ಏ. 23ರ ವರೆಗೆ ನಿಮ್ಮ ಋಣ ಇದೆ, ಅಲ್ಲಿಯವರೆಗೂ ರಾಜೀನಾಮೆ ಕೊಡಲ್ಲ: ಜೆಡಿಎಸ್ ಬಗ್ಗೆ ಕಡ್ಡಿ ಮುರಿದಂತೆ ಮಾತಾಡಿದ ಶಿವಲಿಂಗೇಗೌಡ
ಈಗಾಗಲೇ ಕಾಂಗ್ರೆಸ್ ಸೇರಲು ತೀರ್ಮಾನಿಸಿದ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ದಳಪತಿಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಹಲವು ವಿಷಯಗಳನ್ನು ಪ್ರಸ್ತಾಪಿಸಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನ: ಈಗಾಗಲೇ ಜೆಡಿಎಸ್ನಿಂದ(JDS) ಆಚೆ ಬಂದಿರುವ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು (Arsikere MLA Km Shivalinge) ಇಷ್ಟು ದಿನಗಳಿಂದ ದಳಪತಿಗಳ ವಿರುದ್ಧ ಇದ್ದ ಸಿಟ್ಟನ್ನು ಇಂದು ಒಂದೇ ಬಾರಿಗೆ ಹೊರಹಾಕಿದ್ದಾರೆ. ಹೆಚ್ಡಿ ಕುಮಾರಸ್ವಾಮಿ(HD Kumaraswamy), ಹೆಚ್ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವು ನಾಯಕರ ಟೀಕೆಗಳಿಗೆ ಶಿವಲಿಂಗೇಗೌಡ ತಿರುಗೇಟು ನೀಡಿದ್ದಾರೆ. ಅಲ್ಲದೇ ಏಪ್ರಿಲ್ 23ರ ವರೆಗೆ ನಿಮ್ಮ ಋಣ ಇದೆ. ಅಲ್ಲಿಯವರೆಗೂ ನಾನು ರಾಜೀನಾಮೆ ಕೊಡಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಇದನ್ನೂ ಓದಿ: ಹೆಚ್ಡಿ ರೇವಣ್ಣ, ಶಾಸಕ ಶಿವಲಿಂಗೇಗೌಡ ಆಡಿಯೋ ವೈರಲ್: ಪಕ್ಷ ಬಿಟ್ಟು ಹೋಗದಂತೆ ಮನವೊಲಿಸಿರುವ ರೇವಣ್ಣ
ಹಲವಾರು ಕಾರ್ಯಕ್ರಮ ಮಾಡಿದ್ದಾರೆ ನಾನೇನು ಬೇಡ ಅನ್ನಲ್ಲ. ರಾಜಕೀಯದಲ್ಲಿ ಸ್ವಂತ ಅಣ್ಣ ತಮ್ಮಂದಿರೇ ಯುದ್ದಕ್ಕೆ ನಿಲ್ಲುತ್ತಾರೆ. ಸ್ವಂತ ಅಣ್ಣ ತಮ್ಮಂದಿರೇ ಬೇರೆ ಆಗಿ ಹೋಗುತ್ತಾರೆ. ಹೌದು ನಮಗೂ ಅವರಿಗೂ ಭಿನ್ನಾಭಿಪ್ರಾಯ ಬಂತು, ಬಂದಿದೆ ಎಲ್ಲರಿಗೂ ಗೊತ್ತಿದೆ. ಏಕಾಏಕಿ ಒಂದು ಸಭೆಯಲ್ಲಿ ನಾನು ಗಿಜಿಹಳ್ಳಿ ತೋಟದಲ್ಲಿ ಪರಿಹಾರ ಕೊಡಿಸಲು ಮಲಗಿದ್ದೆ, ಇವನು ನಾಟಕಕ್ಕೆ ಮಲಗಿದ್ದ ಅಂದ್ರೆ, ನಾನ್ಯಾಕೆ ಇರಬೇಕು, ಇವರ ಜೊತೆ ಎಂದು ದಳಪತಿಗಳ ವಿರುದ್ಧ ಗುಡುಗಿದರು.
ನಾನು ಇನ್ನೂ ಪಕ್ಷನೇ ಬಿಟ್ಟು ಹೋಗಿಲ್ಲ. ಜಾತ್ರೆಗಳು ಇರುವುದರಿಂದ ಬರಲು ಆಗಲ್ಲ ಅಂದ್ರೆ ಚಾಕು, ಚೂರಿ ಹಾಕಿ ಹೋದ ಎಂದು ಮಾತನಾಡಿದ್ರೆ ಅವರ ಜೊತೆ ನನಗೇನು ಕೆಲಸ. ಅದರಿಂದ ಭಿನ್ನಾಭಿಪ್ರಾಯ ಬಂತು. ನಾನೇನು ಮಾಡಿಕೊಂಡಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಲೆಹರ್ ಸಿಂಗ್‌ಗೆ ಓಟು ಹಾಕಿದರೆ ಐದು ಕೋಟಿ ರೂ ಕೊಡುತ್ತೇನೆ ಅಂದರು. ನನ್ನ ಜೀವನದಲ್ಲಿ ಯಾರಿಗೂ ಮಾನ ಮರ್ಯಾದೆ ಮಾಡಿಕೊಂಡು ಜೀವನ ಮಾಡಿಲ್ಲ. ಇವತ್ತು ಕರ್ನಾಟಕ ರಾಜ್ಯದಲ್ಲಿ ಶಿವಲಿಂಗೇಗೌಡ ಅಂದ್ರೆ ಒಂದು ಹೆಸರಿದೆ. ಭಿನ್ನಾಭಿಪ್ರಾಯ ಬಂತು ಬೇರೆ ಆಗಿ ಬಿಟ್ಟಿದ್ದೀವಿ, ನೀವು ಬೇರೆ ಹೋಗಿದ್ದೀರಿ, ನಿಮ್ಮ ಪಕ್ಷ ಕಟ್ಕಂಡಿದ್ದೀರಿ. ನನಗೆ ನನ್ನ ಕ್ಷೇತ್ರದ ಐದಾರು ಸಾವಿರ ಜನ ಸೇರಿ, ಇಲ್ಲ ನೀನು ಈ ಸಾರಿ ಕಾಂಗ್ರೆಸ್‌ಗೆ ಹೋಗಬೇಕು ಎಂದು ಕೂಗಿದ್ರು. ನಾನು ಜನ ಏನು ಹೇಳಿದ್ರು ಅದರಂತೆ ನಾನು ಕಾಂಗ್ರೆಸ್‌ಗೆ ಹೋಗುವಂತ ಕೆಲಸ ಮಾಡಿದ್ದೇನೆ. ಆದರೆ ನೀವು ಈ ರೀತಿ ಮಾಡುವುದು, ಸುಮ್ಮನೆ ಏನೇನು ಹೇಳುವುದು ತರವಲ್ಲ ಎಂದು ಕಿಡಿಕಾರಿದರು.
ನಿಮ್ಮ ಪಾಡಿಗೆ ನೀವು ಇರಿ, ನಮ್ಮ ಪಾಡಿಗೆ ನಾವು ಇರುತ್ತೇವೆ. ನಿಮ್ಮದು ನಾನು ಹೇಳಲು ಹೋದರೆ ನೀವು ಇನ್ನೊಂದು ಹೇಳುತ್ತೀರಿ. ಏನು, ಏತಕ್ಕೆ, ಏನಾಯ್ತು ನಾನು ಹೇಳುತ್ತೇನೆ. ನಾನೇನು ಯಾರಿಗೂ ಮೋಸ ಮಾಡಿಲ್ಲ, ಪಕ್ಷ ದ್ರೋಹ ಮಾಡಿಲ್ಲ, ಯಾರಿಗೂ ಕೆಟ್ಟ ಹೆಸರು ತಂದಿಲ್ಲ. ಈ ದೇಶದ ಪ್ರಜಾಪ್ರಭುತ್ವದಲ್ಲಿ ಎಂತೆಂತವರು ಪಾರ್ಟಿ ಬಿಟ್ಟು ಹೋಗಿದ್ದಾರೆ. ಎಷ್ಟು ಜನ ಪಾರ್ಟಿ ಬಿಟ್ಟು ಹೋಗಿದ್ದಾರೆ. ಎ.ಟಿ.ರಾಮಸ್ವಾಮಿ, ಶ್ರೀನಿವಾಸ್‌ಗೌಡ, ಗುಬ್ಬಿ ವಾಸಣ್ಣ ಯಾರ್ಯಾರೋ ಯಾವ್ಯಾವ ಪಾರ್ಟಿ ಬಿಟ್ಟು ಹೋಗುತ್ತಿದ್ದಾರೆ. ಅವತ್ತು ಹದಿನೇಳು ಜನರ ಜೊತೆ ಹೋಗುವದಾದರೆ ಅವತ್ತೇ ನನಗೆ ಮಂತ್ರಿ ಕೊಡೋರು. ನಾನು ಅಂತಹ ಕೆಟ್ಟ ಕೆಲಸ ಮಾಡಲ್ಲ. ನೀವು ಬಿ ಫಾರಂ ಕೊಟ್ಟಿದ್ದು ಐದು ವರ್ಷ, ಏಪ್ರಿಲ್ 23ರ ವರೆಗೆ ನಿಮ್ಮ ಋಣ ಇದೆ. ಅಲ್ಲಿಯವರೆಗೂ ನಾನು ರಾಜೀನಾಮೆ ಕೊಡಲ್ಲ. ಆಮೇಲೆ ನಾನು ಕೊಟ್ಟು ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಾನು ರಾಜಕೀಯ ಸನ್ಯಾಸಿ ಅಲ್ಲ, ನಾನು ರಾಜಕೀಯ ಮಾಡಲೇಬೇಕು. ಹಾಗಾಗಿ ನಾನು ಮಾಡುತ್ತೇನೆ. ಅದರ ಸಲುವಾಗಿ ಈ ಭಿನ್ನಾಭಿಪ್ರಾಯ ಬೇಡ. ರಣರಂಗದಲ್ಲಿ ಸೋಲಿಸಿ ನಾನೇನು ಬೇಡ ಅನ್ನಲ್ಲ. ಈ ಕ್ಷೇತ್ರದ ಜನ ನನ್ನ ಕೈ ಹಿಡಿದರೆ ನಾನು ಮುಂದುವರಿಯುತ್ತೇನೆ. ಈ ಕ್ಷೇತ್ರದ ಜನ ಮುಂದುವರಿಯಲು ಕೊಡದೆ ಹೋದರೆ ಮನೆಗೆ ಹೋಗುತ್ತೇನೆ. ಅದರಲ್ಲಿ ಏನಿದೆ ತಪ್ಪು, ಅದಬಿಟ್ಟು ಇವನು ಮೋಸ ಮಾಡಿದ ಅಂತಾರೆ. ನಾನು ಯಾರಿಗೆ ಮೋಸ ಮಾಡಿದ್ದೇನೆ. ಏನು ನಿಮ್ಮ ಪಾರ್ಟಿನಲ್ಲಿ ಯಾರಿಗೂ ಏನು ಮೋಸ ಮಾಡಿಲ್ಲ, ಕಥೆ ಹೇಳಬೇಕಾಗುತ್ತೆ. ಈಗ ನಿಮ್ಮ ಪಾರ್ಟಿ ಅಧ್ಯಕ್ಷರನ್ನು ಮಾಡಿಕೊಂಡಿದ್ದೀರಲ್ಲ ಇಬ್ರಾಹಿಂ ಸಿದ್ದರಾಮಯ್ಯ, ಅಹಿಂದ ಕಟ್ಟಿಕೊಂಡು ಹೋಗಿ ಎಂಎಲ್‌ಸಿ ಆಗ್ಲಿಲ್ವಾ. ಈಗ ಅವರನ್ನೇ ವಾಪಸ್ ಕರೆತಂದು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದೀರಿ ಎಂದು ಹೇಳಿದರು.
ನಮ್ಮ ಕ್ಷೇತ್ರಕ್ಕೆ ಬರುವ ಅನುದಾವನ್ನ ತಂದು ಕೆಲಸ ಮಾಡಲು ಕಳುಹಿಸಿದ್ದಾರೆ. ಇವರು ಆ ರೀತಿ ವಿಶೇಷ ಅನುದಾನ ತರುವುದಿದ್ದರೆ ಮುಖ್ಯಮಂತ್ರಿಗಳಿಂದ ತರಲಿ ನಾವೇನು ಬೇಡ ಅನ್ನಲ್ಲ. ಸಾವಿರಾರು ಕೋಟಿ ಹಣ ಈ ಕ್ಷೇತ್ರಕ್ಕೆ ಹೇಗೆ ಹರಿದು ಬಂದಿದೆ ಆಮೇಲೆ ಹೇಳೋಣ. ಈ ಕ್ಷೇತ್ರಕ್ಕೆ ಅನುದಾನ ಬರುತ್ತಿದೆ ಎಂದು ಅರ್ಜಿ ಬರೆದು ನಿಲ್ಲುಸುತ್ತಾರೆ. ಅದನ್ನು ಆ ಭಗವಂತ ನೋಡಿಕೊಳ್ಳಬೇಕು. ಅಲ್ಲಿ ಹೋಗಿ ಅದು ಕೊಡಬೇಡಿ, ಇದು ಕೊಡಬೇಡಿ ಎಂದು ಅರ್ಜಿ ಬರೆಯೋದು. ಏನಾದ್ರು ಇನ್ನಷ್ಟು ಕೆಲಸ ಕೊಟ್ಟರೆ ಶಿವಲಿಂಗೇಗೌಡನನ್ನ ಬಗ್ಗಿಸುವುದಕ್ಕೆ ಆಗಲ್ಲ. ನೀವು ಕೊಡಬೇಡಿ ಎನ್ನುವ ಮಾತನ್ನ ಹೇಳುತ್ತಾರೆ. ಆದರೂ ನಾನೇನು ಹೆದರಲ್ಲ, ಏನ್ ತರಬೇಕೋ ತರುತ್ತೇನೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:03 am, Thu, 16 March 23