AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಕಮಾಂಡ್ ಅಂಗಳಕ್ಕೆ ವಿಪಕ್ಷ ನಾಯಕನ ಆಯ್ಕೆ: ದಿಲ್ಲಿಗೆ ಹೊರಟ ಯಡಿಯೂರಪ್ಪ, ವಿರೋಧ ಪಕ್ಷ ನಾಯಕನ ಸೀಟ್​ನಲ್ಲಿ ಕೂರುವುದು ಯಾರು?

ಬಿಜೆಪಿ ಹೈಕಮಾಂಡ್​ ಬುಲಾವ್ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದು, ವಿಪಕ್ಷ ನಾಯಕನ ಸೀಟ್​ನಲ್ಲಿ ಕೂರುವುದು ಯಾರು ಎನ್ನುವ ಕುತೂಹಲ ಮನೆ ಮಾಡಿದೆ.

ಹೈಕಮಾಂಡ್ ಅಂಗಳಕ್ಕೆ ವಿಪಕ್ಷ ನಾಯಕನ ಆಯ್ಕೆ: ದಿಲ್ಲಿಗೆ ಹೊರಟ ಯಡಿಯೂರಪ್ಪ, ವಿರೋಧ ಪಕ್ಷ ನಾಯಕನ ಸೀಟ್​ನಲ್ಲಿ ಕೂರುವುದು ಯಾರು?
Follow us
ರಮೇಶ್ ಬಿ. ಜವಳಗೇರಾ
|

Updated on: Jul 02, 2023 | 10:45 AM

ಬೆಂಗಳೂರು: ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕನ(Karnataka Assembly Opposition Leader) ಆಯ್ಕೆ ಕಸರತ್ತು ಅಂತಿಮ ಹಂತ ತಲುಪಿದೆ. ವಿಪಕ್ಷ ನಾಯಕನ ಆಯ್ಕೆ ಚೆಂಡು ಹೈಕಮಾಂಡ್ ಅಂಗಳ ತಲುಪಿದ್ದು, ಇಂದು( ಜುಲೈ 02) ದೆಹಲಿಯಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ. ಹೌದು..ದೆಹಲಿ ಅಂಗಳದಲ್ಲಿ ವಿಪಕ್ಷ ನಾಯಕ ಯಾರು ಎಂಬ ಕುತೂಹಲಕ್ಕೆ ಬಿಜೆಪಿ (BJP) ಹೈಕಮಾಂಡ್ ಫುಲ್ ಸ್ಟಾಪ್ ಇಡಲಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇಂದು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.

ಇದನ್ನೂ ಓದಿ: ಹೇಳಿದ್ದೊಂದು ಮಾಡ್ತಿರೋದು ಇನ್ನೊಂದು, ಅದಕ್ಕೆ ಷರತ್ತುಗಳು ಬೇರೆ! ಜುಲೈ 4 ರಂದು ಧರಣಿಗೆ ಬಿಜೆಪಿ ನಿರ್ಧಾರ

ಇನ್ನು ದೆಹಲಿಗೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ದೆಹಲಿಗೆ ಬರಲು ಹೇಳಿದ್ದಾರೆ. ಹೀಗಾಗಿ ನಾನು ದೆಹಲಿಗೆ ಹೊರಟಿದ್ದೇನೆ. ಆದ್ರೆ, ರಾಷ್ಟ್ರೀಯ ಅಧ್ಯಕ್ಷರು ಯಾವ ವಿಷಯಕ್ಕೆ ಕರೆದಿದ್ದಾರೋ ಗೊತ್ತಿಲ್ಲ. ಅವರು ಏನ್ ಚರ್ಚೆ ಮಾಡುತ್ತಾರೆ. ಅವರ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾರಾಗ್ತಾರೆ ವಿಪಕ್ಷ ನಾಯಕ?​

ಹೊಸ ಸರ್ಕಾರ ರಚನೆಯಾಗಿ ಒಂದೂವರೆ ತಿಂಗಳು ಕಳೆದರೂ ಇನ್ನೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ವಿಧಾನಮಂಡಲ ಅಧಿವೇಶನಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಹೀಗಾಗಿ ವಿಪಕ್ಷ ನಾಯಕನ ಸೀಟ್​ನಲ್ಲಿ ಕೂರುವುದು ಯಾರು ಎನ್ನುವ ಕುತೂಹಲ ಮನೆ ಮಾಡಿದೆ. ಮಾಜಿ ಸಿಎಂ ಬೊಮ್ಮಾಯಿ ಅವರೇ ವಿಧಾನಸಭೆಯ ವಿಪಕ್ಷ ನಾಯಕರಾಗುತ್ತಾರೋ? ಅಥವಾ ಅಚ್ಚರಿ ಪ್ರಯೋಗವನ್ನು ಹೈಕಮಾಂಡ್ ಕೈಗೊಳ್ಳಲಿದೆಯೋ ಎಂಬ ಕುತೂಹಲಕ್ಕೆ ಇಂದೇ ತೆರೆಬೀಳುವ ಸಾಧ್ಯತೆ ಇದೆ.

ವಿಪಕ್ಷ ಲೀಡರ್ ಸ್ಥಾನದಲ್ಲಿ ಕೂರಲು ಕೇಸರಿ ಪಡೆಯಲ್ಲಿ ರೇಸ್ ನಡೆಯುತ್ತಿದ್ದರೂ ಲೋಕಸಭೆ ಚುನಾವಣೆ ಹಾಗೂ ಪಕ್ಷದ ಭವಿಷ್ಯದ ದೃಷ್ಟಿಯನ್ನ ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ಹೈಕಮಾಂಡ್ ಇನ್ನೂ ವಿಪಕ್ಷ ನಾಯಕನ ಹುಡುಕಾಟ ನಡೆಡಿಸಿದೆ. ದೆಹಲಿಯಲ್ಲಿ ಇವತ್ತು ಹೈ ಮೀಟಿಂಗ್ ಇದ್ದು, ರಾಜಾಹುಲಿ ಬಿಎಸ್ ಯಡಿಯೂರಪ್ಪಗೆ ಬುಲಾವ್ ನೀಡಲಾಗಿದೆ. ಮಧ್ಯಾಹ್ನ 2.10ಕ್ಕೆ ಮಾಜಿ ಸಿಎಂ ಬಿಎಸ್​ವೈ ದೆಹಲಿ ತಲುಪಲಿದ್ದಾರೆ.

ದೆಹಲಿಯಲ್ಲಿ ನಡೆಯಲಿರುವ ಸಂಸದೀಯ ಮಂಡಳಿ ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ, ಇಂದಿನ ಸಭೆಯಲ್ಲೇ ಬಹುತೇಕ ವಿಪಕ್ಷ ನಾಯಕ ಘೋಷಣೆ ಮಾಡುವ ಸಾಧ್ಯತೆ ಇದೆ. ಇನ್ನು ಮಾಜಿ ಸಿಎಂ ಬೊಮ್ಮಾಯಿ ಅವ್ರೇ ಬಹುಪಾಲು ವಿಪಕ್ಷ ನಾಯಕರಾಗಿ ಆಯ್ಕೆಯಾಗುವ‌ ನಿರೀಕ್ಷೆ ಇದೆ. ಆದ್ರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ಅಷ್ಟೇ ಪ್ರಬಲವಾಗಿ ಪೈಪೋಟಿ ನೀಡಿದ್ದಾರೆ. ಈ ಮಧ್ಯೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೆಸ್ರು ಕೂಡಾ ಕೇಳಿ ಬಂದಿದೆ.

ಒಟ್ಟಾರೆ ಬಿಜೆಪಿಯಲ್ಲಿರೋ ವಾತಾವರಣದಲ್ಲಿ ಬೊಮ್ಮಾಯಿ ಅವರೇ ವಿಪಕ್ಷ ನಾಯಕರಾಗಬಹುದು ಎನ್ನಲಾಗುತ್ತಿದೆ. ಆದ್ರೆ ಹೈಕಮಾಂಡ್ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಅಯ್ಕೆಯಂತೆ ಪ್ರಯೋಗಕ್ಕೆ ಮುಂದಾಗಬಹುದೇನೋ ಎಂಬ ಕುತೂಹಲ ಮೂಡಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ