ಕಾಂಗ್ರೆಸ್ ಸೇರುವಂತೆ ಸಚಿವ ಶ್ರೀರಾಮುಲುಗೆ ಆಹ್ವಾನ: ಆಪ್ತನಿಂದಲೇ ಬಿಗ್ ಆಫರ್…!
ಈ ಬಾರಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸಚಿವ ಶ್ರೀರಾಮುಲುಗೆ ಕಾಂಗ್ರೆಸ್ ಸೇರುವಂತೆ ಅವರ ಆಪ್ತ ಆಹ್ವಾನ ಕೊಟ್ಟಿದ್ದಾರೆ.
ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು (Minister B Sriramulu) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ(Bellary) ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಭಾರೀ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್‌ನ ಹಾಲಿ ಶಾಸಕ ಬಿ.ನಾಗೇಂದ್ರ ಹಾಗೂ ಶ್ರೀರಾಮುಲು ನಡುವಿನ ಜಿದ್ದಾಜಿದ್ದಿ ಏರ್ಪಡಲಿದೆ. ಇದರ ಮಧ್ಯೆ ನಾಗೇಂದ್ರ ಅವರು ತಮ್ಮ ಎದುರಾಳಿಗೆ ಕಾಂಗ್ರೆಸ್ (Congress) ಬರುವಂತೆ ಆಹ್ವಾನ ನೀಡಿದ್ದಾರೆ.
ಬಳ್ಳಾರಿಯಲ್ಲಿ ಇಂದು(ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡಿಸಲಾಗದ ಶ್ರೀರಾಮುಲು ಬಿಜೆಪಿ ಪಕ್ಷ ಬಿಟ್ಟು ಬರಲಿ. ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬಂದರೆ ಕರೆದುಕೊಳ್ಳುತ್ತೇವೆ ಎಂದು ನೇರವಾಗಿ ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ನೀಡಿದರು.
ಸಿದ್ದರಾಮಯ್ಯ ವಿರುದ್ಧವೂ ಶ್ರೀರಾಮುಲು ಸ್ಪರ್ಧೆ ಮಾಡಿದ್ದು ನಿಜ.. ಆದ್ರೆ, ಇದೀಗ ಮೀಸಲಾತಿ ವಿಚಾರದಲ್ಲಿ ಅತಂತ್ರವಾಗಿರೋ ಶ್ರೀರಾಮುಲು ಕಾಂಗ್ರೆಸ್ ಗೆ ಬರಲಿ. ಸಿದ್ದರಾಮಯ್ಯ ಕಾಂಗ್ರೆಸ್ ತತ್ವ ಸಿದ್ದಾಂತಗಳನ್ನು ಹೇಳುತ್ತಾರೆ ಅದನ್ನು ಒಪ್ಪಿ ಬರಬೇಕು.
ಮೀಸಲಾತಿ ವಿಚಾರದಲ್ಲಿ St ಸಮುದಾಯಕ್ಕೆ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಬಿಜೆಪಿ ಎಸ್ಟಿ ಸಮುದಾಯ ಸಮಾವೇಶಕ್ಕೆ ಯಾವೊಬ್ಬ ವಾಲ್ಮೀಕಿ ಸಮುದಾಯದ ಜನರು ಹೋಗುವುದಿಲ್ಲ. ಈಗಾಗಲೇ ಸರ್ಕಾರದ ವಾಲ್ಮೀಕಿ ಜಯಂತಿಗೆ ಸ್ವಾಮೀಜಿ ಸೇರಿದಂತೆ ಎಲ್ಲರೂ ಬಹಿಷ್ಕಾರ ಹಾಕಿದ್ದಾರೆ. ಮೀಸಲಾತಿ ಕುರಿತು ಮಂತ್ರಿ, ಶಾಸಕ ಸೇರಿದಂತೆ ಯಾರೇ ಮಾತನಾಡಿದರೂ ಕೇಸ್ ಹಾಕ್ತಾರೆ. ವಾಲ್ಮೀಕಿ ಸಮಾಜದ ಎಲ್ಲ ಶಾಸಕರು ಕಾಂಗ್ರೆಸ್ ಗೆ ಬೆಂಬಲ ಕೊಡಿ.. ನಾವು ಮೀಸಲಾತಿ ಕೊಡ್ತೇವೆ ಎಂದು ಹೇಳಿದರು.
ಶ್ರೀರಾಮುಲುಗೆ ಸಿಹಿ ಸುದ್ದಿ ಕೊಡ್ತೇನೆ ಕೊಡ್ತೇನೆ ಎಂದು ಎಲ್ಲರಿಗೂ ಸುಳ್ಳು ಹೇಳ್ತಾರೆ. ಅವರ ಸಿಹಿ ಸುದ್ದಿಯಿಂದ ಎಲ್ಲರಿಗೂ ಶುಗರ್ ಬಂದಿದೆ. ಮೀಸಲಾತಿ ಶ್ರೀರಾಮುಲು ಕೈಯಲ್ಲಿ ಇಲ್ಲ ಅವರಿಗೆ ಸಿಎಂ ಸಪೋರ್ಟ್ ಮಾಡ್ತಿಲ್ಲ. ಮಂತ್ರಿ ಮಂಡಲ ಸಹಕಾರ ಮಾಡ್ತಿಲ್ಲ. ಸರ್ಕಾರದಲ್ಲಿ ಶ್ರೀರಾಮುಲು ಪ್ರಭಾವಿಯಾಗಿದ್ರೆ ಮೀಸಲಾತಿ ಕೊಡಿಸಬೇಕಿತ್ತು ಎಂದು ಟಾಂಗ್ ಕೊಟ್ಟರು.
ಶಿಕ್ಷಕರಿಗೆ ಸೀರೆ ಆಮೀಷ ಶ್ರೀರಾಮುಲು ಪಾಪದ ಹಣದಲ್ಲಿ ಶಿಕ್ಷಕರಿಗೆ ಸೀರೆ ವಿತರಣೆಕ್ಕೆ ಪ್ರತಿಕ್ರಿಯಿಸಿದ ನಾಗೇಂದ್ರ, ರಾಮುಲು ಅವರು ಹೊಡೆದ ಕಮಿಷನ್ ನಲ್ಲಿ ಶಿಕ್ಷಕರಿಗೂ ಸೀರೆ ಕೊಡುವ ಮೂಲಕ ಕಮಿಷನ್ ನೀಡುತ್ತಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಿಂದ ಶಿಕ್ಷಕರಿಗೆ ಸೀರೆ. ಕಾಲೇಜು ವಿದ್ಯಾರ್ಥಿಗಳಿಗೆ ವಾಟರ್ ಬಾಟಲ್ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಾಕಷ್ಟು ಶಿಕ್ಷಕರು. ಎಸ್ ಡಿಎಂಸಿ ಸದಸ್ಯರು ಸೀರೆ ವಾಪಸ್ ಮಾಡುತ್ತಿದ್ದಾರೆ. ಶ್ರೀರಾಮುಲು ವಿತರಣೆ ಮಾಡುತ್ತಿರುವ ಸೀರೆ ತಗೆದುಕೊಳ್ಳಲು ಶಿಕ್ಷಕರು ಇಷ್ಟಪಡುತ್ತಿಲ್ಲ ಎಂದರು.
ಬೊಮ್ಮಾಯಿ ಸರ್ಕಾರದ ಗುಟ್ಟು ರಟ್ಟು ಇನ್ನು ಇದೇ ವೇಳೆ ಪೇ ಸಿಎಂ ಅಭಿಯಾನದ ಬಗ್ಗೆ ಮಾತನಾಡಿ, ಬೆಂಗಳೂರು ಒಂದೇ ಅಲ್ಲ ಇಡೀ ರಾಜ್ಯಾದ್ಯಂತ ಪೇ ಸಿಎಂ ಅಭಿಯಾನವನ್ನ ಮಾಡ್ತಿದ್ದೇವೆ. 224 ಕ್ಷೇತ್ರಗಳಲ್ಲೂ ಪೇ ಸಿಎಂ ಭಿತ್ತಿಪತ್ರ ಅಂಟಿಸುವ ಮೂಲಕ 40 ಪರ್ಸೆಂಟ್ ಸರ್ಕಾರ ಅಂತ ತೋರಿಸುತ್ತಿದ್ದೇವೆ. ಪೇ ಸಿಎಂ ಅಭಿಯಾನ ನೋಡಿ ಬಿಹಾರ್ ಜಮ್ಮು ಕಾಶ್ಮೀರ್ ಸೇರಿದಂತೆ ಹೊರ ರಾಜ್ಯದ ಶಾಸಕರೂ ಆಶ್ಚರ್ಯ ಪಡುತ್ತಿದ್ದಾರೆ. 40 ಪರ್ಸೆಂಟ್ ಮಾಡಿದಾರಾ ಅಂತ ಆಶ್ಚರ್ಯದಿಂದ ಕೇಳುತ್ತಿದ್ದಾರೆ. ಬೊಮ್ಮಾಯಿ ಸರ್ಕಾರ 40 ಪರ್ಸೆಂಟ್ ಅನ್ನ ಗುಟ್ಟಾಗಿ ಮಾಡ್ತಿದೆ, ಅವರ ಗುಟ್ಟನ್ನ ನಾವು ರಟ್ಟು ಮಾಡಿದ್ದೇವೆ ಎಂದು ಹೇಳಿದರು.
ಬಳ್ಳಾರಿ ಗ್ರಾಮೀಣದ ಮೇಲೆ ರಾಮುಲು ಕಣ್ಣು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಶ್ರೀರಾಮುಲು ಸೋತಿದ್ದರು. ಆಗ ರಾಜ್ಯದ ಗಮನ ಸೆಳೆದ ಶ್ರೀರಾಮುಲು ಇದೀಗ ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣದ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಆದರೆ ಮತ್ತೊಂದೆಡೆ ರಾಮುಲು ಆಪ್ತ ಕಾಂಗ್ರೆಸ್ ಶಾಸಕ ನಾಗೇಂದ್ರ ಕೂಡ ಇದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯಲು ಮುಂದಾಗಿರುವುದು ಸಂಚಲನ ಮೂಡಿಸಿದೆ.
ಶ್ರೀರಾಮುಲು ಹಾಗೂ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರು ಒಂದು ಕಾಲದಲ್ಲಿ ಆಪ್ತರಾಗಿದ್ದರು, ಆದ್ರೆ, ಬದಲಾದ ರಾಜಕೀಯ ವಿದ್ಯಾಮನಗಳಿಂದ ನಾಗೇಂದ್ರ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದ್ರೆ,, ಇದೀಗ ಶ್ರೀರಾಮುಲು ಸಹ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಆಸಕ್ತಿ ತೋರಿದ್ದಾರೆ. ಆದ್ರೆ, ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ