ರಾಜ್ಯ ರಾಜಕಾರಣದಲ್ಲಿ ಸಂಚಲನ: ಕಾಂಗ್ರೆಸ್​ನತ್ತ ಮುಖ ಮಾಡಿದ ಬಿಎಸ್​ ಯಡಿಯೂರಪ್ಪ ಸಂಬಂಧಿ

| Updated By: ರಮೇಶ್ ಬಿ. ಜವಳಗೇರಾ

Updated on: Jul 06, 2023 | 2:38 PM

ಬಿಜೆಪಿಯಲ್ಲಿ ಬಣ ರಾಜಕೀಯ ಗದ್ದಲ ನಡೆಯುತ್ತಿದೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸಂಬಂಧಿ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸಂಚಲನ: ಕಾಂಗ್ರೆಸ್​ನತ್ತ ಮುಖ ಮಾಡಿದ ಬಿಎಸ್​ ಯಡಿಯೂರಪ್ಪ ಸಂಬಂಧಿ
ಬಿಎಸ್​ ಯಡಿಯೂರಪ್ಪ
Follow us on

ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಗೆದ್ದು ಉತ್ಸಾಹದಲ್ಲಿರುವ ಕಾಂಗ್ರೆಸ್, ಇದೀಗ ಮುಂಬರುವ ಲೋಕಸಭಾ ಚುನಾವಣೆ (Lokasabha Elections 2024) ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಸಹ ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ಬಿಜೆಪಿ ಹಾಗೂ ಜೆಡಿಎಸ್​ ನಾಯಕರಿಗೆ ಸದ್ದಿಲ್ಲದೇ ಗಾಳ ಹಾಕಿದೆ. ಎಂಪಿ ರೇಣುಕಾಚಾರ್ಯ ಕಾಂಗ್ರೆಸ್​ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರ ಸಂಬಂಧಿಯೊಬ್ಬರು ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ. ಯಡಿಯೂರಪ್ಪ ಸಂಬಂಧಿ ಚಿಕ್ಕನಗೌಡರ(Chikkanagowdar) ಅವರಿಗೆ ಜಗದೀಶ್ ಶೆಟ್ಟರ್ ಮೂಲಕ ಹಾಕಿದ್ದ ಗಾಳ ಯಶಸ್ವಿಯಾದಂತೆ ಕಾಣುತ್ತಿದ್ದು, ಶಿಘ್ರದಲ್ಲಿಯೇ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಪಕ್ಷ ನಾಯಕನ ಜೊತೆಗೆ ಹೊಸ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ: ಸಂಚಲನ ಮೂಡಿಸಿದ ಯಡಿಯೂರಪ್ಪ ಮಾತು

ಈ ಬಾರಿ ಕುಂದಗೋಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ಕೈತಪ್ಪಿದ್ದರಿಂದ ಚಿಕ್ಕನಗೌಡರ್ ಪಕ್ಷದ ಮೇಲೆ ಮುನಿಸಿಕೊಂಡು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದ್ರೆ, ಪರಾಭವಗೊಂಡಿದ್ದರು. ಇದೀಗ ರಾಜಕೀಯವಾಗಿ ತಟಸ್ಥರಾಗಿದ್ದ ಚಿಕ್ಕನಗೌಡರ್ ಅವರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿ ಇಟ್ಟುಕೊಂಡು ಕಾಂಗ್ರೆಸ್​ ಜಗದೀಶ್ ಶೆಟ್ಟರ್​ ಮೂಲಕ ಈಗಾಗಲೇ ಒಂದು ಸುತ್ತಿನ ಮಾತುಕತೆ ಸಹ ನಡೆದಿದ್ದು, ಅದು ಫಲಪ್ರದವಾಗಿದೆ.

ಇದಕ್ಕೆ ಪೂರಕವೆಂಬಂತೆ ನಿನ್ನೆ(ಜುಲೈ 05) ತಮ್ಮ ನಿವಾಸದಲ್ಲಿ ಆಪ್ತರ ಸಭೆ ಕರೆದಿದ್ದ ಚಿಕ್ಕನಗೌಡರ್, ಕಾಂಗ್ರೆಸ್ ಸೇರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಆಪ್ತರು ಸಹ ಸಮ್ಮತಿ ಸೂಚಿಸಿದ್ದು, ಅಧಿವೇಶನ ಮುಗಿಯುವ ಒಳಗೆ ಕಾಂಗ್ರೆಸ್ ಸೇರೋಣ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಂದಗೋಳ ಕ್ಷೇತ್ರದಲ್ಲಿ ಎಂ.ಆರ್‌. ಪಾಟೀಲ(MR Patil) ಹಾಗೂ ಚಿಕ್ಕನಗೌಡರ ಮಧ್ಯೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇತ್ತು. ಆದರೆ ಪಕ್ಷ ಎಂ.ಆರ್‌. ಪಾಟೀಲಗೆ ಮಣೆ ಹಾಕಿತ್ತು. ಇದರಿಂದಾಗಿ ಬಿಜೆಪಿಯಿಂದ ದೂರವಾಗಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ