ನಾಳೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ; ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ
ಮಧ್ಯಾಹ್ನ 12.05ಕ್ಕೆ ಸೋಲಿಗ ಸಮುದಾಯದ ಜೊತೆ ನಡ್ಡಾ ಸಂವಾದ ನಡೆಸಲಿದ್ದಾರೆ. ನಂತರ ಸಾಲೂರು ಮಠಕ್ಕೆ ಭೇಟಿ ನೀಡಲಿರುವ ಅವರು, ಮಧ್ಯಾಹ್ನ 2 ಗಂಟೆಗೆ ಹನೂರು ಪಟ್ಟಣದಲ್ಲಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ನಾಳೆ (ಮಾರ್ಚ್ 1) ರಾಜ್ಯಕ್ಕೆ ಭೇಟಿ ನೀಡಲಿದ್ದು, ಪಕ್ಷದ ಚುನಾವಣಾ ಪ್ರಚಾರ ಅಭಿಯಾನ ವಿಜಯ ಸಂಕಲ್ಪ ಯಾತ್ರೆಗೆ (Vijay Sankalpa Yatra) ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ದೆಹಲಿಯಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಬಳಿಕ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಲಿದ್ದಾರೆ. ಮಲೆಮಹದೇಶ್ವರ ದೇವಾಲಯದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಅವರು, ನಂತರ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12.05ಕ್ಕೆ ಸೋಲಿಗ ಸಮುದಾಯದ ಜೊತೆ ನಡ್ಡಾ ಸಂವಾದ ನಡೆಸಲಿದ್ದಾರೆ. ನಂತರ ಸಾಲೂರು ಮಠಕ್ಕೆ ಭೇಟಿ ನೀಡಲಿರುವ ಅವರು, ಮಧ್ಯಾಹ್ನ 2 ಗಂಟೆಗೆ ಹನೂರು ಪಟ್ಟಣದಲ್ಲಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹನೂರು ಪಟ್ಟಣದ ಗೌರೀಶಂಕರ ಕಲ್ಯಾಣ ಮಂಟಪ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ. ಸಂಜೆ 4.25ಕ್ಕೆ ನಡ್ಡಾ ಅವರು ಮೈಸೂರಿನಿಂದ ದೆಹಲಿಗೆ ವಾಪಸಾಗಲಿದ್ದಾರೆ.
ಮಾರ್ಚ್ 2ರಂದು ರಾಜ್ಯಕ್ಕೆ ಅಮಿತ್ ಶಾ
ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯಕ್ಕೆ ಪದೇಪದೇ ಭೇಟಿ ನೀಡುತ್ತಿರುವ ಕೇಂದ್ರ ಗೃಹ ಸಚಿವ, ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಪರಿಗಣಿಸಲಾಗಿರುವ ಅಮಿತ್ ಶಾ ಮಾರ್ಚ್ 2ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. 2ರ ರಾತ್ರಿ 10.40ಕ್ಕೆ ಬೆಂಗಳೂರಿನ ಎಚ್ಎಎಲ್ಗೆ ಬರಲಿರುವ ಅವರು ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ತಂಗಲಿದ್ದಾರೆ. ಮಾರ್ಚ್ 3ರಂದು ಬೆಳಗ್ಗೆ 10.10ಕ್ಕೆ ಬೆಂಗಳೂರಿನಿಂದ ಬೀದರ್ಗೆ ಪ್ರಯಾಣಿಸಲಿದ್ದಾರೆ. ಮಾ. 3ರ ಬೆಳಗ್ಗೆ 11.50ಕ್ಕೆ ಬೀದರ್ನಿಂದ ಬಸವಕಲ್ಯಾಣಕ್ಕೆ ತೆರಳುವ ಶಾ ಮಧ್ಯಾಹ್ನ 12.20ಕ್ಕೆ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಬಸವಕಲ್ಯಾಣದ ತೇರ್ ಮೈದಾನದಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಬಿಜೆಪಿ ವಿಜಯಸಂಕಲ್ಪ ಯಾತ್ರೆಗೆ ಸಿದ್ಧಗೊಂಡ ವಿಶೇಷ ರಥ ಹೀಗಿದೆ ನೋಡಿ
ಸಮಾವೇಶದ ಬಳಿಕ ಬೀದರ್ನಿಂದ ಬೆಂಗಳೂರಿಗೆ ಮರಳುವ ಅವರು, ಸಂಜೆ 4.50ಕ್ಕೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಆವತಿ ಗ್ರಾಮದ ಚನ್ನಕೇಶವ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 5.10ಕ್ಕೆ ದೇವನಹಳ್ಳಿಯಲ್ಲಿ ವಿಜಯ ಸಂಕಲ್ಪ ರಥಯಾತ್ರೆ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 6.50ರಿಂದ 7.15ರವರೆಗೆ ಕೆಐಎಬಿಯಲ್ಲಿ ಕೆಲಹೊತ್ತು ಇರಲಿರುವ ಶಾ ರಾತ್ರಿ 7.20ಕ್ಕೆ ಬೆಂಗಳೂರಿನಿಂದ ದೆಹಲಿಗೆ ವಾಪಸಾಗಲಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:37 pm, Tue, 28 February 23