ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು, ಕಾರಣವೇನು?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಅವಾಚ್ಯ ಪದಬಳಕೆ ಮಾಡಿದ ಆರೋಪದ ಮೇಲೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿದೆ. ನಿನ್ನೆ(ಸೋಮವಾರ) ಬೆಳಗಾವಿಯ ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ಅವರು ಡಿಕೆ ಶಿವಕುಮಾರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಇದೀಗ ಅವರ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರು, (ಅಕ್ಟೋಬರ್ 31): ಡಿಕೆ ಶಿವಕುಮಾರ್ (DK Shivakumar) ಪುಕ್ಕಲ, ಮೋಸಗಾರ, ಸಿಡಿ ಮಾಸ್ಟರ್, ಮಾಜಿ ಮಂತ್ರಿಯಾಗುತ್ತಾರೆ ಅಂತೆಲ್ಲ ಕೆಲ ಗಂಭೀರ ಆರೋಪಗಳನ್ನು ಮಾಡಿ ಏಕವಚನದಲ್ಲಿ ಗುಡುಗಿದ್ದ ರಮೇಶ್ ಜಾರಕಿಹೊಳಿ(Ramesh jarkiholi) ದೂರು ದಾಖಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ಬಿಜೆಪಿ ಶಾಸಕ ರಮೇಶ್ ಜಾರಕೊಹೊಳಿ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿನ್ನೆ(ಅಕ್ಟೋಬರ್ 30) ಪತ್ರಿಕಾಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಆಕ್ಷೇಪರ್ಹ ಪದ ಬಳಕೆ ಮಾಡಿದ್ದಾರೆ. ಅಲ್ಲದೇ ಆಧಾರ ರಹಿತ ಕೆಲ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಏಕವಚನದಲ್ಲಿ ಡಿಕೆ ಶಿವಕುಮಾರ್ ಅವರನ್ನು ನಿಂದಿಸಿದ್ದಕ್ಕೆ ರೊಚ್ಚಿಗೆದ್ದ ಅವರ ಬೆಂಬಲಿಗರು ನಿನ್ನೆ(ಅ.30) ರಾತ್ರಿ ಸದಾಶಿವನಗರದಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸದ ಬಳಿ ಲಗ್ಗೆ ಹಾಕಿದ್ದು, ಮನೆ ಗೋಡೆಗಳಿಗೆ ಅವಾಚ್ಯ ಬರಹಗಳಿರುವ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಎಲ್ಲಾ ಬೆಳವವಣಿಗೆಗಳ ಮಧ್ಯೆ ರಮೇಶ್ ಜಾರಕಿಹೊಳಿ ಅವರು ಇಂದು(ಅಕ್ಟೋಬರ್ 31) ಮಧ್ಯಾಹ್ನ 2 ಗಂಟೆ ಮತ್ತೆ ಸುದ್ದಿಗೋಷ್ಠಿ ಕರೆದಿದ್ದು, ಏನೆಲ್ಲಾ ಹೇಳಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.
ರಮೇಶ್ ಜಾರಕೊಹೊಳಿ ಹೇಳಿದ್ದೇನು?
ನಿನ್ನೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ, ಡಿಕೆಶಿ ವಿರುದ್ಧ ಬೆಂಕಿಮಳೆಯನ್ನೇ ಸುರಿಸಿದ್ದರು. ಡಿಕೆಶಿ ಪುಕ್ಕಲ, ಮೋಸಗಾರ, ಹಿಂಬಾಗಿಲ ರಾಜಕಾರಣಿ ಎಂದೆಲ್ಲ ಗುಡುಗಿದ್ದರು. ಹಿಂದಿನ ಮೈತ್ರಿ ಸರ್ಕಾರ ಪತನಕ್ಕೂ ಡಿಕೆ ಶಿವಕುಮಾರ್ ಕಾರಣ. ಈಗಲೂ ಈ ಸರ್ಕಾರ ಪತನಕ್ಕೆ ಡಿಕೆಶಿಯೇ ಕಾರಣವಾಗುತ್ತಾರೆ. ಬಿಜೆಪಿ ಆಪರೇಷನ್ ಕಮಲ ಮಾಡಲ್ಲ. ಮಹಾರಾಷ್ಟ್ರದ ರೀತಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ. ಡಿಕೆಶಿ ಮಾಜಿ ಮಂತ್ರಿಯಾಗುತ್ತಾರೆ ಎಂದು ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದರು.
Published On - 12:03 pm, Tue, 31 October 23