ಹೆಚ್ಡಿ ರೇವಣ್ಣ, ಶಾಸಕ ಶಿವಲಿಂಗೇಗೌಡ ಆಡಿಯೋ ವೈರಲ್: ಪಕ್ಷ ಬಿಟ್ಟು ಹೋಗದಂತೆ ಮನವೊಲಿಸಿರುವ ರೇವಣ್ಣ
ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಜೆಡಿಎಸ್ (JDS) ತೊರೆಯುವ ಮೊದಲು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಜೆಡಿಎಸ್ (JDS) ತೊರೆಯುವ ಮೊದಲು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಆಡಿಯೋದಲ್ಲಿ ಪಕ್ಷ ಬಿಟ್ಟು ಹೋಗದಂತೆ ಹೆಚ್.ಡಿ.ರೇವಣ್ಣ ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ನಿನ್ನನ್ನು ಮತ್ತೆ ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ. ಇದನ್ನ ಮೊನ್ನೆ ಸಹ ಹೇಳಿದ್ದೇನೆ ಎಂದು ಶಿವಲಿಂಗೇಗೌಡಗೆ ಭರವಸೆ ನೀಡಿದ್ದಾರೆ. ಪಕ್ಷ ಬಿಟ್ಟು ಹೋಗದಂತೆ ಮನವೊಲಿಸಲು ರೇವಣ್ಣ ಕಸರತ್ತು ನಡೆಸಿದ್ದು, ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುವುದಕ್ಕೂ ಮೊದಲು ರಾಜಿಸಂಧಾನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಭಾವನಾತ್ಮಕವಾಗಿ ಮನವೊಲಿಸಲು ಯತ್ನ
ಒಂದು ನಿಮಿಷ ಶಿವಲಿಂಗಣ್ಣ ತಾಳ್ಮೆಯಿಂದ ಕೇಳು. ನನ್ನ ನಿನ್ನ ಸಂಬಂಧ 18-20 ವರ್ಷಗಳದ್ದು. ಶಿವಲಿಂಗೇಗೌಡರಿಗೆ ತೊಂದರೆ ಆಗಬಾರದು ಅನ್ನೋದು ನನ್ನ ಭಾವನೆ. ಅವತ್ತು ಏನು ಹೇಳಿದ್ದೇ ನೀನು, ನಾನು ಸೋಲುವುದಾದರೆ ಅವರ ಎದುರುಗಡೆ ನಿಲ್ಲಲ್ಲ ಅಂದೆ ಎಂದು ರೇವಣ್ಣ ಹೇಳಿದ್ದು, ಯಾರನ್ನಾದರೂ ನಿಲ್ಸೋಣ ಅಂತ ಅಂದೆ. ನಾನು ಈಗಲೂ ನಿಲ್ಲುತ್ತೇನೆ ಅಂತ ಎಲ್ಲೇ ಹೇಳಿದ್ದೀನಿ ಅಂತ ಶಿವಲಿಂಗೇಗೌಡ ಮರು ಪ್ರಶ್ನೆ ಮಾಡಿದ್ದಾರೆ. ಪಕ್ಷ ತೊರೆಯದಂತೆ ಭಾವನಾತ್ಮಕವಾಗಿ ಮನವೊಲಿಸಲು ರೇವಣ್ಣ ಯತ್ನಿಸಿದ್ದಾರೆ. ಆದರೆ ಪಕ್ಷ ಬಿಡುತ್ತೇನೆ ಅಥವಾ ಬಿಡಲ್ಲ ಎಂದು ಏನೂ ಹೇಳದೆ ಜಾಣ್ಮೆಯಿಂದ ಶಿವಲಿಂಗೇಗೌಡ ಮಾತನಾಡಿದ್ದಾರೆ.
ಶಿವಲಿಂಗೇಗೌಡಗೆ ಸವಾಲು ಹಾಕಿದ ರೇವಣ್ಣ
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ ಬೆನ್ನಲ್ಲೇ ಅವರ ವಿರುದ್ಧ ಜೆಡಿಎಸ್ ನಾಯಕರು ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಅರಸೀಕೆರೆ ಕೌನ್ಸಿಲರ್ ಒಬ್ಬರು ಶಾಸಕ ಶಿವಲಿಂಗೇಗೌಡರ ಪಾಲುದಾರರು. ಕ್ಷೇತ್ರದಲ್ಲಿ ಎಲ್ಲಾ ಗುತ್ತಿಗೆ ಕಾಮಗಾರಿಯನ್ನು ಇವರು ಇಬ್ಬರೇ ಮಾಡುತ್ತಾರೆ. ಅಲ್ಪಸಂಖ್ಯಾತರಿಗೆ ಯಾವುದೇ ಗುತ್ತಿಗೆ ಕೊಟ್ಟಿಲ್ಲ. ಕಲ್ಯಾಣಮಂಟಪದ ಹೆಸರಲ್ಲೂ ಶಿವಲಿಂಗೇಗೌಡ ಹಣ ಹೊಡೆದಿದ್ದಾರೆ ಎಂದು ಜೆಡಿಎಸ್ ನಾಯಕ ಹೆಚ್ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದರು. ಅರಸೀಕೆರೆಯಲ್ಲಿ ಪಂಚರತ್ನಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಇಂತಹ ಪಕ್ಷ ದ್ರೋಹಿಗಳನ್ನು ಮನೆಗೆ ಕಳುಹಿಸಬೇಕು. 15 ವರ್ಷ ಅವರನ್ನು ಶಾಸಕರನ್ನಾಗಿ ಮಾಡಿ ನಾವು ಅನುಭವಿಸುತ್ತಿದ್ದೇವೆ. ಏನೇನು ಮಾಡಿದ್ದಾರೆಂದು ತಾಕತ್ ಇದ್ದರೆ ಹೇಳಲಿ, ಚರ್ಚೆಗೆ ಬರಲಿ ಎಂದು ಸವಾಲೆಸೆದಿದ್ದರು.
ಶಿವಲಿಂಗೇಗೌಡರ ಚರಿತ್ರೆ ಎಳೆಎಳೆಯಾಗಿ ಬಿಚ್ಚಿಡುತ್ತೇನೆ. ಇವರಿಗೆ ಮಾನ, ಮರ್ಯಾದೆ ಇದೆಯಾ? ಅರಸೀಕೆರೆಯಲ್ಲಿ ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡಿರುವ ವ್ಯಕ್ತಿ. ಈ ಬಾರಿ ಕುಮಾರಣ್ಣನ ಸರ್ಕಾರ ಬರುವುದನ್ನು ತಪ್ಪಿಸಲು ಆಗುವುದಿಲ್ಲ. 2 ವರ್ಷಗಳಿಂದ ಜೆಡಿಎಸ್ನಲ್ಲೇ ಇರುತ್ತೇನೆ ಎಂದು ಆಣೆ ಬೇರೆ ಮಾಡಿದ್ದರು. ಎಲ್ಲೂ ಹೋಗಲ್ಲ ದೇವರಾಣೆ, ನಮ್ಮ ತಾಯಾಣೆ, ಅಪ್ಪನಾಣೆ ಅಂದಿದ್ದರು. ಮಾನ, ಮರ್ಯಾದೆ ಇದ್ದಿದ್ದರೆ ಅವತ್ತೇ ರಾಜೀನಾಮೆ ಕೊಡಬೇಕಿತ್ತು. ಇನ್ನೂ ಮಾರ್ಚ್ 21ರವರೆಗೆ ಜೆಡಿಎಸ್ ಹೆಸರಲ್ಲಿ ಲೂಟಿ ಮಾಡಲಿದ್ದಾರೆ ಎಂದು ರೇವಣ್ಣ ಕಿಡಿಕಾರಿದ್ದರು.
ಇದನ್ನೂ ಓದಿ: JDSನಲ್ಲಿ ಟಿಕೆಟ್ ಗೊಂದಲ ಮೇಲ್ನೋಟಕ್ಕೆ ಮಾತ್ರ ಕಾಣುತ್ತಿದೆ, ಆದರೆ ಒಳಗೆ ಬೇರೆಯೇ ಇದೆ ಎಂದ ಬಂಡೆಪ್ಪ ಕಾಶಂಪುರ್
ಇಡೀ ದೇಶದಲ್ಲಿ ಕಾಂಗ್ರೆಸ್ ಟೋಪಿ ಹಾಕಿ ಮುಳುಗಿ ಹೋಗಿದೆ. ಇನ್ನು ಇವರ ಚರಿತ್ರೆಗಳು ಏನೇನಿದೆ ಎಂಬುದನ್ನು ದಾಖಲೆ ಸಮೇತ ಜಾಲಾಡ್ತೀನಿ. ಇಂತಹ ಕಳ್ಳರನ್ನು ಮನೆಗೆ ಕಳುಹಿಸುತ್ತೇನೆ ಎಂದು ರೇವಣ್ಣ ವಾಗ್ದಾಳಿ ನಡೆಸಿದ್ದರು.
ಮೂರನೇ ದಿನಕ್ಕೆ ಕಾಲಿಟ್ಟ ಪಂಚರತ್ನ ಯಾತ್ರೆ
ಹಾಸನ ಜಿಲ್ಲೆಯಲ್ಲಿ ಮೂರನೇ ದಿನ ಪಂಚರತ್ನ ಯಾತ್ರೆ ಮುಂದುವರೆದಿದೆ. ಹೊಳೆನರಸೀಪುರ ಕ್ಷೇತ್ರದಲ್ಲಿ ಸಾಗುತ್ತಿರುವ 83ನೇ ಪಂಚರತ್ನ ಯಾತ್ರೆ, ಕ್ಷೇತ್ರದ ಬಾಗೇಶಪುರದಿಂದ ಆರಂಭಿಸಲಾಗಿದೆ. ಕಿತ್ತನಕೆರೆ, ದುದ್ದ, ಶಾಂತಿಗ್ರಾಮ, ಉದಯಪುರ ಮೂಲಕ ಸಾಗಿ ಹೊಳೆನರಸೀಪುರದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಶಾಸಕ ಮಾಜಿ ಸಚಿವ ರೇವಣ್ಣ ಸಾಥ್ ನೀಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:16 pm, Wed, 15 March 23