ದಲಿತರನ್ನು ಮುಗಿಸುವುದರಲ್ಲಿ ಸಿದ್ದರಾಮಯ್ಯ ಬಹಳ ಸ್ಟ್ರಾಂಗ್: ಛಲವಾದಿ ನಾರಾಯಣ ಸ್ವಾಮಿ ಟಾಂಗ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲ ಪಿಎಂ ಎಂದು ವ್ಯಂಗ್ಯವಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸ್ಟ್ರಾಂಗ್ ಸಿಎಂ ಹೌದು, ಅದು ದಲಿತರನ್ನು ಮುಗಿಸುವುದರಲ್ಲಿ ಎಂದು ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಬೆಂಗಳೂರು, ಮಾರ್ಚ್ 22: ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲ ಪಿಎಂ ಎಂದು ಟೀಕಿಸಿರುವ ಸಿಎಂ ಸಿದ್ದರಾಮಯ್ಯಗೆ (Siddaramaiah) ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ತಿರುಗೇಟು ನೀಡಿದ್ದು, ದಲಿತರನ್ನು ಮುಗಿಸುವುದರಲ್ಲಿ ಅವರು ಸ್ಟ್ರಾಂಗ್ ಎಂದು ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ನಾನೇ ಸ್ಟ್ರಾಂಗ್ ಸಿಎಂ ಅಂತ ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಾರೆ. ಇವರಿಗೆ ಸ್ಟ್ರಾಂಗ್ ಸಿಎಂ ಅಂತ ಸರ್ಟಿಫಿಕೇಟ್ ಕೊಟ್ಟವರು ಯಾರು? ದಲಿತರನ್ನು ಮುಗಿಸುವುದರಲ್ಲಿ ಸಿದ್ದರಾಮಯ್ಯ ಬಹಳ ಸ್ಟ್ರಾಂಗ್ ಇರಬಹುದು ಎಂದರು.
‘ಕಾಂಗ್ರೆಸ್ ಪಕ್ಷ ಮುಗಿಸುವುದರಲ್ಲಿ ನೀವು (ಸಿದ್ದರಾಮಯ್ಯ) ಬಹಳ ಸ್ಟ್ರಾಂಗ್ ಇದ್ದೀರಿ. ಮೋದಿ ಕಾಲಿನ ಧೂಳಿಗೂ ನೀವು ಸಮವಲ್ಲ. ಮೇಕೆದಾಟು ವಿರೋಧ ಮಾಡುವ ಡಿಎಂಕೆ ವಿರುದ್ಧ ಯಾವಾಗ ಪಾದಯಾತ್ರೆ ಮಾಡುತ್ತೀರಿ’ ಎಂದು ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಬೀದಿ ಬಸವನಂತೆ: ನಾರಾಯಣಸ್ವಾಮಿ
ಕಾಂಗ್ರೆಸ್ ಪಕ್ಷದವರು ಸಾಂದರ್ಭಿಕವಾಗಿ ನಾಟಕ ಮಾಡುತ್ತಾರೆ. ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಬೀದಿ ಬಸವ ಇದ್ದ ಹಾಗೆ. ಎಲ್ಲಾದರೂ ಸಿಕ್ಕ ಸಿಕ್ಕ ಕಡೆ ಮೇಯ್ದುಕೊಂಡು ಬರಬಹುದು. ಗೃಹ ಸಚಿವರು ಮಾತನಾಡುವ ಮೊದಲೇ ಖರ್ಗೆ ತಾವೇ ಮಾತನಾಡುತ್ತಾರೆ. ಮೋದಿ ಅವರನ್ನು ಪ್ರಿಯಾಂಕ್ ಖರ್ಗೆ ಚೋರ್ ಗುರು ಎನ್ನುತ್ತಾರೆ. ನಿಜವಾದ ಚೋರ್ ಗುರು ಸಿದ್ದರಾಮಯ್ಯ ಎಂದು ಅವರು ಕಿಡಿ ಕಾರಿದರು.
ಇದನ್ನೂ ಓದಿ: ಈಶ್ವರಪ್ಪಗೆ ‘ಬಂಡುಕೋರ ನಾಯಕ’ ಎಂದ ಸಿದ್ದರಾಮಯ್ಯ ಮೋದಿಯನ್ನು ‘ವೀಕ್ ಪಿಎಂ’ ಎಂದು ಜರಿದರು!
ಪ್ರಿಯಾಂಕ್ ಖರ್ಗೆ ಅಪ್ಪನ ಹೆಸರಿನಲ್ಲಿ ಬಂದು ಬಿಟ್ಟಿದ್ದಾರೆ. ಚಂಡಾಳ ಅಂದರೆ ಅಸಾಂವಿಧಾನಿಕ ಪದ. ಪ್ರಜಾಪ್ರಭುತ್ವದ ಬಗ್ಗೆ ಸಿದ್ದರಾಮಯ್ಯಗೆ ಗೌರವ ಇದ್ರೆ ಬೀದಿ ಬಸವ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಇಲ್ಲ ಅಂದರೆ ನೀವೇ ಚೋರ್ ಗುರು, ಪ್ರಿಯಾಂಕ್ ಖರ್ಗೆ ಚಂಡಾಳ ಶಿಷ್ಯ ಎಂದು ಛಲವಾದಿ ಆಕ್ರೋಶ ವ್ಯಕ್ತಪಡಿಸಿದರು.
‘ಸದಾನಂದ ಗೌಡ ಯಾರನ್ನೂ ಉದ್ದೇಶಿಸಿ ಹೇಳಿಲ್ಲ’
ಬಿಜೆಪಿ ಶುದ್ಧೀಕರಣ ಕುರಿತು ಮಾಜಿ ಸಿಎಂ ಸದಾನಂದ ಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಸದಾನಂದ ಗೌಡರು ಯಾರ ಹೆಸರನ್ನೂ ಹೇಳಿಲ್ಲ. ಅರ್ಥ ಮಾಡಿಕೊಂಡಿರುವವರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ. ಅದನ್ನು ಸದಾನಂದ ಗೌಡರೇ ಸ್ಪಷ್ಟಪಡಿಸಿದ್ದಾರೆ. ನಾನು ಬೆಳಗ್ಗೆಯಷ್ಟೇ ಸದಾನಂದ ಗೌಡರ ಜೊತೆಗೆ ಮಾತನಾಡಿದ್ದೇನೆ. ಯಾವುದೇ ಗೊಂದಲ ಇಲ್ಲ, ಏನಾದರೂ ಇದ್ದರೆ ಹೈಕಮಾಂಡ್ ನಾಯಕರನ್ನೇ ಕೇಳಬೇಕು. ಟಿಕೆಟ್ ಸಿಕ್ಕಿದವರು ಸಹ ಯಡಿಯೂರಪ್ಪನವರಿಂದಲೇ ನಮಗೆ ಟಿಕೆಟ್ ಸಿಕ್ಕಿದೆ ಅಂತ ಯಾರೂ ಹೇಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ