ಇಂದಿನಿಂದ ದೆಹಲಿಯಲ್ಲಿ ಬಿಜೆಪಿ ಬೃಹತ್ ರಾಷ್ಟ್ರೀಯ ಸಮಾವೇಶ: ಲೋಕಸಭೆ ಚುನಾವಣೆಗೆ ಭರ್ಜರಿ ತಾಲೀಮು

BJP national council meet: ಬಿಜೆಪಿ ರಾಷ್ಟ್ರೀಯ ಸಮಾವೇಶವು ದೆಹಲಿಯ ಭಾರತ ಮಂಟಪದಲ್ಲಿ ಇಂದು ಪ್ರಾರಂಭವಾಗಲಿದೆ. ಬೆಳಗ್ಗೆ 10 ಗಂಟೆಗೆ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಯಲಿದೆ. ಎರಡು ದಿನಗಳ ಸಮಾವೇಶದ ಎರಡೂ ದಿನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯವನ್ನು ಸಮಾವೇಶದ ಸ್ಥಳದಲ್ಲಿ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಲಾಗುತ್ತದೆ.

ಇಂದಿನಿಂದ ದೆಹಲಿಯಲ್ಲಿ ಬಿಜೆಪಿ ಬೃಹತ್ ರಾಷ್ಟ್ರೀಯ ಸಮಾವೇಶ: ಲೋಕಸಭೆ ಚುನಾವಣೆಗೆ ಭರ್ಜರಿ ತಾಲೀಮು
ಇಂದಿನಿಂದ ದೆಹಲಿಯಲ್ಲಿ ಬಿಜೆಪಿ ಬೃಹತ್ ರಾಷ್ಟ್ರೀಯ ಸಮಾವೇಶ
Follow us
|

Updated on:Feb 17, 2024 | 7:15 AM

ನವದೆಹಲಿ, ಫೆಬ್ರವರಿ 17: ಬಿಜೆಪಿ (BJP) ರಾಷ್ಟ್ರೀಯ ಸಮಾವೇಶವು ಇಂದು (ಫೆಬ್ರವರಿ 17) ಮತ್ತು ನಾಳೆ (ಫೆಬ್ರವರಿ 18) ದೆಹಲಿಯಲ್ಲಿ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಎರಡು ದಿನಗಳ ಸಮಾವೇಶದ ಎರಡೂ ದಿನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತನಾಡಲಿದ್ದಾರೆ. ‘ಅಭಿವೃದ್ಧಿ ಹೊಂದಿದ ಭಾರತ’ ನಿರ್ಣಯವನ್ನು ಸಮಾವೇಶದ ಸ್ಥಳದಲ್ಲಿ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಲಾಗುತ್ತದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳ ಸಚಿವರು, ಅಧಿಕಾರಿಗಳು, ರಾಷ್ಟ್ರೀಯ ಪರಿಷತ್ತಿನ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭೆಯ ಹಾಲಿ ಮತ್ತು ಮಾಜಿ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ರಾಜ್ಯಾಧ್ಯಕ್ಷರು, ಲೋಕಸಭಾ ಕ್ಲಸ್ಟರ್‌ನ ಉಸ್ತುವಾರಿಗಳು ಮತ್ತು ಸಂಯೋಜಕರು, ಮೇಯರ್, ಪುರಸಭೆ ಮತ್ತು ನಗರ ಪಂಚಾಯತ್ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಜಿಲ್ಲಾ ಉಸ್ತುವಾರಿಗಳು, ಮೋರ್ಚಾಗಳ ರಾಜ್ಯ ಅಧ್ಯಕ್ಷರು, ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಐಟಿ ರಾಜ್ಯ ಸಂಚಾಲಕರು, ಆಯೋಗದ ಮಂಡಳಿ ನಿಗಮದ ಅಧ್ಯಕ್ಷರು, ಕೋಶಗಳ ಸಂಚಾಲಕರು ಮತ್ತು ಪಕ್ಷದ ಇತರ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಬಿಜೆಪಿಯ ಈ ಸಮಾವೇಶ ಅತ್ಯಂತ ಮಹತ್ವದ್ದಾಗಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅಲ್ಲದೇ ಮುಂದಿನ ಲೋಕಸಭೆ ಚುನಾವಣೆ ಬಗ್ಗೆಯೂ ಸಭೆಯಲ್ಲಿ ರಣತಂತ್ರ ರೂಪಿಸಲಾಗುವುದು.

ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತ ಅಥವಾ ದಾಖಲೆಯ ಗೆಲುವಿನ ಅಂತರವನ್ನು ಸಾಧಿಸಲು ಏನೇನು ತಂತ್ರಗಾರಿಕೆ ಹೆಣೆಯಬೇಕು ಎಂಬ ಬಗ್ಗೆ ಸಭೆಯಲ್ಲಿ ಪ್ರಮುಖ ವಾಗಿ ಚರ್ಚೆಯಾಗಬಹುದು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾದ ವಿಚಾರದಲ್ಲಿಯೂ ಬಿಜೆಪಿ ಸಭೆಯಲ್ಲಿ ಸಂಭ್ರಮ ಆಚರಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಯುಎಇ, ಕತಾರ್ ಇಂದು ಭಾರತವನ್ನು ಗೌರವಿಸುತ್ತಿದೆ, ಇದು ಪ್ರತಿಯೊಬ್ಬರಿಗೂ ಸಂದ ಮನ್ನಣೆ: ಮೋದಿ

ಸಮಾವೇಶದ ಪ್ರಮುಖ ಕಾರ್ಯಸೂಚಿಯು ವರದಿ ಮಂಡನೆ, ಪಕ್ಷದ ಬಲವರ್ಧನೆ ಮತ್ತು ಬಿಜೆಪಿಯೊಂದೇ 370 ಸ್ಥಾನಗಳ ಗುರಿಯನ್ನು ಸಾಧಿಸುವುದು ಹೇಗೆ ಎಂಬ ವಿಷಯಗಳನ್ನೊಳಗೊಂಡಿರಲಿದೆ. ಜತೆಗೆ ಇತರ ಹಲವಾರು ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

ಕರ್ನಾಟಕದಿಂದ ಯಾರಿಗೆಲ್ಲ ಆಹ್ವಾನ?

ಕಾರ್ಯಕ್ರಮಕ್ಕೆ ಬಿಜೆಪಿ ಕರ್ನಾಟಕ ಘಟಕದ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು, ಬಿಜೆಪಿ ಆಡಳಿತದ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಎಂಎಲ್​ಎ ಹಂತದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಒಟ್ಟು 530 ರಾಜ್ಯ ನಾಯಕರಿಗೆ ಆಹ್ವಾನ ದೊರೆತಿದೆ. ಕನಿಷ್ಠ 400 ಮಂದಿ ನಾಯಕರು ಭಾಗಿಯಾಗುವ ನಿರೀಕ್ಷೆ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 am, Sat, 17 February 24