ಬೆಂಗಳೂರು, (ಜನವರಿ 15): ಮುಂಬರುವ ಲೋಕಸಭಾ ಚುನಾವಣೆ(Loksabha Elections 2024) ಸಂಬಂಧ ರಾಜ್ಯ ಬಿಜೆಪಿಯಲ್ಲಿ(BJP) ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೊನ್ನೇ ಅಷ್ಟೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಸ್ಥಿತಿಗತಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಭೆ ಮಾಡಿ, ಆಯಾ ಕ್ಷೇತ್ರದ ನಾಯಕರುಗಳಿಂದ ಮಾಹಿತಿ ಕಲೆಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಗೋಡೆ ಬರಹ ಅಭಿಯಾನಕ್ಕಿಂದು ಬಿಜೆಪಿ ಚಾಲನೆ ನೀಡಿದೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ವಿಜಯೇಂದ್ರ ಅವರು ಮತ್ತೊಮ್ಮೆ ಮೋದಿ ಎಂಬ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದರು.
ಬಿಜೆಪಿಯ ಚುನಾವಣಾ ಪ್ರಚಾರ ತಂತ್ರಗಳಲ್ಲೊಂದಾಗಿರುವ ಗೋಡೆ ಬರಹ ಸಹ ಒಂದಾಗಿದೆ. ಪ್ರತಿ ಕ್ಷೇತ್ರದ ಪ್ರತಿ ಬೂತ್ ನಲ್ಲಿ 5 ಕಡೆ ಗೋಡೆ ಬರಹ ಬರೆಯಬೇಕು ಎಂದು ಸೂಚಿಸಲಾಗಿದ್ದು, ಈ ಅಭಿಯಾನ ಜನವರಿ 25 ರವರೆಗೆ ನಡೆಯಲಿದೆ. ಇನ್ನು ಗೋಡೆ ಬರಹ ಚಾಲನೆ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್, ಪ್ರೀತಮ್ ಗೌಡ, ನಂದೀಶ್ ರೆಡ್ಡಿ, ಯುವ ಮೋರ್ಛಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ಬೆಂಗಳೂರು ಬಿಜೆಪಿ ಜಿಲ್ಲಾಧ್ಯಕ್ಷರು ಭಾಗಿಯಾಗಿದ್ದರು.
ಇದನ್ನೂ ಓದಿ: ಎಲ್ಲವೂ ಸುಖಾಂತ್ಯವಾಗಿದೆ, ಮುಂದಿನ ನಡೆಯ ಬಗ್ಗೆ ಸೋಮಣ್ಣ ಕೊಟ್ಟ ಸುಳಿವೇನು?
ಇದೇ ಜನವರಿ 19ರಂದು ಸಂಜೆ 4 ಗಂಟೆಗೆ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಕಾಂಗ್ರೆಸ್ ಎಲೆಕ್ಷನ್ ಕಮಿಟಿ ಸಭೆ ಕರೆದಿದೆ. ಮತ್ತೊಂದೆಡೆ ಜ.19 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕದ ಇದೇ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ ಈ ಸಂಬಂಧ ಇಂದು ವಿಜಯೇಂದ್ರ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್, ಪಿ. ರಾಜೀವ್, ಪ್ರೀತಂ ಗೌಡ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್ ಉಪಸ್ಥಿತರಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ