ಕಾಶ್ಮೀರ: ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಮುಂದಿನ ನಡೆಯ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಕಾಂಗ್ರೆಸ್ ತೊರೆದು ಅವರು ಬಿಜೆಪಿ ಸೇರಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ, ಕಾಂಗ್ರೆಸ್ಗೆ (Congress) ರಾಜೀನಾಮೆ ನೀಡಿದ ದಿನವೇ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರವನ್ನು ಘೋಷಿಸಿದ್ದರು. ಹೊಸ ಪಕ್ಷ ಕಟ್ಟಲು ನಿರ್ಧರಿಸಿರುವ ಗುಲಾಂ ನಬಿ ಆಜಾದ್ ಇನ್ನು 14 ದಿನಗಳಲ್ಲಿ ತಮ್ಮ ನೂತನ ಪಕ್ಷದ ಘೋಷಣೆ ಮಾಡಲಿದ್ದಾರೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಚಿವ ತಾಜ್ ಮೊಹಿಯುದ್ದೀನ್ ಹೇಳಿದ್ದಾರೆ.
ಕಾಂಗ್ರೆಸ್ ತೊರೆದಿರುವ ಗುಲಾಂ ನಬಿ ಆಜಾದ್ ಜಮ್ಮು ಕಾಶ್ಮೀರದಲ್ಲಿ ಹೊಸ ಪಕ್ಷವನ್ನು ಪ್ರಾರಂಭಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿರುವ ಗುಲಾಂ ನಬಿ ಆಜಾದ್ ತಮ್ಮ ತವರು ನೆಲದಲ್ಲಿ ತಮ್ಮ ಹೊಸ ಪಕ್ಷವನ್ನು ಪ್ರಾರಂಭಿಸಲು ಬಯಸಿದ್ದಾರೆ. “ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುತ್ತೇನೆ. ನಾನು ನನ್ನ ರಾಜ್ಯದಲ್ಲಿ ನನ್ನದೇ ಆದ ಪಕ್ಷವನ್ನು ರಚಿಸುತ್ತೇನೆ. ನಂತರ ರಾಷ್ಟ್ರ ರಾಜಕಾರಣದ ಬಗ್ಗೆ ಪರಿಶೀಲಿಸುತ್ತೇನೆ” ಎಂದು ಗುಲಾಂ ನಬಿ ಆಜಾದ್ ಹೇಳಿದ್ದರು. ಈ ವರ್ಷದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: Big News: ಕಾಂಗ್ರೆಸ್ಗೆ ರಾಜೀನಾಮೆ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷ ಕಟ್ಟಲು ಗುಲಾಂ ನಬಿ ಆಜಾದ್ ನಿರ್ಧಾರ
73 ವರ್ಷದ ಗುಲಾಂ ನಬಿ ಆಜಾದ್ ಇಂದು ಕಾಂಗ್ರೆಸ್ನ ತನ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಕಾಂಗ್ರೆಸ್ನ ಹಲವಾರು ಪ್ರಮುಖ ನಾಯಕರು ಪಕ್ಷಕ್ಕೆ ವಿದಾಯ ಹೇಳುತ್ತಿರುವುದರಿಂದ ಕಾಂಗ್ರೆಸ್ಗೆ ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ 5 ಪುಟಗಳ ಸುದೀರ್ಘ ಪತ್ರದಲ್ಲಿ ಗುಲಾಂ ನಬಿ ಆಜಾದ್ ತಾವು ಕಾಂಗ್ರೆಸ್ನಿಂದ ದೂರ ಸರಿಯುತ್ತಿರುವುದಕ್ಕೆ ಪಕ್ಷದಲ್ಲಿ ಹಿರಿಯ ನಾಯಕರನ್ನು ದೂರವಿಡುವುದು ಮತ್ತು ಪಕ್ಷದಲ್ಲಿ ಬೆಳೆಯುತ್ತಿರುವ ಪಕ್ಷಪಾತವೇ ಕಾರಣ ಎಂದು ಆರೋಪಿಸಿದ್ದರು. ಅಲ್ಲದೆ, ರಾಹುಲ್ ಗಾಂಧಿಯನ್ನು “ಅಪ್ರಬುದ್ಧ” ಎಂದು ಗುಲಾಂ ನಬಿ ಆಜಾದ್ ಟೀಕಿಸಿದ್ದರು.
ಎಎನ್‌ಐ ವರದಿಗಳ ಪ್ರಕಾರ, ಗುಲಾಂ ನಬಿ ಆಜಾದ್ ನೇತೃತ್ವದ ಪಕ್ಷವು ಒಮರ್ ಅಬ್ದುಲ್ಲಾ ಅವರ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಮತ್ತು ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯೊಂದಿಗೆ ಮೈತ್ರಿಗೆ ಮುಕ್ತವಾಗಿರುತ್ತದೆ ಎಂದು ಮೊಹಿಯುದ್ದೀನ್ ಹೇಳಿದ್ದಾರೆ.
ಇದನ್ನೂ ಓದಿ: Breaking: ಕಾಂಗ್ರೆಸ್‌ನಲ್ಲಿ ಮುಂದುವರೆದ ರಾಜೀನಾಮೆ ಪರ್ವ: ಗುಲಾಂ ನಬಿ ಬೆನ್ನಲ್ಲೇ ಮತ್ತಷ್ಟು ಹಿರಿಯ ನಾಯಕರ ರಾಜೀನಾಮೆ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಮೊಹಿಯುದ್ದೀನ್, ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ನಾವು ಸ್ವಂತ ಪಕ್ಷ ರಚಿಸುತ್ತೇವೆ. ಈ ಬಗ್ಗೆ ಮುಂದಿನ 14 ದಿನಗಳಲ್ಲಿ ಘೋಷಣೆ ಮಾಡುತ್ತೇವೆ. ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸುತ್ತೇವೆ. ನಾವು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ. ಆದರೆ ನಮಗೆ ಸೀಟು ಬೇಕಾದರೆ ಮಾತ್ರ NC ಅಥವಾ PDP ಜೊತೆಗೆ ಸಮ್ಮಿಶ್ರ ಸರ್ಕಾರ ರಚಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ಗುಲಾಂ ನಬಿ ಆಜಾದ್ ಅವರ ಪಾತ್ರದ ಬಗ್ಗೆ ಶ್ಲಾಘಿಸಿದ ಮಾಜಿ ಸಚಿವ ಮೊಹಿಯುದ್ದೀನ್, “ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಂದ ಇಂದಿನ ನಾಯಕರವರೆಗೂ ಗುಲಾಂಬ ನಬಿ ಆಜಾದ್ ಸಾಹಿಬ್ ಕಾಂಗ್ರೆಸ್‌ನಲ್ಲಿ ಬಹಳ ಅಚ್ಚುಮೆಚ್ಚಿನವರಾಗಿದ್ದರು. ಅವರು ಕಾಂಗ್ರೆಸ್ ಎತ್ತರಕ್ಕೆ ಬೆಳೆಯಲು ಪ್ರಮುಖ ಪಾತ್ರ ವಹಿಸಿದರು. ಅವರು ಸೋನಿಯಾ ಗಾಂಧಿಗೆ ಭಾರೀ ಬೆಂಬಲ ನೀಡಿದ ಪ್ರಮುಖ ನಾಯಕರಾಗಿದ್ದರು ಎಂದಿದ್ದಾರೆ.
Published On - 9:07 am, Mon, 29 August 22