Bihar ByElection ಬಿಹಾರದ ಮೊಕಾಮಾ ವಿಧಾನಸಭಾ ಉಪಚುನಾವಣೆಯಲ್ಲಿ ಆರ್‌ಜೆಡಿಯ ನೀಲಮ್ ದೇವಿಗೆ ಗೆಲುವು

ಆರ್‌ಜೆಡಿ ಶಾಸಕ ಅನಂತ್ ಸಿಂಗ್ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ದೋಷಿ ಎಂದು ಅನರ್ಹಗೊಳಿಸಿದ ನಂತರ ಮೊಕಾಮಾ ಸ್ಥಾನ ತೆರವಾಗಿತ್ತು. ಸಿಂಗ್ ಅವರ ಪತ್ನಿ ನೀಲಮ್ ದೇವಿ ಅವರನ್ನು ತೇಜಸ್ವಿ ಯಾದವ್ ಪಕ್ಷದಿಂದ ಕಣಕ್ಕೆ ಇಳಿಸಲಾಯಿತು.

Bihar ByElection ಬಿಹಾರದ ಮೊಕಾಮಾ ವಿಧಾನಸಭಾ ಉಪಚುನಾವಣೆಯಲ್ಲಿ ಆರ್‌ಜೆಡಿಯ ನೀಲಮ್ ದೇವಿಗೆ ಗೆಲುವು
ನೀಲಂ ದೇವಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 06, 2022 | 1:31 PM

ಬಿಹಾರದ ಮೊಕಾಮಾ ವಿಧಾನಸಭಾ ಉಪಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳದ (RJD) ನೀಲಮ್ ದೇವಿ (Neelam Devi) ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸೋನಮ್ ದೇವಿ ಅವರನ್ನು ಪರಾಭವಗೊಳಿಸಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷ ಜೆಡಿಯು ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡ ನಂತರ ಬಿಹಾರದಲ್ಲಿ ಆಡಳಿತಾರೂಢ ಮಹಾಮೈತ್ರಿಕೂಟ (GA) ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ಮೊದಲ ಚುನಾವಣಾ ಮುಖಾಮುಖಿಯಾಗಿದೆ ಇದು. ಆರ್‌ಜೆಡಿ ಶಾಸಕ ಅನಂತ್ ಸಿಂಗ್ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ದೋಷಿ ಎಂದು ಅನರ್ಹಗೊಳಿಸಿದ ನಂತರ ಮೊಕಾಮಾ ಸ್ಥಾನ ತೆರವಾಗಿತ್ತು. ಸಿಂಗ್ ಅವರ ಪತ್ನಿ ನೀಲಮ್ ದೇವಿ ಅವರನ್ನು ತೇಜಸ್ವಿ ಯಾದವ್ ಪಕ್ಷದಿಂದ ಕಣಕ್ಕೆ ಇಳಿಸಲಾಯಿತು.

ನನ್ನ ಗೆಲುವು ನಿಶ್ಚಿತವಾಗಿತ್ತು. ನನ್ನ ಸ್ಪರ್ಧೆಯಲ್ಲಿ ಬೇರೆ ಯಾರೂ ಇಲ್ಲ ಎಂದು ಮೊದಲೇ ಹೇಳಿದ್ದೆ. ಇದು ಕೇವಲ ಔಪಚಾರಿಕವಾಗಿತ್ತು. ಮೊಕಾಮಾ ಪರಶುರಾಮನ ಭೂಮಿ, ಜನರು ಆಮಿಷಕ್ಕೆ ಒಳಗಾಗುವುದಿಲ್ಲ. ವಿಧಾಯಕ್ ಜಿ (ಅನಂತ್ ಸಿಂಗ್) ಜನರ ಸೇವೆ ಮಾಡಿದರು. ಅವರು ಈಗ ಫಲಿತಾಂಶವನ್ನು ನೀಡುತ್ತಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ನೀಲಮ್ ಹೇಳಿದ್ದಾರೆ.

2005 ರಿಂದ ಮೊಕಾಮಾ, ಅನಂತ್ ಸಿಂಗ್ ಅವರ ಭದ್ರಕೋಟೆಯಾಗಿದೆ. ಅವರು ಜೆಡಿಯು ಟಿಕೆಟ್‌ನಲ್ಲಿ ಎರಡು ಬಾರಿ ಸ್ಥಾನವನ್ನು ಗೆದ್ದಿದ್ದಾರೆ. ಸಿಂಗ್ ಅವರು 2020 ರ ಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸ್ಥಾನವನ್ನು ಉಳಿಸಿಕೊಂಡರು. ಆದರೆ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಯಾದ ನಂತರ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಯಿತು. ಏತನ್ಮಧ್ಯೆ, ಗೋಪಾಲ್‌ಗಂಜ್‌ನಲ್ಲಿ ಬಿಜೆಪಿಯ ಕುಸುಮ್ ದೇವಿ ಅವರು ಆರ್‌ಜೆಡಿಯ ಮೋಹನ್ ಪ್ರಸಾದ್ ಗುಪ್ತಾ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ಟ್ರೆಂಡ್‌ಗಳು ತೋರಿಸಿವೆ. 6.10 ಲಕ್ಷ ಮತದಾರರಲ್ಲಿ ಗೋಪಾಲ್‌ಗಂಜ್ (3.31 ಲಕ್ಷ) ಮತ್ತು ಮೊಕಾಮಾ (2.70 ಲಕ್ಷ) ಅಂದರೆ 52.3 ರಷ್ಟು ಜನರು ನವೆಂಬರ್ 3 ರಂದು ಎರಡು ಸ್ಥಾನಗಳಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಒಟ್ಟು 619 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗೋಪಾಲ್‌ಗಂಜ್‌ನಲ್ಲಿ ಒಂಬತ್ತು ಮತ್ತು ಮೊಕಾಮಾದಲ್ಲಿ ಆರು ಹೀಗೆ ಹದಿನೈದು ಅಭ್ಯರ್ಥಿಗಳು ಕಣದಲ್ಲಿದ್ದರು.

Published On - 12:42 pm, Sun, 6 November 22