ಬಿಜೆಪಿಗೆ ಬಿಗ್ ಶಾಕ್: ಯಡಿಯೂರಪ್ಪ ಸಂಬಂಧಿ ಕಾಂಗ್ರೆಸ್ಗೆ! ಶೆಟ್ಟರ್ ಮಾತುಕತೆ ಯಶಸ್ವಿ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 20 ಸೀಟು ಗೆಲ್ಲಬೇಕೆಂದು ಕಾಂಗ್ರೆಸ್ ಪಣತೊಟ್ಟಿದೆ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ನ ಪ್ರಮುಖ ನಾಯಕರುಗಳಿಗೆ ಗಾಳ ಹಾಕುತ್ತಿದೆ. ಈಗಾಗಲೇ ಕೆಲವು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿಯೊಬ್ಬರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ.
ಹುಬ್ಬಳ್ಳಿ, (ನವೆಂಬರ್ 05): ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬೆನ್ನಲ್ಲೇ ಇತ್ತ ಕಾಂಗ್ರೆಸ್ನಿಂದ ಕರ್ನಾಟಕದಲ್ಲಿ ಆಪರೇಷನ್ ಹಸ್ತ ಬಿರುಸುಗೊಂಡಿದೆ. ಹೌದು…ಮುಂಬರು ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್, ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲುಕಂಡಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳಿಗೆ ಗಾಳ ಹಾಕಿದೆ. ಈಗಾಗಲೇ ಕೆಲ ಬಿಜೆಪಿ ಮಾಜಿ ಶಾಸಕರುಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನವರ ಸಂಬಂಧಿ, ಮಾಜಿ ಶಾಸಕ ಚಿಕ್ಕನಗೌಡರ್ ಬಿಜೆಪಿ ತೊರೆದು ಕಾಂಗ್ರೆಸ್ನತ್ತ ಸೇರ್ಪಡೆಗೆ ಮುಂದಾಗಿದ್ದಾರೆ.
ಹೌದು…ಕೆಲ ಹಲವು ದಿನಗಳಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೂಲಕ ಚಿಕ್ಕನಗೌಡರ್ ಅವರಿಗೆ ಕಾಂಗ್ರೆಸ್ ಗಾಳ ಹಾಕಿತ್ತು. ಇದೀಗ ಶೆಟ್ಟರ್ ಮಾತುಕತೆ ಫಲಪ್ರದದಿಂದಾಗಿ ಚಿಕ್ಕನಗೌಡರ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದಾರೆ. ಈಗಾಗಲೇ ಜಗದೀಶ್ ಶೆಟ್ಟರ್ ಅವರು ಚಿಕ್ಕನಗೌಡರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ಜು ಭೇಟಿ ಮಾಡಿಸಿ ಮಾತುಕತೆ ನಡೆಸಿದ್ದು, ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯೊಂದೇ ಬಾಕಿ ಉಳಿದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲುಕಂಡಿದ್ದರು. ಇದೀಗ ಅವರು ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಮತ್ತೆರಡು ವಿಕೆಟ್ ಪತನ, ಕೇಸರಿ ಪಡೆಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಜಗದೀಶ್ ಶೆಟ್ಟರ್
ಬಿಜೆಪಿ ಪೆಟ್ಟು ನೀಡುತ್ತಿರುವ ಶೆಟ್ಟರ್
ಬಿಜೆಪಿ ನಾಯಕರ ವಿರುದ್ಧ ತೊಡೆತಟ್ಟಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಆಪರೇಷನ್ ಹಸ್ತ ಪ್ರಮುಖ ರೂವಾರಿಯಾಗಿದ್ದಾರೆ. ಉತ್ತರ ಕರ್ನಾಟಕದ ಭಾಗದ ಹಲವು ಬಿಜೆಪಿ ಲಿಂಗಾಯತ ನಾಯಕರಿಗೆ ಗಾಳ ಹಾಕಿದ್ದು, ಕಾಂಗ್ರೆಸ್ಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಈಗಾಗಲೇ ಮಾಜಿ ಶಾಸಕರಾದ ಎಂಪಿ ಕುಮಾರಸ್ವಾಮಿ, ರಾಮಣ್ಣ ಲಮಾಣಿ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಇದೀಗ ಯಡಿಯೂರಪ್ಪ ಸಂಬಂಧಿ ಚಿಕ್ಕನಗೌಡರ ಅವರಿಗೆ ಹಾಕಿದ್ದ ಗಾಳ ಯಶಸ್ವಿಯಾಗಿದ್ದು, ಕೆಲ ದಿನಗಳಲ್ಲಿ ಅವರು ಕೈ ಹಿಡಿಯಲಿದ್ದಾರೆ.
ಹೈಕಮಾಂಡ್ ಸೂಚನೆ ಮೇರೆಗೆ ಜಗದೀಶ್ ಶೆಟ್ಟರ್ ಅವರು ಬಿಜೆಪಿಯ ಹಲವು ನಾಯಕರಿಗೆ ಕಾಂಗ್ರೆಸ್ಗೆ ಆಹ್ವಾನಿ ನೀಡಿದ್ದಾರೆ.ಅಲ್ಲದೇ ಈ ಬಗ್ಗೆ ಕೆಲವರ ಜೊತೆ ಒಂದು ಹಂತದ ಮಾತುಕತೆಗಳು ಸಹ ಮುಗಿದಿವೆ ಎಂದು ತಿಳಿದುಬಂದಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಒಟ್ಟಿನಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದು, ಆ ಪಕ್ಷದ ಒಬ್ಬೊರನ್ನೇ ಕರೆತಂದು ಕಾಂಗ್ರೆಸ್ಗೆ ಸೇರಿಸುತ್ತಿದ್ದಾರೆ. ಇದು ಬಿಜೆಪಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Sun, 5 November 23