ಬೆಂಗಳೂರು: ಪರಿಷತ್, ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಂದು ಮಧ್ಯಾಹ್ನ ರಾಜ್ಯ ಬಿಜೆಪಿ ಕೋರ್ ಕಮಿಟಿ (BJP Core Committee) ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ನೇರವಾಗಿ ಸಮಧಾನ ಹೊರಹಾಕಿದ್ದಾರೆ. ಸಚಿವರು ಪಕ್ಷ, ಸರ್ಕಾರವನ್ನು ರಾಜಕೀಯವಾಗಿ ಯಾವೊಬ್ಬ ಸಚಿವರುಗಳು ಸಮರ್ಥಿಸಿಕೊಂಡಿಲ್ಲ. ಕೇವಲ ತಮ್ಮ ಇಲಾಖೆ ಬಗ್ಗೆ ಮಾತ್ರ ಹೇಳಿಕೊಂಡು ಕುಳಿತಿದ್ದಾರೆ ಎಂದು ಹೇಳಿದರು.
ಇನ್ನು ಮುಂದೆ ಹೀಗೆ ಮುಂದುವರಿಯದಂತೆ ಸಭೆಯಲ್ಲಿ ಎಚ್ಚರಿಕೆ ನೀಡಿದ ಅರುಣ್ ಸಿಂಗ್, ವಾರದಲ್ಲಿ 10 ಸಚಿವರು ಪಕ್ಷದ ಕಚೇರಿಗೆ ಬಂದು ಮಾತಾಡಬೇಕು. ರಾಜಕೀಯವಾಗಿ ವಿಷಯಾಧಾರಿತ ಸಮರ್ಥನೆ ಮಾಡಿಕೊಳ್ಳಬೇಕು. ಮಾಧ್ಯಮದಲ್ಲಿ ವಿಷಯಾಧಾರಿತ ಸಮರ್ಥನೆ ಮಾಡಿಕೊಳ್ಳಬೇಕು. ಯಾವ ಸಚಿವರು ಬರುವುದಿಲ್ಲವೋ ಅವರ ಪಟ್ಟಿ ನನಗೆ ನೀಡಬೇಕು ಎಂದು ಸೂಚನೆ ನೀಡಿದರು.
ಪರಿಷತ್ ಸ್ಥಾನಕ್ಕೆ ವಿಜಯೇಂದ್ರ ಹೆಸರು- ಬೊಮ್ಮಾಯಿ: ಪರಿಷತ್ ಸ್ಥಾನಕ್ಕೆ ವಿಜಯೇಂದ್ರ ಹೆಸರು ಶಿಫಾರಸಿಗೆ ನಿರ್ಧಾರ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಭೆ ಬಳಿಕ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿಜಯೇಂದ್ರ ಹೆಸರು ಪ್ರಸ್ತಾಪಿಸಿದ್ದರು. ನಾವು ಹೆಸರು ಕಳಿಸುತ್ತೇವೆ, ಮೇಲಿನವರು ತೀರ್ಮಾನ ಮಾಡುತ್ತಾರೆ ಎಂದು ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಐವರ ಹೆಸರನ್ನು ಶಿಫಾರಸು ಮಾಡಿದ ರಾಜ್ಯ ಬಿಜೆಪಿ ನಾಯಕರು: ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಲ್ಲ ಸ್ಥಾನಗಳಿಗೂ ಐವರ ಹೆಸರು ಶಿಫಾರಸು ಮಾಡಲಾಗಿದೆ. ಪರಿಷತ್ ಅಭ್ಯರ್ಥಿ ಸ್ಥಾನಕ್ಕೆ ಲಕ್ಷ್ಮಣ ಸವದಿ ಹೆಸರಿನ ಬಗ್ಗೆ ಚರ್ಚೆ ನಡೆದಿದೆ. ರಾಜ್ಯಸಭೆ 2 ಸ್ಥಾನಗಳಲ್ಲಿ ಮೊದಲ ಸ್ಥಾನಕ್ಕೆ ಹಾಲಿ ಸದಸ್ಯರಾದ ನಿರ್ಮಲಾ ಸೀತಾರಾಮನ್, ರಾಜ್ಯಸಭಾ 2ನೇ ಸ್ಥಾನಕ್ಕೆ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ, ನಿರ್ಮಲ್ ಕುಮಾರ್ ಸುರಾನಾ ಸೇರಿದಂತೆ ಐವರ ಹೆಸರು ಶಿಫಾರಸು ಮಾಡಲಾಗಿದೆ.