ಬಿಜೆಪಿಯಲ್ಲಿ ಹಣವೇ ಪ್ರಧಾನ ಆಗಿದ್ದರೆ ಬೈಂದೂರು, ಸುಳ್ಯದಲ್ಲಿ ಬಡ ಕಾರ್ಯಕರ್ತರಿಗೆ ಟಿಕೆಟ್ ಸಿಗುತ್ತಿರಲಿಲ್ಲ: ಸಿಟಿ ರವಿ

ಬಿಜೆಪಿ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಪಡೆದು ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಂಚನೆ ಎಸಗಿರುವ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಆಡಳಿತರೂಢ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮಾಜಿ ಶಾಸಕ ಸಿಟಿ ರವಿ, ಹಣವೇ ಬಿಜೆಪಿಯಲ್ಲಿ ಪ್ರಧಾನವಾಗಿದ್ದರೆ ಬೈಂದೂರು ಮತ್ತು ಸುಳ್ಯ ಕ್ಷೇತ್ರಗಳ ಟಿಕೆಟ್ ಬಡ ಕಾರ್ಯಕರ್ತರಿಗೆ ಸಿಗುತ್ತಿರಲಿಲ್ಲ ಎಂದಿದ್ದಾರೆ.

ಬಿಜೆಪಿಯಲ್ಲಿ ಹಣವೇ ಪ್ರಧಾನ ಆಗಿದ್ದರೆ ಬೈಂದೂರು, ಸುಳ್ಯದಲ್ಲಿ ಬಡ ಕಾರ್ಯಕರ್ತರಿಗೆ ಟಿಕೆಟ್ ಸಿಗುತ್ತಿರಲಿಲ್ಲ: ಸಿಟಿ ರವಿ
ಸಿಟಿ ರವಿ ಮತ್ತು ಚೈತ್ರಾ ಕುಂದಾಪುರ
Edited By: Rakesh Nayak Manchi

Updated on: Sep 16, 2023 | 12:06 PM

ಮಂಗಳೂರು, ಸೆ.16: ಬೈಂದೂರು ಬಿಜೆಪಿ ಟಿಕೆಟ್​​ಗಾಗಿ ಚೈತ್ರಾ ಕುಂದಾಪುರ (Chaitra Kundapur) ಡೀಲ್ ಪ್ರಕರಣ ಸಂಬಂಧ ಮಾತನಾಡಿದ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi), ಹಣವೇ ಬಿಜೆಪಿಯಲ್ಲಿ ಪ್ರಧಾನ ಆಲ್ಲ, ಹಾಗಿದ್ದರೆ ನೂರಾರು ಬಡ ಕಾರ್ಯಕರ್ತರು ನಮ್ಮಲ್ಲಿ ಸಂಸದರು, ಶಾಸಕರು ಆಗುತ್ತಿರಲಿಲ್ಲ ಎಂದರು.

ಬಿಜೆಪಿಯಲ್ಲಿ ಹಣವೇ ಪ್ರಧಾನವಾಗಿದ್ದರೆ ಬೈಂದೂರಿನ ಟಿಕೆಟ್ ಬಡ ಕಾರ್ಯಕರ್ತ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸುಳ್ಯದ ಟಿಕೆಟ್ ಬಡ ಮಹಿಳೆ ಭಾಗೀರಥಿ ಮುರುಳ್ಯ ಅವರಿಗೆ ಸಿಗುತ್ತಿರಲಿಲ್ಲ. ಕೋಟಾ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಅವರು ನಾಯಕರಾಗುತ್ತಿರಲಿಲ್ಲ ಎಂದರು.

ಇದನ್ನೂ ಓದಿ: ಚೈತ್ರಾ ಕುಂದಾಪುರ ಮತ್ತು ಗೋವಿಂದ ಬಾಬು ಆಪ್ತ ಪ್ರಸಾದ್ ನಡುವೆ ನಡೆದ ಸಂಭಾಷಣೆಯ ಆಡಿಯೋ ಬಹಿರಂಗ

ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಮೋಸ‌ ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಂಥ ಬುದ್ದಿವಂತರ ಜಿಲ್ಲೆಯ ಇವರೇ ಮೋಸ ಹೋಗಿದ್ದಾರೆ. ಅವರು‌ ನೇರವಾಗಿ ಫೋನ್ ಮಾಡಿದರೂ ಬಿಜೆಪಿ ನಾಯಕರು ಸಂಪರ್ಕಕ್ಕೆ ಸಿಗುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರ ಜೊತೆ ತುಳು ಭಾಷೆಯಲ್ಲೇ ಮಾತಾಡುತ್ತಿದ್ದರು. ನಳಿನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿಯೂ ಮಾತಾಡುತ್ತಿದ್ದರು ಎಂದರು.

ಅವರ ಬಳಿಯೇ ನೇರ ಫೋನ್ ಮಾಡಿ ಮಾತನಾಡುವ ಅವಕಾಶ ಗೋವಿಂದ ಬಾಬು ಪೂಜಾರಿಗೆ ಇತ್ತು. ಈ ಪ್ರಕರಣದ ಬಗ್ಗೆ ಸತ್ಯ ಬಹಿರಂಗ ಆಗಬೇಕು, ಸಮಗ್ರ ತನಿಖೆ ಆಗಬೇಕು. ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕ್ರಮ ಆಗಲಿ. ಯಾರದ್ದೋ ಹೆಸರು ಕೇಳಿ ಬರುತ್ತಿದೆ ಅನ್ನೋದು ಬೇರೆ. ಮೊದಲು ಸಮಗ್ರ ತನಿಖೆ ಆಗಲಿ ಎಂದರು.

ಮೈತ್ರಿ ವಿಚಾರದಲ್ಲಿ ವರಿಷ್ಠರ ನಡೆ ಮುಖ್ಯ: ಸಿಟಿ ರವಿ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಟಿ ರವಿ, ನಾವು ಪರಿಷತ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆ ಆಗುತ್ತಿದೆ, ಆದರೆ ಅಂತಿಮ ಆಗಿಲ್ಲ. ಹಾಗಾಗಿ‌ ಅದು ವರಿಷ್ಠರ ತೀರ್ಮಾನ, ನಾವು ಯಾವುದೇ ಚುನಾವಣೆಗೆ ನಮ್ಮ ಹಂತದಲ್ಲಿ ಸಿದ್ಧವಾಗುತ್ತಿದ್ದೇವೆ. ಈ ಮೈತ್ರಿ ವಿಚಾರದಲ್ಲಿ ವರಿಷ್ಠರ ನಡೆ ಮುಖ್ಯವಾಗಿದೆ ಎಂದರು.

ಬಿಜೆಪಿಯ ಮಾಜಿ ಕಾರ್ಪೋರೆಟರ್​ಗಳು, ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ. ಬೆಲ್ಲ ಇದ್ದ ಕಡೆ ಇರುವೆ ಹೋಗುವುದು ಸ್ವಾಭಾವಿಕ. ಕೆಲವರು ಅಧಿಕಾರದ ಕಾರಣಕ್ಕೆ ಇಲ್ಲಿಂದ ಅಲ್ಲಿಗೆ ಹೋಗಿದ್ದಾರೆ. ನಾವು ಸಚಿವರು, ಶಾಸಕರನ್ನೇ ಕರೆದುಕೊಂಡು ಹೋದರೂ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ. ಈಗ ಅವರು ಕಾರ್ಪೋರೆಟರ್​ಗಳನ್ನು ಕರೆದುಕೊಂಡು ಏನಾಗುತ್ತದೆ ಎಂದರು.

ಈಗ ಅವರು ಅಪರೇಷನ್ ಹಸ್ತ ಮಾಡಲಿ, ಮುಂದೆ ಜನರೇ ಹಸ್ತವನ್ನು ಅಪರೇಷನ್ ಮಾಡುತ್ತಾರೆ. ಅಧಿಕಾರದ ಆಸೆಗೆ ಯಾರು‌ ಎಲ್ಲೇ ಹೋದರೂ ಅಧಿಕಾರ ಉಳಿಸಿಕೊಳ್ಳಲು ಆಗಲ್ಲ. ನನ್ನ ಸೋಲಿಗೆ ನಾನೇ ಕಾರಣ, ಬೇರೆ ಯಾರಿಗೂ ದೂರಲ್ಲ. ನನ್ನ ದುರ್ಬಲತೆಯೇ ಕಾರಣ, ಅತೀ ಹೆಚ್ಚು ವೋಟ್ ಪಡೆದರೂ ಸೋತಿದ್ದೇನೆ ಎಂದರು.

ಅಂಜುಮನ್ ಇಸ್ಲಾಂ ಕೋರ್ಟ್​ಗೆ ಹೋಗಿದ್ದೇ ತಪ್ಪು: ಸಿಟಿ ರವಿ

ಹುಬ್ಬಳ್ಳಿ ಈದ್ಗಾ ಮೈದಾನ ಅಲ್ಲ, ಅದು ನಗರ ಪಾಲಿಕೆಯ ಮೈದಾನವಾಗಿದೆ. ಅದರ ವಿರುದ್ಧ ಅಂಜುಮನ್ ಇಸ್ಲಾಂ ಹೈಕೋರ್ಟ್​ಗೆ ಹೋಗಿದ್ದೇ ತಪ್ಪು. ಅಲ್ಲಿ‌ ಅನುಮತಿ ಕೊಡುವುದು ಬಿಡುವುದು ಪಾಲಿಕೆಗೆ ಬಿಟ್ಟ ವಿಚಾರ ಎಂದು ಸಿಟಿ ರವಿ ಹೇಳಿದರು. ಕಾಂಗ್ರೆಸ್ ಬಂದಾಗ ಈ ಕೋಮುವಾದಿ ಶಕ್ತಿಗಳು ಎದ್ದು ಕೂರುತ್ತವೆ. ಈ ನಡುವೆ ಗಣೇಶೋತ್ಸವಕ್ಕೆ ಅನುಮತಿ ಕೊಡಬೇಡಿ ಅಂತ ಕೋರ್ಟ್‌ಗೆ ಹೋಗಲು ಇವರು ಯಾರು ಎಂದು ಪ್ರಶ್ನಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Sat, 16 September 23

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us