ಸಿದ್ದರಾಮಯ್ಯಗೆ ಈಗಲೂ ಬಿಜೆಪಿಯಿಂದ ಜೀವ ಬೆದರಿಕೆ: ಕೆಪಿಸಿಸಿ ವಕ್ತಾರ ಗಂಭೀರ ಆರೋಪ
ಸಿಎಂ ಸಿದ್ದರಾಮಯ್ಯರಿಗೆ ಈಗಲೂ ಬಿಜೆಪಿಯಿಂದ ಜೀವ ಬೆದರಿಕೆ ಇದೆ. ಹಾಗಾಗಿ ಅಶ್ವತ್ಥ್ ನಾರಾಯಣ ಅವರನ್ನು ಪೊಲೀಸರು ಇಂದು ಸಂಜೆಯೊಳಗೆ ವಶಕ್ಕೆ ಪಡೆಯಬೇಕೆಂದು ಕೆಪಿಸಿಸಿ ವಕ್ತಾರ ಒತ್ತಾಯಿಸಿದ್ದಾರೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಲೂ ಬಿಜೆಪಿಯಿಂದ ಜೀವ ಬೆದರಿಕೆ ಇದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಇಂದು(ಮೇ 23) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ಬಿಜೆಪಿಯಿಂದ ಸಿದ್ದರಾಮಯ್ಯನವರಿಗೆ ಜೀವ ಬೆದರಿಕೆ ಇದೆ. ಅದೇ ಕಾರಣಕ್ಕೆ ಅಶ್ವತ್ ನಾರಾಯಣ್ ವಿರುದ್ಧ ನೀಡಿದ್ದ ದೂರಿನ ಮೇಲೆ ಕ್ರಮಕ್ಕೆ ಒತ್ತಾಯಿಸುತ್ತಿದೇವೆ. ಉರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನ ಹೊಡೆದು ಹಾಕಿ ಎಂದಿದ್ದ ಅಶ್ವತ್ಥ್ ನಾರಾಯಣ್ ಅವರ ಈ ಹೇಳಿಕೆ ವಿಡಿಯೋ ಈಗಲೂ ವೈರಲ್ ಆಗುತ್ತಿದೆ. ಇದರಿಂದ ಸಿದ್ದರಾಮಯ್ಯರ ಮೇಲೆ ಮತ್ತೆ ದಾಳಿಯಾಗುವ ಸಾಧ್ಯತೆ ಇದೆ ಎಂದರು.
ಸಿಎಂ ಸಿದ್ದರಾಮಯ್ಯರಿಗೆ ಏನೇ ಆದರು ಅದಕ್ಕೆ ಬಿಜೆಪಿ, ಅಶ್ವತ್ ನಾರಾಯಣ್ ಹೊಣೆ. ಈ ಕೂಡಲೇ ಅಶ್ವಥ್ ನಾರಾಯಣ್‌ರನ್ನು ಪೊಲೀಸರು ಬಂಧಿಸಬೇಕು. ನಾವು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲಾಗಿದೆ. ಈ ಹಿನ್ನೆಲೆ ಪೊಲೀಸರು ಈ ಬಗ್ಗೆ ಸ್ಪೀಕರ್‌ಗೆ ಮಾಹಿತಿ ನೀಡಿದ್ದಾರೆ. ಅಶ್ವತ್ಥ್ ನಾರಾಯಣ್ ಯಾವ ಉದ್ದೇಶದಿಂದ ಈ ಹೇಳಿಕೆ ಕೊಟ್ಟಿದ್ದರು ಎಂಬುದು ತಿಳಿಯಬೇಕಿದೆ. ಅವರ ಮೇಲೆ ಕಠಿಣ ಕ್ರಮವೂ ಆಗಬೇಕು ಎಂದು ಹೇಳಿದರು.
ರಾಜ್ಯಾದ್ಯಂತ ಹಿಂದೆ ಬಿಜೆಪಿ ವಿರುದ್ಧ ನೀಡಿಲಾಗಿರುವ ದೂರಿನ ಕ್ರಮಕ್ಕೆ ಒತ್ತಾಯಿಸುತ್ತೇವೆ. ಹಿಂದೆ ಪೊಲೀಸರು ಬಿಜೆಪಿ ಏಜೆಂಟರಂತೆ ವರ್ತಿಸಿದ್ದರು. ಹೀಗಾಗಿ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಇಂದು ಸಂಜೆ ವೇಳೆಗೆ ಅಶ್ವತ್ಥ್ ನಾರಾಯಣ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಬೇಕು. ಸಮಗ್ರವಾದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಅಶ್ವತ್ಥ್ ನಾರಾಯಣ ವಿರುದ್ಧ ಎಫ್ಐಆರ್
ಕಳೆದ ಫೆಬ್ರವರಿ 14ರಂದು ಮಂಡ್ಯ ಜಿಲ್ಲೆಯ ಸಾತನೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಅಶ್ವತ್ಥ್ ನಾರಾಯಣ್ ಅವರು, ಉರಿಗೌಡ ಮತ್ತು ನಂಜೇಗೌಡರು ಟಿಪ್ಪು ಸುಲ್ತಾನನ್ನು ಹೇಗೆ ಕೊಂದು ಹಾಕಿದರೋ, ಹಾಗೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಸಂಬಂಧ ಇಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಮೈಸೂರು ಜಿಲ್ಲಾ ಕಾಂಗ್ರೆಸ್ ನಿಯೋಗದೊಂದಿಗೆ ದೇವರಾಜ ಪೊಲೀಸ್ ಠಾಣೆಗೆ ತೆರಳಿ, ಅಶ್ವತ್ಥನಾರಾಯಣ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 506, 153 ರಡಿ ಎಫ್ಐಆರ್ ದಾಖಲಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲೇ ಈ ಸಂಬಂಧ ಕಾಂಗ್ರೆಸ್ ನಾಯಕರು ಅಶ್ವತ್ಥನಾರಾಯಣ್ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ವಾರದಲ್ಲೇ ಅಶ್ವತ್ಥ್ ನಾರಾಯಣ್ ವಿರುದ್ಧ ದೂರು ದಾಖಲಿಸಲಾಗಿದೆ.
Published On - 12:21 pm, Thu, 25 May 23