ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ವಿಪಕ್ಷಗಳನ್ನು ಎದುರಿಸುವ ಕುರಿತು ಸಭೆಯಲ್ಲಿ ಚರ್ಚೆ

TV9 Digital Desk

| Edited By: ganapathi bhat

Updated on:Sep 13, 2021 | 11:01 PM

BJP: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬಿಎಲ್​ಪಿ ಸಭೆ ನಡೆಸಲಾಗಿದೆ. ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಿಎಲ್​ಪಿ ಸಭೆ ಇದಾಗಿದೆ. ಶಾಸಕಾಂಗ ಪಕ್ಷದ ಸಭೆ ನೆಪದಲ್ಲಿ ಶಾಸಕರ ವಿಶ್ವಾಸ ಗಳಿಸುವ ಯೋಚನೆ ಇದೆ ಎಂದೂ ಹೇಳಲಾಗುತ್ತಿದೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ವಿಪಕ್ಷಗಳನ್ನು ಎದುರಿಸುವ ಕುರಿತು ಸಭೆಯಲ್ಲಿ ಚರ್ಚೆ
ಪ್ರಾತಿನಿಧಿಕ ಚಿತ್ರ

Follow us on

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಇಂದು (ಸೆಪ್ಟೆಂಬರ್ 13) ನಡೆದಿದೆ. ಸಭೆಯಲ್ಲಿ ವಿಪಕ್ಷಗಳನ್ನ ಎದುರಿಸುವ ಕುರಿತು ಮಾತುಕತೆ ನಡೆಸಲಾಗಿದೆ. ವಿಪಕ್ಷಗಳಿಗೆ ತಕ್ಕ ಉತ್ತರ ಕೊಡಲು ಸಭೆಯಲ್ಲಿ ತಂತ್ರಗಾರಿಕೆ ಹೆಣೆಯುವ ಬಗ್ಗೆ ಚರ್ಚಿಸಲಾಗಿದೆ. ಸಚಿವರು ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಕುರಿತು ಚರ್ಚೆ ಮಾಡಲಾಗಿದೆ. ಸಚಿವರು, ಶಾಸಕರು ಸರ್ಕಾರದ ಬೆನ್ನಿಗೆ ನಿಲ್ಲುವಂತೆ ಸೂಚನೆ ಕೊಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಕಳೆದ ಕೆಲವು ಸಮಯದಿಂದ ಕಾಂಗ್ರೆಸ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಬೆಲೆ ಏರಿಕೆಯೇ ಕಾಂಗ್ರೆಸ್​​​ನ ಮುಖ್ಯ ಅಜೆಂಡವಾದ ಹಿನ್ನೆಲೆಯಲ್ಲಿ, ಯುಪಿಎ ಅಧಿಕಾರದಲ್ಲಿ ಇದ್ದ ಅವಧಿಯ ಬೆಲೆ ಏರಿಕೆ ವಿಷಯ ಪ್ರಸ್ತಾಪಕ್ಕೆ ಸೂಚನೆ ನೀಡಲಾಗಿದೆ. ಅಂದಿನ ಬೆಲೆ ಏರಿಕೆ ವಿಷಯ ಅಸ್ತ್ರವಾಗಿ ಬಳಸಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿರುವ ವಿಚಾರ ಲಭ್ಯವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಗುಜರಾತ್ ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಗುಜರಾತ್​​ನಿಂದ ಸಿಎಂ ಬೊಮ್ಮಾಯಿ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ನೇರವಾಗಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಸಿಎಂ ಹಾಜರಾಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಜೊತೆಗೆ ಸಚಿವ ಆರ್. ಅಶೋಕ್​, ಡಾ. ಸುಧಾಕರ್ ಸಭೆಗೆ ಆಗಮಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬಿಎಲ್​ಪಿ ಸಭೆ ನಡೆಸಲಾಗಿದೆ. ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಿಎಲ್​ಪಿ ಸಭೆ ಇದಾಗಿದೆ. ಶಾಸಕಾಂಗ ಪಕ್ಷದ ಸಭೆ ನೆಪದಲ್ಲಿ ಶಾಸಕರ ವಿಶ್ವಾಸ ಗಳಿಸುವ ಯೋಚನೆ ಇದೆ ಎಂದೂ ಹೇಳಲಾಗುತ್ತಿದೆ. ಶಾಸಕರ ವಿಶ್ವಾಸ ಗಳಿಸಲು ಸಿಎಂ ಬೊಮ್ಮಾಯಿ ಪ್ಲ್ಯಾನ್​​ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಸಭೆಗೆ ಎಂಎಲ್​​ಸಿಗಳು, ಸಂಸದರನ್ನೂ ಸಿಎಂ ಬೊಮ್ಮಾಯಿ ಆಹ್ವಾನಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ಈ ಮೊದಲು ಬಿ.ಎಸ್. ಯಡಿಯೂರಪ್ಪ ಮಾಡಿದ್ದ ಅಚಾತುರ್ಯ ಸರಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಅಧಿವೇಶ‌ನ ಸಂದರ್ಭದಲ್ಲಿ ಬಿಎಲ್‌ಪಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲದೆ, ಇಂದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಖಡಕ್ ಸೂಚನೆ ನೀಡಿದ್ದಾರೆ. ಏನೇ ಬೇಸರ, ದೂರು ಇದ್ರೂ ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡಬೇಕು. ಹೊರಗಡೆ ಎಲ್ಲೂ ಅಸಮಧಾನವನ್ನ ತೋಡಿಕೊಳ್ಳಬಾರದು. ಬಿಎಲ್​​ಪಿ ಸಭೆ, ಸಿಎಂ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಪ್ರತೀ ಗುರುವಾರ ಸಿಎಂ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಹೇಳಲಾಗಿದೆ. ಹೈಕಮಾಂಡ್ ಸೂಚನೆ ಧಿಕ್ಕರಿಸದಂತೆ ಸಭೆಯಲ್ಲಿ ತಾಕೀತು ಮಾಡಲಾಗಿದೆ.

ಸಭೆ ಬಳಿಕ ಕೈಗೊಂಡ ನಿರ್ಧಾರಗಳ ಬಗ್ಗೆ ಜೆ.ಸಿ. ಮಾಧುಸ್ವಾಮಿ ಮಾಹಿತಿ ಸದನದಲ್ಲಿ ವಿಪಕ್ಷಗಳನ್ನ ಎದುರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಶಾಸನ ಸಭೆಯಲ್ಲಿ ಬರಬಹುದಾದ ವಿಧೇಯಕಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲ ಸದಸ್ಯರೂ ಸದನದಲ್ಲಿ ಸಕ್ರಿಯವಾಗಿ ಇರಲೇಬೇಕು. ಎಲ್ಲ ನಿರ್ಧಾರಗಳಿಗೆ ರಾಜ್ಯದ ಜನರ ಮುಂದೆ ಸಾಕ್ಷಿ ಆಗಬೇಕು. ಸದನ ನಡೆಯುವಾಗ ಪ್ರತಿ ಮಂಗಳವಾರ ಸಂಜೆ 6.30ಕ್ಕೆ ಸಭೆ ನಡೆಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಶಾಸಕಾಂಗ ಪಕ್ಷದ ಸಭೆ ನಡೆಸಬೇಕೆಂದು ತೀರ್ಮಾನಿಸಿದ್ದೇವೆ. ಪ್ರತಿ ಗುರುವಾರ ಶಾಸಕರಿಗೆ ಸಿಎಂ ಸಮಯ ಮೀಸಲಿಡಬೇಕು. ಶಾಸಕರ ಎಲ್ಲಾ ಸಮಸ್ಯೆ ಬಗೆಹರಿಸಲು ಅವಕಾಶ ನೀಡಬೇಕು ಎಂಬ ಬಗ್ಗೆ ಬಿಎಲ್​ಪಿ ಸಭೆ ನಂತರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಿಸಲು ತಿದ್ದುಪಡಿ ತರುತ್ತಿದ್ದೇವೆ. ಪಂಚಾಯಿತಿ ಕ್ಷೇತ್ರ ಮರು ಹಂಚಿಕೆಗಾಗಿ ಪ್ರತ್ಯೇಕ ಆಯೋಗ ರಚನೆಗೆ ತೀರ್ಮಾನ ಮಾಡಲಾಗಿದೆ. ಸೌಹಾರ್ದ ಕೋ ಆಪರೇಟಿವ್ ಸಂಘಗಳನ್ನ ಸಹಕಾರ ತತ್ವದಡಿ ತರಬೇಕೆಂಬ ಚರ್ಚೆ ಇದೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ. ಬಿಎಲ್​ಪಿ ಸಭೆ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ಮಾಡಲಾಗಿದೆ. ಜೈಲುಗಳ ಸುಧಾರಣೆ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಡ್ರಗ್​ ಪೆಡ್ಲರ್​​​ಗಳ ವಿರುದ್ಧ ಮತ್ತಷ್ಟು ಕಠಿಣ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ಕೆಲ ಹೊಸ ಶಾಸನಗಳನ್ನ ಜಾರಿಗೊಳಿಸಲು ನಿರ್ಧಾರ ಮಾಡಲಾಗಿದೆ. ಪಕ್ಷದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಕುರಿತು ಚರ್ಚಿಸಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಒಳ್ಳೆಯ ಬೆಳವಣಿಗೆಗಳು ಆಗಿವೆ ಎಂದು ಹೇಳಿದ್ದಾರೆ.

ಅಧಿವೇಶನದ ಕುರಿತು ಸಭೆಯಲ್ಲಿ ವಿಸ್ತಾರವಾಗಿ ಚರ್ಚೆ ನಡೆದಿದೆ. ಇಂದಿನ ಸಭೆಯಲ್ಲಿ ಶಾಸಕರ ಕ್ಷೇತ್ರಗಳ ಕುರಿತು ಮಾತನಾಡಿಲ್ಲ. ಕಾಂಗ್ರೆಸ್​ ನಾಯಕರ ಇಂದಿನ ಪ್ರತಿಭಟನೆ ಕುರಿತು ಉತ್ತರಿಸ್ತೇವೆ. ಅಧಿವೇಶನದಲ್ಲೇ ಕಾಂಗ್ರೆಸ್​ ನಾಯಕರಿಗೆ ಉತ್ತರವನ್ನ ನೀಡುತ್ತೇವೆ. ಇಂದಿನ ಸಭೆಯಲ್ಲಿ ಪಾಲಿಕೆ ಚುನಾವಣೆ ವಿಚಾರದ ಬಗ್ಗೆ ಚರ್ಚಿಸಿಲ್ಲ ಎಂದು ಬಿಎಲ್​ಪಿ ಸಭೆ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.

ಎವಿಡೆನ್ಸ್ ಆ್ಯಕ್ಟ್​​ಗೆ ತಿದ್ದುಪಡಿ ತರುತ್ತಿದ್ದೇವೆ. ನಗರಾಭಿವೃದ್ಧಿ ಇಲಾಖೆ ಬೇರೆಬೇರೆ ವಿಭಾಗದಲ್ಲಿ ಕೆಲಸ ಮಾಡ್ತಿತ್ತು. ಬೇರೆ ನಗರ ಯೋಜನೆಗೆ ಸಂಬಂಧಿಸಿದ ಇಲಾಖೆ ಒಪ್ಪಿಗೆ ಬೇಕಿತ್ತು. ಅದೆಲ್ಲವನ್ನೂ ಒಂದೇ ಅಡಿಯಲ್ಲಿ ತರುವ ಬಗ್ಗೆ ವಿಧೇಯಕ ತರುತ್ತೇವೆ. ಇದೆಲ್ಲ ಶಾಸಕರಿಗೆ ಮನದಟ್ಟು ಮಾಡಿಕೊಡುವ ಕೆಲಸ ಮಾಡಿದ್ದೇವೆ ಎಂದು ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ ಇರುವುದರಿಂದ ಎತ್ತುಗಳು ಉಳಿದಿವೆ: ಕಾಂಗ್ರೆಸ್ ಪ್ರತಿಭಟನೆಗೆ ನಳಿನ್ ಕುಮಾರ್ ಕಟೀಲ್ ತಿರುಗೇಟು

ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ- ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್​ ಶಾಸಕರು; ಸಿದ್ದರಾಮಯ್ಯ ಶಿವಕುಮಾರ್​ ಬಚಾವ್​

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada