ಮಂಡ್ಯ: ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ (Mandya Politics) ಗೆಲುವು ಸಾಧಿಸಲು ಬಿಜೆಪಿ (JDS vs BJP) ಒಂದಾದ ನಂತರ ಮತ್ತೊಂದು ರಾಜಕೀಯ ತಂತ್ರಗಳನ್ನು ಪ್ರಯೋಗಿಸುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಗೆಲುವು ಸಾಧಿಸುವುದು ಬಿಜೆಪಿಗೆ ಬಲುಕಷ್ಟ ಎಂದೇ ಹೇಳಲಾಗುತ್ತಿದೆ. ಒಕ್ಕಲಿಗರ ಪ್ರಾಬಲ್ಯವೇ ಹೆಚ್ಚಾಗಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಅಷ್ಟಾಗಿ ಜನಬೆಂಬಲವಿಲ್ಲ. ಉಸ್ತುವಾರಿ ಸಚಿವರಾಗಿ ಗೋಪಾಲಯ್ಯ ನೇಮಕವಾದ ನಂತರ ಸಂಘಟನೆ ಚುರುಕುಗೊಳಿಸಲು ಹಲವು ಹಂತಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿತ್ತು. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸ್ವಲ್ಪ ಹುರುಪಾಗಿ ಓಡಾಡಲು ಆರಂಭಿಸಿದ್ದರು. ಆದರೆ ಇದೀಗ ಉಸ್ತುವಾರಿ ಬದಲಿಸಿರುವುದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮಂಡ್ಯದ ಉಸ್ತುವಾರಿ ವಹಿಸಲಾಗಿದೆ. ಅಶೋಕ್ ವಿರುದ್ಧ ಈ ಹಿಂದೆಯೂ ಹೊಂದಾಣಿಕೆ ರಾಜಕಾರಣದ ಆರೋಪಗಳು ಕೇಳಿಬಂದಿದ್ದವು. ಈ ಆರೋಪ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಸ್ಥಳೀಯ ಕಾರ್ಯಕರ್ತರು ‘ಗೋ ಬ್ಯಾಕ್ ಆರ್ ಅಶೋಕ್’ ಪೋಸ್ಟರ್ಗಳನ್ನು ಅಂಟಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಶೋಕ್ ಅವರ ಸ್ವಪಕ್ಷ ಬಿಜೆಪಿಯಲ್ಲಿಯೇ ಮಂಡ್ಯದಂಥ ಮಹತ್ವದ ಹಾಗೂ ಸೂಕ್ಷ್ಮ ಜಿಲ್ಲೆಯ ಚುನಾವಣೆ ಹೊಸಿಲಲ್ಲಿರುವಾಗ ಬದಲಿಸುವುದು ಸರಿಯಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂಬ ಸಲಹೆಗಳು ವ್ಯಕ್ತವಾಗುತ್ತಿವೆ.
ಸಿಎಂ ಬೊಮ್ಮಾಯಿ ಪರಮಾಪ್ತ ಎನ್ನುವ ಕಾರಣಕ್ಕೆ ಅಶೋಕ್ ಅವರಿಗೆ ಉಸ್ತುವಾರಿ ನೀಡಲಾಗಿದೆ ಎಂಬ ಮಾತುಗಳೂ ಕಾರ್ಯಕರ್ತರ ವಲಯದಲ್ಲಿ ಚರ್ಚೆಯಾಗುತ್ತಿವೆ. ಮಂಡ್ಯದಲ್ಲಿ ಅಶೋಕ್ ಉಸ್ತುವಾರಿ ವಹಿಸಿಕೊಂಡ ಬಳಿಕ ಕೇವಲ 2 ಸಭೆ ಮಾಡಿದ್ದಾರೆ. ಅಶೋಕ್ ಮಂಡ್ಯದಲ್ಲಿ ಮ್ಯಾಜಿಕ್ ಮಾಡ್ತಾರೆ ಎನ್ನುವ ವಿಶ್ವಾಸವನ್ನು ಸ್ಥಳೀಯ ನಾಯಕರು ಕಳೆದುಕೊಂಡಿದ್ದಾರೆ.
ಅಶೋಕ್ ಅವರು ಈ ಹಿಂದೆ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಗಾಗಿ ಪಟ್ಟು ಹಿಡಿದಿದ್ದರು. ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಂಡ್ಯ ಉಸ್ತುವಾರಿ ನೀಡುವ ಮೂಲಕ ಸಮಾಧಾನಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಅಶೋಕ್ ಪರವಾಗಿರುವವರ ವಾದ
ಕಂದಾಯ ಸಚಿವ ಆರ್.ಅಶೋಕ್ ಅವರು ಈ ಮೊದಲೂ ಮಂಡ್ಯ ಉಸ್ತುವಾರಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಸ್ಥಳೀಯವಾಗಿ ಕೆಲಸ ಮಾಡಿರುವ ಅನುಭವವೂ ಅವರಿಗೆ ಇದೆ. ಮಂಡ್ಯ ಜಿಲ್ಲೆಯ ಚುನಾವಣೆ ಉಸ್ತುವಾರಿಯಾಗಿ ಕೂಡಾ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಉಸ್ತುವಾರಿ ಬಿಟ್ಟು ಅಶೋಕ್‌ಗೆ ಮಂಡ್ಯ ಉಸ್ತುವಾರಿ ನೀಡಲಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.
ಸಚಿವ ಗೋಪಾಲಯ್ಯ ಅವರು ಹಾಸನ, ಮಂಡ್ಯ ಜಿಲ್ಲೆಯ ಉಸ್ತುವಾರಿಯಾಗಿದ್ದರು. ಅಶೋಕ್‌ಗೆ ಯಾವುದೇ ಪ್ರಬಲ ಜಿಲ್ಲೆಯ ಉಸ್ತುವಾರಿ ಸಿಕ್ಕಿರಲಿಲ್ಲ. ಹೀಗಾಗಿ ಚುನಾವಣೆ ಸಮಯದಲ್ಲಿ ಪಕ್ಷವು ಮಂಡ್ಯ ಉಸ್ತುವಾರಿಯ ಜವಾಬ್ದಾರಿ ನೀಡಿದೆ. ಬಿಜೆಪಿ ಸರ್ಕಾರದ ಇನ್ನಿಬ್ಬರು ಪ್ರಭಾವಿ ಒಕ್ಕಲಿಗ ಸಚಿವರಾಗಿರುವ ಡಾ ಸುಧಾಕರ್ ಅವರಿಗೆ ಬೆಂಗಳೂರು ಗ್ರಾಮಾಂತರ ಹಾಗೂ ಅಶ್ವತ್ಥ ನಾರಾಯಣ ಅವರಿಗೆ ರಾಮನಗರ ಉಸ್ತುವಾರಿ ನೀಡಲಾಗಿದೆ. ಆಡಳಿತ ಮತ್ತು ಗೆಲುವಿನ ಸಾಧ್ಯತೆಯನ್ನು ಗಮನದಲ್ಲಿರಿಸಿಕೊಂಡು ಅಶೋಕ್‌ಗೆ ಈ ಜವಾಬ್ದಾರಿ ನೀಡಲಾಗಿದೆ ಎಂದೂ ಕೆಲ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಶೋಕ್‌ಗೆ ಮಂಡ್ಯ ಉಸ್ತುವಾರಿ..ಲೋಕಲ್ ನಲ್ಲಿ ‘ಉರಿ’: ಬಿಜೆಪಿ ಮಿಷನ್ ಮಂಡ್ಯ ಟಾರ್ಗೆಟ್‌ಗೆ ಜೆಡಿಎಸ್ ಕೌಂಟರ್
Published On - 9:50 am, Thu, 9 February 23