ಬದಲಾದ ವ್ಯಕ್ತಿಯಾಗಿದ್ದರು, ಅವರು ಜೀವನದಲ್ಲಿ ಏನನ್ನು ಸಾಧಿಸಲು ಬಯಸಿದ್ದರು ಎಂಬ ಸ್ಪಷ್ಟ ಗುರಿಯೊಂದಿಗೆ ಅವರು ಅಹಮದಾಬಾದ್‌ಗೆ ಹೋಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದರು.

1965ರಲ್ಲಿ ಜನಸಂಘದ ವಾರ್ಡ್ ಕಾರ್ಯದರ್ಶಿಯಾದ ಮೋದಿ – 1972 ರಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರಾಗಿ ನೇಮಕ

ಪ್ರಧಾನಿ ನರೇಂದ್ರ ಮೋದಿಯವರು 1965 ರಲ್ಲಿ ಅಹಮದಾಬಾದ್‌ನಲ್ಲಿ ಜನಸಂಘದ ಕಂಕರಿಯಾ ವಾರ್ಡ್ ಕಾರ್ಯದರ್ಶಿಯಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 1972 ರಲ್ಲಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಗೊಂಡರು ಮತ್ತು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗದ ಘಟಕವನ್ನು ಸ್ಥಾಪಿಸಿದರು.

RSS ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಕಡೆಗೆ ಕೆಲಸ ಮಾಡುವ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾಗಿದೆ. 1972ರಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರಾಗಿ ನರೇಂದ್ರ ಮೋದಿ ನೇಮಕಗೊಂಡರು. ಅವರಿಗೆ ಅಹಮದಾಬಾದ್‌ನಲ್ಲಿ ಕಠಿಣ ದಿನಚರಿ ಆಳವಡಿಸಿಕೊಂಡಿದ್ದರು. ಅವರ ದಿನಚರಿ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತಿತ್ತು. ತಡರಾತ್ರಿಯವರೆಗೆ ಚಟುವಟಿಕೆಗಳು ನಡೆಯುತ್ತಿದ್ದವು. 1970 ರ ದಶಕದ ಉತ್ತರಾರ್ಧದಲ್ಲಿ ಯುವ ನರೇಂದ್ರ ಮೋದಿಯವರು ತುರ್ತು ಪರಿಸ್ಥಿತಿಯಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಚಳುವಳಿಯಲ್ಲಿ ಭಾಗವಹಿಸಿದ್ದರು. ಭೂಗತರಾಗಿ ದೇಶದಲ್ಲಿ ಓಡಾಡಿ ಜನರನ್ನು ತುರ್ತು ಪರಿಸ್ಥಿತಿ ವಿರುದ್ಧ ಸಂಘಟಿಸಿದ್ದರು. ಕೆಲವೊಮ್ಮೆ ಸಿಖ್ಖ್ ಟರ್ಬನ್ ಧರಿಸಿ ಓಡಾಡಿದ್ದು ಉಂಟು.

1987ರಲ್ಲಿ ಬಿಜೆಪಿ ಸೇರಿದ ಮೋದಿ ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

1980 ರ ದಶಕದಲ್ಲಿ ಸಂಘದೊಳಗೆ ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಮುಂದುವರಿಸಿದ್ದರು. ನರೇಂದ್ರ ಮೋದಿಯವರು ತಮ್ಮ ಸಂಘಟನಾ ಕೌಶಲ್ಯದಿಂದ ಸಂಘಟಕ ಹಾಗೂ ಪ್ರಚಾರಕರಿಗೆ ಮಾದರಿಯಾಗಿ ಹೊರಹೊಮ್ಮಿದರು. 1987 ರಲ್ಲಿ ಬಿಜೆಪಿ ಸೇರುವ ಮೂಲಕ ಮೋದಿ ಮುಖ್ಯವಾಹಿನಿಯ ರಾಜಕೀಯವನ್ನು ಪ್ರವೇಶಿಸಿದರು. 1987 ರಲ್ಲಿ ಮೋದಿಯವರು ಗುಜರಾತ್‌ನಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅವರ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.

ಒಂದು ವರ್ಷದೊಳಗೆ ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. ಅವರು 1990 ರಲ್ಲಿ ಅಲ್ಪಾವಧಿಗೆ ಬಿಜೆಪಿ ರಚಿಸಿದ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು. ನರೇಂದ್ರ ಮೋದಿ ಅವರು ಸೋಮನಾಥದಿಂದ ಅಯೋಧ್ಯೆಯವರೆಗೂ ಲಾಲ್ ಕೃಷ್ಣ ಅಡ್ವಾಣಿ ಅವರ ರಥಯಾತ್ರೆಯನ್ನ ಆಯೋಜಿಸಿದ್ದರು. ಜೊತೆಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಯಾತ್ರೆ ಆಯೋಜಿಸಿದ್ದರಲ್ಲೂ ಮೋದಿ ಪಾತ್ರವಿತ್ತು.

1990ರ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯು ಎರಡನೇ ಸ್ಥಾನಕ್ಕೇರುವಂತೆ ಮೋದಿ ಮಾಡಿದ್ದರು. 1995 ರ ಅಸೆಂಬ್ಲಿ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಸಂಘಟನಾ ಕೌಶಲ್ಯವು ಬಿಜೆಪಿಯ ಮತಗಳ ಪ್ರಮಾಣವನ್ನು ಹೆಚ್ಚಿಸಿತು. ಬಿಜೆಪಿ ಪಕ್ಷವು ಅಸೆಂಬ್ಲಿ ಚುನಾವಣೆಯಲ್ಲಿ 121 ಸ್ಥಾನಗಳನ್ನು ಗೆದ್ದಿತು. ಅಂದಿನಿಂದ ಬಿಜೆಪಿ ಗುಜರಾತ್‌ ಅನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿದೆ. ಆಗ ಮೋದಿ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

1995 ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ 2001ರವರೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ

ನರೇಂದ್ರ ಮೋದಿಯವರು 1995 ರಿಂದ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದರು. ಮೋದಿ 1998 ರಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕವಾದರು. 2001 ರವರೆಗೆ ನರೇಂದ್ರ ಮೋದಿ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿದ್ದರು. ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಅವರು 1998 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಶ್ರಮಿಸಿದರು. 2001ರವರೆಗೂ ನರೇಂದ್ರ ಮೋದಿ, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಮೋದಿಗೆ ಗುಜರಾತ್ ಸಿಎಂ ಆಗೋ ಆಸೆ

ನರೇಂದ್ರ ಮೋದಿ ಅವರಿಗೆ 2001ರ ಹೊತ್ತಿಗೆ ತಾವು ಗುಜರಾತ್‌ ಸಿಎಂ ಆಗಬೇಕು ಎಂಬ ಆಸೆ ಮನಸ್ಸಿನಲ್ಲಿ ಮೊಳಕೆಯೊಡೆದಿತ್ತು. ಇದನ್ನು ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ ಜೊತೆಗೆ ಮೋದಿ ಹಂಚಿಕೊಂಡಿದ್ದರು. ಆಗ್ಗಾಗ್ಗೆ ವಿನೋದ್ ಮೆಹ್ತಾ ಕಚೇರಿಗೂ ಮೋದಿ ಭೇಟಿ ನೀಡುತ್ತಿದ್ದರು.

ಆದರೇ, ಅಷ್ಟೊತ್ತಿಗಾಗಲೇ ಗುಜರಾತ್ ನ ಕಛ್ ನಲ್ಲಿ ಭೂಕಂಪ ಸಂಭವಿಸಿತ್ತು. ಗುಜರಾತ್ ಸಿಎಂ ಆಗಿದ್ದ ಕೇಶುಭಾಯಿ ಪಟೇಲ್ ಅವರ ಆರೋಗ್ಯ ಹದಗೆಟ್ಟಿತ್ತು. ಕಛ್ ಮರುನಿರ್ಮಾಣ ಮಾಡಲು ಕೇಶುಭಾಯಿ ಪಟೇಲ್ ಅವರಿಗೆ ಅನಾರೋಗ್ಯದ ಕಾರಣದಿಂದ ಸಾಧ್ಯವಾಗಲಿಲ್ಲ. ಇದರಿಂದಾಗಿ ಗುಜರಾತ್ ಸಿಎಂ ಹುದ್ದೆಯಿಂದ ಕೇಶುಭಾಯಿ ಪಟೇಲ್ ಅವರನ್ನು ಬದಲಾವಣೆ ಮಾಡಿದರೇ, ಮಾತ್ರವೇ ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಗೆಲ್ಲಲು ಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಆಗ ಬಿಜೆಪಿ ಹೈಕಮ್ಯಾಂಡ್ ಗುಜರಾತ್ ಸಿಎಂ ಬದಲಾವಣೆಗೆ ನಿರ್ಧರಿಸಿತ್ತು. ಆಗ ಬಿಜೆಪಿಯ ಆಗ್ರಗಣ್ಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಕಣ್ಣಿಗೆ ಬಿದ್ದಿದ್ದೇ ನರೇಂದ್ರ ಮೋದಿ.

ಕೇಶುಭಾಯಿ ಪಟೇಲ್‌ಗೆ ಅನಾರೋಗ್ಯ, ಮೋದಿಗೆ ಅದೃಷ್ಟ – ವಾಜಪೇಯಿ ಪೋನ್ ಕಾಲ್ ನಿಂದ ಬದಲಾಯ್ತು ಮೋದಿ ಜೀವನ

ಸೆಪ್ಟೆಂಬರ್ 2001 ರಲ್ಲಿ, ಅಂದಿನ ಪ್ರಧಾನಿ ವಾಜಪೇಯಿಯವರಿಂದ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಬಂದಿತು, ಅದು ಅವರ ಜೀವನದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯಿತು. ಆ ಪೋನ್ ಕಾಲ್ ನರೇಂದ್ರ ಮೋದಿ ಅವರನ್ನು ಸಂಘಟನಾ ರಾಜಕಾರಣದಿಂದ ಆಡಳಿತ ಜಗತ್ತಿಗೆ ಕರೆದೊಯ್ಯಿತು. ಪ್ರಧಾನಿ ವಾಜಪೇಯಿ ಅವರು ಮೋದಿಗೆ ಗುಜರಾತ್ ಸಿಎಂ ಹುದ್ದೆ ವಹಿಸಿಕೊಳ್ಳಲು ಅಹಮದಾಬಾದ್‌ಗೆ ಹೋಗುವಂತೆ ಸೂಚಿಸಿದ್ದರು.

ಆಗ ಮಾಧವ್ ರಾವ್ ಸಿಂಧಿಯಾ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಜೊತೆಗಿದ್ದ ಪತ್ರಕರ್ತರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತ ಪತ್ರಕರ್ತರ ಅಂತ್ಯಸಂಸ್ಕಾರದಲ್ಲಿ ಮೋದಿ ಭಾಗಿಯಾಗಿದ್ದಾಗ, ವಾಜಪೇಯಿ ಅವರಿಂದ ಗುಜರಾತ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಪೋನ್ ಕಾಲ್ ಬಂದಿದ್ದು ವಿಶೇಷ. ಬಳಿಕ ಗುಜರಾತ್ ಗೆ ತೆರಳಿದ ನರೇಂದ್ರ ಮೋದಿ, 2001,ರ ಆಕ್ಟೋಬರ್ 7ರಂದು ಗುಜರಾತ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಆಗ ನರೇಂದ್ರ ಮೋದಿ ಗುಜರಾತ್ ವಿಧಾನಸಭೆಯ ಸದಸ್ಯರೂ ಆಗಿರಲಿಲ್ಲ. 6 ತಿಂಗಳೊಳಗಾಗಿ ವಿಧಾನಸಭೆಗೆ ಆಯ್ಕೆಯಾಗಬೇಕಾಗಿತ್ತು.

ಮೋದಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ವಜೂಭಾಯಿ ರೂಢಭಾಯಿ ವಾಲಾ

ಆಗ ರಾಜ್ ಕೋಟ್ ಶಾಸಕರಾಗಿದ್ದ ವಜೂಭಾಯಿ ರೂಢಭಾಯಿ ವಾಲಾರವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೋದಿ ಅವರನ್ನ ರಾಜ್ ಕೋಟ್ ನಿಂದ ವಿಧಾನಸಭೆಗೆ ಆಯ್ಕೆಯಾಗುವಂತೆ ಮಾಡಿದ್ದರು. ತಮಗಾಗಿ ಮಾಡಿದ ಈ ತ್ಯಾಗ, ನೆರವಿಗಾಗಿ ಮುಂದೆ ನರೇಂದ್ರ ಮೋದಿ ಅವರು, ವಜುಭಾಯಿ ರೂಢಭಾಯಿ ವಾಲಾರನ್ನು ಕರ್ನಾಟಕದ ರಾಜ್ಯಪಾಲರಾಗಿ ನೇಮಿಸಿದ್ದರು. 2002ರ ಫೆಬ್ರವರಿ 24 ರಂದು ನಡೆದ ರಾಜಕೋಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೋದಿ ವಿಧಾನಸಭೆಗೆ ಆಯ್ಕೆಯಾದರು. ಇದಾದ ಮೂರೇ ದಿನದಲ್ಲಿ ಗುಜರಾತ್ ನಲ್ಲಿ ಘೋರ ದುರಂತ ನಡೆದು ಹೋಯಿತು.

ಗೋದ್ರಾದಲ್ಲಿ ಕರಸೇವಕರ ರೈಲು ಬೋಗಿಗೆ ಬೆಂಕಿ ಸಜೀವ ದಹನವಾದ ಹಿಂದೂ ಕರಸೇವಕರು

2002ರ ಫೆಬ್ರವರಿ 27ರಂದು ಗೋದ್ರಾ ರೈಲು ದುರಂತ ನಡೆಯಿತು. ಅಯೋಧ್ಯೆಯಿಂದ ಕರಸೇವೆ ಮುಗಿಸಿಕೊಂಡು ಗುಜರಾತ್‌ಗೆ ವಾಪಸ್ ಬರುತ್ತಿದ್ದ ಹಿಂದೂ ಕರಸೇವಕರ ರೈಲ್ವೇ ಬೋಗಿಗೆ ಗೋದ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಸಬರಮತಿ ಎಕ್ಸ್ ಪ್ರೆಸ್ ರೈಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಇದರಿಂದ ಹಿಂದೂ ಕರಸೇವಕರು ಸಜೀವ ದಹನವಾದರು. ಇದಾದ ಬಳಿಕ ಅಹಮದಾಬಾದ್ ನಗರ ಹೊತ್ತಿ ಉರಿದಿತ್ತು. ಹಿಂದೂ-ಮುಸ್ಲಿಂ ಎರಡು ಕಡೆಯ ಅಮಾಯಕ ಜನರು ಸಾವನ್ನಪ್ಪಿದ್ದರು.

ಮೋದಿ ವಿರುದ್ಧ ಗಲಭೆ ತಡೆಯದ ಆರೋಪ

ಗುಜರಾತ್ ಸಿಎಂ ಆಗಿ ನರೇಂದ್ರ ಮೋದಿ ಗಲಭೆಯನ್ನ ಉದ್ದೇಶಪೂರ್ವಕವಾಗಿ ತಡೆಗಟ್ಟಲಿಲ್ಲ. ಹಿಂದೂಗಳಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಲು ಅವಕಾಶ ಕೊಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದರು. ಇದರಿಂದಾಗಿ ಹಿಂದೂಗಳು-ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ನುಗ್ಗಿ ಜನರನ್ನು ಹತ್ಯೆ ಮಾಡಿದ್ದರು ಎಂಬ ಆರೋಪಗಳು ಕೇಳಿ ಬಂದವು. ಗೋದ್ರೋತ್ತರ ಹತ್ಯಾಕಾಂಡದ ಕಾರಣಕ್ಕಾಗಿ ಕೆಲ ದೇಶಗಳು ನರೇಂದ್ರ ಮೋದಿಗೆ ತಮ್ಮ ದೇಶದ ವೀಸಾ ನಿರಾಕರಿಸಿದ್ದವು. ಇಂಗ್ಲೆಂಡ್‌ ದೇಶ ಸಿಎಂ ನರೇಂದ್ರ ಮೋದಿರನ್ನು ಟೀಕಿಸಿತ್ತು. ದೇಶದ ಪ್ರಧಾನಿಯಾಗಿದ್ದ ವಾಜಪೇಯಿ ಆ ವೇಳೆ ಗುಜರಾತ್ ಗೆ ಭೇಟಿ ನೀಡಿದ್ದಾಗ, ಸಿಎಂ ರಾಜಧರ್ಮ ಪಾಲಿಸಬೇಕೆಂದು ಹೇಳಿದ್ದರು.

ಆದರೇ, ಆಗ ಲಾಲ್ ಕೃಷ್ಣ ಅಡ್ವಾಣಿ ಅವರು ಮೋದಿ ಬೆಂಬಲಕ್ಕೆ ನಿಂತಿದ್ದರು. ಇದರಿಂದಾಗಿ ನರೇಂದ್ರ ಮೋದಿ ಸಿಎಂ ಹುದ್ದೆಯಲ್ಲಿ ಉಳಿದುಕೊಂಡು ಮುಂದುವರೆದರು. ದೇಶದಲ್ಲಿ ಮೋದಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಇದರಿಂದ ಮೋದಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೇ, ಸಿಎಂ ಮೋದಿ ರಾಜೀನಾಮೆಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ತಿರಸ್ಕರಿಸಿತ್ತು. ಗೋದ್ರಾ ಹಾಗೂ ಗೋದ್ರೋತ್ತರ ಗಲಭೆ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು. ಈ ಎಸ್‌ಐಟಿ ಗುಜರಾತ್ ಸಿಎಂ ನರೇಂದ್ರ ಮೋದಿರನ್ನ ವಿಚಾರಣೆ ನಡೆಸಿ, ಕ್ಲೀನ್ ಚಿಟ್ ನೀಡಿತ್ತು.

2002ರ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೋದಿ ನಾಯಕತ್ವದಲ್ಲಿ ಬಿಜೆಪಿ ಪಕ್ಷವು 182 ಕ್ಷೇತ್ರದ ಪೈಕಿ 127 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಭರ್ಜರಿ ಬಹುಮತದೊಂದಿಗೆ ಬಿಜೆಪಿಯನ್ನು ಮತ್ತೆ ಮೋದಿ ಅಧಿಕಾರಕ್ಕೆ ತಂದಿದ್ದರು. ಈ ಮೂಲಕ ಗೋದ್ರೋತ್ತರ ಗಲಭೆಯ ಹಿನ್ನಲೆಯಲ್ಲಿ ಮೋದಿ ವಿರುದ್ಧ ಟೀಕೆ ಮಾಡಿದ್ದವರಿಗೆ ಜನಾದೇಶದ ಮೂಲಕ ಮೋದಿ ಪ್ರತ್ಯುತ್ತರ ನೀಡಿದ್ದರು. 2002ರ ಗೋದ್ರೋತ್ತರ ಗಲಭೆಯಲ್ಲಿ ಗುಜರಾತ್ ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹಿಂದೂ-ಮುಸ್ಲಿಂರ ಸಾವು ಸಂಭವಿಸಿತ್ತು. ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ಮೋದಿ, ಹಿಂದುತ್ವದ ಪ್ರತಿಪಾದಕರಾಗಿ ಹೊರಹೊಮ್ಮಿದ್ರು. ಪ್ರತಿಕೂಲ ಪರಿಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

2007, 2012ರಲ್ಲೂ ಗುಜರಾತ್ ನಲ್ಲಿ ಬಿಜೆಪಿಗೆ ಗೆಲುವು

ಬಳಿಕ 2007 ಹಾಗೂ 2012ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಮೋದಿ ಯಶಸ್ವಿಯಾಗಿದ್ದರು. 2007ರಲ್ಲಿ ಗುಜರಾತ್ ನಲ್ಲಿ ಬಿಜೆಪಿ 117 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 2012ರಲ್ಲಿ 115 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಇದು ಮೋದಿ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿತ್ತು.

2012ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆದ್ದ ಬಳಿಕ ಬಿಜೆಪಿಯೊಳಗೆ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗುವ ಅರ್ಹತೆ ಗಳಿಸಿಕೊಂಡಿದ್ದರು. ಜೊತೆಗೆ ಹಿಂದುತ್ವದ ಪ್ರತಿಪಾದಕರಾಗಿಯೂ ಮೋದಿ ಗುರುತಿಸಿಕೊಂಡಿದ್ದರು. ಇದಕ್ಕೆ ಆರ್.ಎಸ್.ಎಸ್.ಬೆಂಬಲವೂ ಇತ್ತು. ಆದರೇ, 2014ರ ಲೋಕಸಭಾ ಚುನಾವಣೆಗೆ ನರೇಂದ್ರಮೋದಿರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದಕ್ಕೂ ಮುನ್ನ ಪಕ್ಷದ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ಘೋಷಿಸಲಾಗಿತ್ತು. ಮೋದಿರನ್ನು ಲೋಕಸಭಾ ಚುನಾವಣೆಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸುವ ಸಭೆಗೆ ಅಡ್ವಾಣಿ ಭಾಗಿಯಾಗಿರಲಿಲ್ಲ.

ಪ್ರಚಾರ ಸಮಿತಿ ಅಧ್ಯಕ್ಷರಾದ್ರೆ… ಪ್ರಧಾನಿ ಅಭ್ಯರ್ಥಿಯಾದಂತೆ!

ಆದರೇ, 2014ರ ಲೋಕಸಭಾ ಚುನಾವಣೆಯನ್ನು ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂಬ ಪ್ರಚಾರ ಘೋಷಣೆಯೊಂದಿಗೆ ಬಿಜೆಪಿ ಎದುರಿಸಿತ್ತು. ಬಿಜೆಪಿಯ ಪ್ರಚಾರ ಸಮಿತಿಯ ಅಧ್ಯಕ್ಷರಾದ್ರೆ, ಪ್ರಧಾನಿ ಅಭ್ಯರ್ಥಿಯಾದಂತೆ. ಪರೋಕ್ಷವಾಗಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿದಂತೆ ಆಗಿತ್ತು. ಆಗ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯಲ್ಲಿ ಮೋದಿ ಗುರು ಅಡ್ವಾಣಿ, ಸುಷ್ಮಾ ಸ್ವರಾಜ್ ಕೂಡ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗಿದ್ದರು. ಆದರೇ, ಇಬ್ಬರನ್ನು ಪಕ್ಕಕ್ಕೆ ಸರಿಸಿ, ಮೋದಿರನ್ನು ಬಿಜೆಪಿ ಪಕ್ಷವು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಪ್ರಧಾನಿ ಹುದ್ದೆಯ ಅಭ್ಯರ್ಥಿಯನ್ನಾಗಿ ಮಾಡಿತ್ತು. 2009 ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಮಾಡಿದ್ದಾಗಲೂ ಬಿಜೆಪಿ, ಎನ್‌ಡಿಎ ಗೆ ಬಹುಮತ ಸಿಕ್ಕಿರಲಿಲ್ಲ. ಹೀಗಾಗಿ ಹೊಸ ಮುಖವಾಗಿ ಮೋದಿರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ 2014ರಲ್ಲಿ ಘೋಷಿಸಿತ್ತು.

ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರು. ಮಂಡಲ್ ಹೋರಾಟದ ವೇಳೆ ಹಿಂದುಳಿದ ವರ್ಗಗಳು ಪ್ರಾದೇಶಿಕ ಪಕ್ಷಗಳತ್ತ ವಾಲಿದ್ದವು. ಆ ಸಮುದಾಯಗಳನ್ನು ಬಿಜೆಪಿಯತ್ತ ಸೆಳೆಯಲು ಮೋದಿ ಆಯ್ಕೆ ಸಹಾಯಕವಾಯಿತು. ಮೋದಿ ಗುಜರಾತ್ ನಲ್ಲಿ ತಮ್ಮದೇ ಆದ ಅಭಿವೃದ್ದಿ ಮಾಡೆಲ್ ಅನ್ನು ದೇಶದ ಮುಂದಿಟ್ಟು ಜನರನ್ನು ತಮ್ಮತ್ತ ಸೆಳೆದಿದ್ದರು.

ಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮೋದಿ ದೇಶಾದ್ಯಂತ ಸುತ್ತಿ ಭರ್ಜರಿ, ಬಿರುಸಿನ ಪ್ರಚಾರ ನಡೆಸಿದ್ದರು. ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಹತ್ತು ವರ್ಷಗಳ ಆಳ್ವಿಕೆಯಿಂದ ಅಧಿಕಾರ ವಿರೋಧಿ ಅಲೆ, ಯುಪಿಎ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಮೋದಿಗೆ ವರದಾನವಾದವು. ಕಾಂಗ್ರೆಸ್ ಪಕ್ಷದ ಮಣಿಶಂಕರ್ ಅಯ್ಯರ್, ಮೋದಿ ಚಾಯಿವಾಲಾ, ಕಾಂಗ್ರೆಸ್ ಕಚೇರಿ ಹೊರಗೆ ಚಹಾ ಅಂಗಡಿ ತೆರೆಯಲಿ, ಬೇಕಿದ್ರೆ ಜಾಗ ಕೊಡ್ತೇವೆ ಎಂದು ಹೇಳಿದ್ದನ್ನೇ ತಮ್ಮ ಪರ ಪ್ರಚಾರಕ್ಕೆ ಬಳಸಿಕೊಂಡರು. ಚಾಯಿ ಪೇ ಚರ್ಚಾ ಆಯೋಜಿಸಿ ಜನರೊಂದಿಗೆ ಚರ್ಚೆ ನಡೆಸಿದ್ದರು.

ಬಿಜೆಪಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ 282 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿತ್ತು. 2014ರ ಮೇ, 26ರಂದು ಮೋದಿ ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಚಾಯಿವಾಲಾ ಒಬ್ಬ ಮೊದಲ ಬಾರಿಗೆ ದೇಶದ ಪ್ರಧಾನಿ ಹುದ್ದೆಗೇರಿದ್ದರು. ತಾವೊಬ್ಬ ಚಾಯಿವಾಲಾ ಎಂಬುದನ್ನು ಮೋದಿ ಇಂದಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಮ್ಮ ಕಡುಬಡತನದ ಹಿನ್ನಲೆಯನ್ನು ಮರೆತಿಲ್ಲ. ತಾವು ಚಹಾ ಮಾರಿದ್ದೆನೆಯೇ ಹೊರತು ದೇಶ ಮಾರಿಲ್ಲ ಎಂದು ಕಾಂಗ್ರೆಸ್ಸಿಗರಿಗೆ ಮೋದಿ ತಿರುಗೇಟು ನೀಡಿದ್ದರು. ಮೋದಿ ಪ್ರಧಾನಿ ಹುದ್ದೆಗೇರಿ ಈಗ 8 ವರ್ಷ ಪೂರ್ಣವಾಗುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada