ಕಾಂಗ್ರೆಸ್​ನ 66 ಶಾಸಕರ ಪಟ್ಟಿ ಸಿದ್ಧಪಡಿಸಿದ ಬಿಜೆಪಿ: ಆಪರೇಷನ್​ ಕಮಲದ ಬಗ್ಗೆ ‘ಕೈ’ ನಾಯಕರಿಗೆ ಸುಳಿವು?

| Updated By: Ganapathi Sharma

Updated on: Oct 31, 2023 | 7:56 PM

Karnataka Politics and Operation Kamala: ಆಪರೇಷನ್​ ಕಮಲಕ್ಕೆ ಸಿದ್ಧತೆ ನಡೆಸಿರುವ ಬಿಜೆಪಿ, 66 ಮಂದಿ ಕಾಂಗ್ರೆಸ್​​ ಶಾಸಕರ ಪಟ್ಟಿ ಸಿದ್ಧ ಮಾಡಿಕೊಂಡಿದೆಯಂತೆ. ಅಸಮಾಧಾನ ಹೊಂದಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಕಾಂಗ್ರೆಸ್​ನ ಕೆಲವು ನೂತನ ಶಾಸಕರು ಈ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​​ಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್​ನ 66 ಶಾಸಕರ ಪಟ್ಟಿ ಸಿದ್ಧಪಡಿಸಿದ ಬಿಜೆಪಿ: ಆಪರೇಷನ್​ ಕಮಲದ ಬಗ್ಗೆ ‘ಕೈ’ ನಾಯಕರಿಗೆ ಸುಳಿವು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್ 31: ಲೋಕಸಭೆ ಚುನಾವಣೆಗೂ (Lok Sabha Election) ಮುನ್ನ ರಾಜ್ಯ ರಾಜಕಾರಣದಲ್ಲಿ ಒಂದು ಅಚ್ಚರಿ ಕಾದಿದೆ ಎಂಬ ಊಹಾಪೋಹಗಳ ನಡುವೆ ಮತ್ತೊಂದು ಸ್ಫೋಟಿ ಮಾಹಿತಿ ಹೊರಬಿದ್ದಿದೆ. ಆಪರೇಷನ್ ಕಮಲ(Operation Kamala) ಬಗ್ಗೆ ಕೆಲ ಕಾಂಗ್ರೆಸ್ ಶಾಸಕರು (Congress MLAs) ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸುಳಿವು ನೀಡಿ ಶಾಕ್ ಕೊಟ್ಟಿದ್ದಾರೆ. ಸೋಮವಾರವಷ್ಟೇ, ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ಸರ್ಕಾರ ಮಾದರಿಯಲ್ಲಿ ಪತನವಾಗಲಿದೆ ಎಂದು ಹೇಳಿದ್ದರು. ಜೊತೆಗೆ, ಕಾಂಗ್ರೆಸ್ ನಾಯಕರು ಕೂಡ ಆಪರೇಷನ್ ಕಮಲಕ್ಕೆ ತಂತ್ರ ಹೆಣೆಯಲಾಗುತ್ತಿದೆ ಎಂಬುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ.

ಇದರ ಬೆನ್ನಲ್ಲೇ ಆಪರೇಷನ್​ ಕಮಲಕ್ಕೆ ಸಿದ್ಧತೆ ನಡೆಸಿರುವ ಬಿಜೆಪಿ, 66 ಮಂದಿ ಕಾಂಗ್ರೆಸ್​​ ಶಾಸಕಟ ಪಟ್ಟಿ ಸಿದ್ಧ ಮಾಡಿಕೊಂಡಿದೆಯಂತೆ. ಅಸಮಾಧಾನ ಹೊಂದಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಕಾಂಗ್ರೆಸ್​ನ ಕೆಲವು ನೂತನ ಶಾಸಕರು ಈ ಕುರಿತು ಸುಳಿವು ನೀಡಿದ್ದಾರೆ. ಕಾಂಗ್ರೆಸ್​ನ 66 ಶಾಸಕರನ್ನು ಸೆಳೆಯಲು ಬಿಜೆಪಿಯಿಂದ ಭಾರಿ ಸಿದ್ಧತೆ ನಡೆದಿದೆ ಎಂಬ ಸುಳಿವಿನ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್​​​ಗೆ ಅಲರ್ಟ್ ಆಗಿರಲು ಸೂಚನೆ ಕೊಟ್ಟಿದ್ದಾರೆ.

ಬಿಜೆಪಿ ಆಪರೇಷನ್ ಬಗ್ಗೆ ಎಚ್ಚೆತ್ತುಕೊಳ್ಳಲು ಕೈ ಶಾಸಕರು ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ಗೆ ಸಲಹೆ ನೀಡಿದ್ದಾರೆ. ಅಸಮಾಧಾನಿತರನ್ನೇ ಸೆಳೆಯಲು ಬಿಜೆಪಿ ಪ್ರಯತ್ನಿಸ್ತಿದೆ. ಕ್ಷೇತ್ರಕ್ಕೆ ಅನುದಾನ ಸಿಗದೇ ಬೇಸರ ಹೊಂದಿದವರು, ವರ್ಗಾವಣೆಯಲ್ಲಿ ಬೇಸರದಲ್ಲಿರುವವರನ್ನ ಸೆಳೆಯಲು ತಂತ್ರ ರೂಪಿಸಿದೆ. 10ಕ್ಕೂ ಹೆಚ್ಚು ಹೊಸ ಶಾಸಕರನ್ನ ಈಗಾಗಲೇ ಬಿಜೆಪಿ ಭೇಟಿ ಮಾಡಿದೆ. ಅದ್ರಲ್ಲೂ ಒಂದು ತಂಡ ಅಭಿವೃದ್ಧಿ ನೆಪದಲ್ಲಿ ಭೇಟಿ ಮಾಡುತ್ತಿದೆ. ಹೀಗೆ ಬಿಜೆಪಿಗರು ಶಾಸಕರನ್ನು ಭೇಟಿಯಾಗ್ತಿರುವ ಬಗ್ಗೆ ಸಿಎಂ, ಡಿಸಿಎಂಗೆ ಶಾಸಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನ: ಡಿಕೆ ಶಿವಕುಮಾರ್ ಶೀಘ್ರವೇ ಮಾಜಿ: ಹೊಸ ಬಾಂಬ್ ಸಿಡಿಸಿದ ಜಾರಕಿಹೊಳಿ

ಸರ್ಕಾರ ಬಂದು ಕೇವಲ ಐದು ತಿಂಗಳಲ್ಲಿ ಆಪರೇಷನ್ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಸದ್ಯದ ಮಟ್ಟಿಗೆ ಇದು ಅಷ್ಟು ಪರಿಣಾಮ ಬೀರದೇ ಇರಬಹುದು. ಆದರೆ ಈ ವಿಚಾರವನ್ನು ಕಾಂಗ್ರೆಸ್ ನಾಯಕರು ಸುಲಭವಾಗಿ ಬಿಡದೇ, ಈ ಬೆಳವಣಿಗೆಗಳ ಮೇಲೆ ಒಂದು ಕಣ್ಣು ಇಟ್ಟೇ ಇಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮತ್ತಷ್ಟು ರಾಜಕೀಯ ಮೇಲಾಟಗಳು ನಡೆಯಬಹುದು ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.

ರಾಜಕಾರಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Tue, 31 October 23