ಕಾಂಗ್ರೆಸ್ ಮುಖಂಡರು ಹಾಗೆ ಮಾತನಾಡಿದ್ದು ತಪ್ಪು: ಡಿಕೆಶಿ ಪರ ಕುಮಾರ್ ಬಂಗಾರಪ್ಪ ಹೇಳಿಕೆ
ಕಾಂಗ್ರೆಸ್ ಮುಖಂಡರು ಹಾಗೆ ಮಾತನಾಡಿದ್ದು ತಪ್ಪು. ಯಾವುದೇ ವೇದಿಕೆಗಳಲ್ಲಿ ಮಾತಾಡುವಾಗ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಬೆಂಗಳೂರು: ಡಿ.ಕೆ.ಶಿವಕುಮಾರ್ ಕುರಿತು ಕಾಂಗ್ರೆಸ್ ಪಕ್ಷದ ನಾಯಕರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ ಮುಖಂಡರು ಹಾಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ. ಡಿಕೆಶಿ ಪರ ಮೃಧು ಧೋರಣೆಯಲ್ಲಿ ಮಾತನಾಡಿರುವ ಅವರು, ಡಿಕೆಶಿ ಭ್ರಷ್ಟಾಚಾರ ಮಾಡಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಮುಖಂಡರು ಹಾಗೆ ಮಾತನಾಡಿದ್ದು ತಪ್ಪು. ಯಾವುದೇ ವೇದಿಕೆಗಳಲ್ಲಿ ಮಾತಾಡುವಾಗ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಈಗ ಕಾಂಗ್ರೆಸ್ ಪಕ್ಷದವರೇ ನಮಗೆ ಅಸ್ತ್ರ ಕೊಟ್ಟಿದ್ದಾರೆ, ಬಾಣ ಕೊಟ್ಟಿದ್ದಾರೆ. ನಮ್ಮ ಬಳಿ ಬಿಲ್ಲಿದೆ, ನಾವು ಬಾಣ ಪ್ರಯೋಗ ಮಾಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂಬುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ ಅವರು, ಕಾಂಗ್ರೆಸ್ನ ಯಾವುದೇ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನ.10ಕ್ಕೆ ಮಗಳ ಮದುವೆಗೆ ಆಹ್ವಾನಿಸಲು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ನನ್ನ ತಮ್ಮ ಮಧು ಅಲ್ಲಿಯೇ ಇದ್ದ. ಅವನನ್ನು ನೋಡಿ ಸಂತಸವಾಯ್ತು. ಸಿದ್ದರಾಮಯ್ಯ ಜತೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದರು.
ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತೀನಿ ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದು ಸಿದ್ದರಾಮಯ್ಯ ಭೇಟಿ ನಂತರ ಎದ್ದಿದ್ದ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿ; ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸಮ್ಮುಖದಲ್ಲಿ ಕೈ ಪಕ್ಷಕ್ಕೆ ಸೇರ್ಪಡೆ
ಇದನ್ನೂ ಓದಿ: ನನ್ನನ್ನು ಬೆಳೆಸಿದ ಧೀಮಂತ ನಾಯಕ ಬಂಗಾರಪ್ಪ: ಡಿ.ಕೆ. ಶಿವಕುಮಾರ್