ಬೆಂಗಳೂರು, ಏಪ್ರಿಲ್ 9: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಕಾಂಗ್ರೆಸ್ (Congress) ಹಾಗೂ ಬಿಜೆಪಿ ಮಧ್ಯೆ ಚದುರಂಗದಾಟ ಶುರುವಾಗಿದೆ. ಅದರಲ್ಲೂ ಹಳೇ ಮೈಸೂರು ಭಾಗವನ್ನು ಗೆಲ್ಲಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ತಂತ್ರಗಾರಿಕೆ ಮಾಡುತ್ತಿದ್ದರೆ, ಅದಕ್ಕೆ ಬಿಜೆಪಿ (BJP) ಚೆಕ್ ಮೇಟ್ ಇಡುತ್ತಿದೆ. ಅದರಲ್ಲಿಯೂ ಚಾಮರಾಜನಗರ ಲೋಕಸಭಾ ಅಖಾಡದಲ್ಲಿ ಕಣ ರಂಗೇರಿದೆ. ಆದರೆ, ಇಲ್ಲಿ ಮೊದಲು ಕಾಯಿ ಉರುಳಿಸಿದ್ದು ಸಿದ್ದರಾಮಯ್ಯ. ಇದೀಗ ಸಿದ್ದರಾಮಯ್ಯ ದಾಳಕ್ಕೆ ಚೆಕ್ ಮೇಟ್ ಇಟ್ಟಿರುವುದು ಬಿಜೆಪಿ.
ವಾರದ ಹಿಂದಷ್ಟೇ ಮೈಸೂರು ಚಾಮರಾಜನಗರ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸಂಸದ ಶ್ರೀನಿವಾಸ್ ಹಾಗೂ ಅವರ ಬೆಂಬಲಿಗರನ್ನೇ ಟಾರ್ಗೆಟ್ ಮಾಡಿ ಆಪರೇಷನ್ ಹಸ್ತ ನಡೆಸ್ತಿದ್ದರು. ಸಂಸದ ಶ್ರೀನಿವಾಸ್ ಪ್ರಸಾದ್ ಸಹೋದರ ವಿ.ರಾಮಸ್ವಾಮಿ ಸೇರಿದಂತೆ ಶ್ರೀನಿವಾಸ್ ಪ್ರಸಾದ್ ಬೆಂಬಲಿಗರು ಕಾಂಗ್ರೆಸ್ ಸೇರಿದ್ದರು.
ಇದಷ್ಟೇ ಅಲ್ಲ, ಶ್ರೀನಿವಾಸ್ ಪ್ರಸಾದ್ ಅವರ ಸಹೋದರಿ ಮಗ ಧೀರಜ್ ಪ್ರಸಾದ್ ಕೂಡ ಕಾಂಗ್ರೆಸ್ ಸೇರಿದ್ದಾರೆ. ಅಳಿಯ ಡಾ.ಮೋಹನ್ ಸಹ ಕಾಂಗ್ರೆಸ್ ಸೇರ್ತಾರೆ ಅನ್ನೋ ಮಾತಿದೆ. ಈ ಮಧ್ಯೆ ಏಪ್ರಿಲ್ 3 ರಂದು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ನಾಮ ಪತ್ರ ಸಲ್ಲಿಕೆ ವೇಳೆ ಱಲಿಯಲ್ಲಿ ಮಾತನಾಡಿದ್ದ ಡಿಸಿಎಂ ಡಿಕೆ, ಖುದ್ದು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರೇ ಸುನೀಲ್ ಬೋಸ್ಗೆ ಆಶೀರ್ವಾದ ಮಾಡಿ ಕಳಿಸಿದ್ದಾರೆ ಅಂದಿದ್ದರು.
ಇಷ್ಟೇ ಯಾಕೆ, ಏಪ್ರಿಲ್ 12 ರಂದು ಚಾಮರಾಜನಗದ ಕೊಳ್ಳೆಗಾಲದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಬೃಹತ್ ಆಪರೇಷನ್ ನಡೆಸೋಕೆ ಪ್ಲ್ಯಾನ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಬಿಜೆಪಿ ಚೆಕ್ಮೆಟ್ ಇಟ್ಟಿದೆ. ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲ ಪಡೆದು ಚಾಮರಾಜನಗರದ ಗೆಲ್ಲಬೇಕು ಅಂತಿದ್ದ ಕೈ ಪಡೆಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.
ಯಾವಾಗ ಶ್ರೀನಿವಾಸ್ ಪ್ರಸಾದ್ ಅವರ ಕುಟುಂಬ ಮತ್ತು ಬೆಂಬಲಿಗರನ್ನ ಸಿದ್ದರಾಮಯ್ಯ ಟಾರ್ಗೆಟ್ ಮಾಡಿ ಆಪರೇಷನ್ಗೆ ಮುಂದಾದ್ರೋ, ಇತ್ತ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಂಡಿದೆ. ಹೈಕಮಾಂಡ್ ಸೂಚನ ಮೇರೆಗೆ ನಿನ್ನೆ ಎಸ್.ಬಾಲರಾಜು ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಭಾನುವಾರ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅವರ ಸಂಧಾನವೂ ಸಕ್ಸಸ್ ಆಗಿದೆ. ಅದರ ಫಲಿತಾಂಶವಾಗಿ ಶ್ರೀನಿವಾಸ್ ಪ್ರಸಾದ್, ಬಾಲರಾಜುಗೆ ಬೆಂಬಲ ನೀಡುವುದಾಗಿ ಮಾತು ಕೊಟ್ಟಿದ್ದಾರೆ.
ಚಾಮರಾಜನಗರದಲ್ಲಿ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೂಡಿರುವ ಬಿಜೆಪಿ, ಹಳೇ ಮೈಸೂರು ಭಾಗವನ್ನ ವಶಪಡಿಸಿಕೊಳ್ಳಲು ಒಕ್ಕಲಿಗ ಅಸ್ತ್ರ ಪ್ರಯೋಗಿಸ್ತಿದೆ. ಬುಧವಾರ ಕುಮಾರಸ್ವಾಮಿ ಹಾಗೂ ಆರ್.ಅಶೋಕ್ ನೇತೃತ್ವದಲ್ಲಿ ಒಕ್ಕಲಿಗ ಹಾಲಿ, ಮಾಜಿ ಶಾಸಕರ ಸಭೆ ಕರೆಯಲಾಗಿದೆ. ಹೆಚ್ಡಿಕೆ ಅವರ ಬಿಡದಿಯ ತೋಟದ ಮನೆಯಲ್ಲಿ ಸಭೆ ನಡೆಯಲಿದೆ. ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಮತಗಳು ಕಾಂಗ್ರೆಸ್ ಕಡೆ ವಾಲಿದ್ದವು. ಆ ತಪ್ಪು ಆಗದಂತೆ ಹಿಡಿತ ಸಾಧಿಸಲು ಬಿಜೆಪಿ ನಾಯಕರು ತಂತ್ರಗಾರಿಕೆ ಮಾಡಲಿದ್ದಾರೆ. ಸೋಮವಾರ ಹೆಚ್ಡಿಕೆ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರನ್ನ ಭೇಟಿಯಾಗಿದ್ದು ಕೂಡಾ ಇದೇ ತಂತ್ರಗಾರಿಕೆಯ ಭಾಗವಾಗಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಸಿಎಂ ಹಣಿಯಲು ಬಿಜೆಪಿ ಹೈಕಮಾಂಡ್ ತಂತ್ರ: ಸ್ಥಳೀಯ ನಾಯಕರಿಗೆ ಬಿಜೆಪಿ ಚುನಾವಣಾ ಉಸ್ತುವಾರಿಯ ಹೊಣೆ
ಹೀಗೆ ದೋಸ್ತಿಗಳು ಒಂದಾಗಿ ಕಾಂಗ್ರೆಸ್ ಮಣಿಸಲು ಮುಂದಾಗಿದ್ದಾರೆ. ಆದರೆ ಇದೇ ಮೈತ್ರಿ ಕೆಲವು ಕಡೆ ಬಿಜೆಪಿಗೆ ದುಬಾರಿ ಆಗುತ್ತಿರುವುದೂ ನಿಜ.
Published On - 2:54 pm, Tue, 9 April 24