Explainer: ಕರ್ನಾಟಕ ಕಾಂಗ್ರೆಸ್ನಲ್ಲಿ ನಿಲ್ಲದ ಸಂಘರ್ಷ, ಅಧಿಕಾರಕ್ಕೇರಿ ಒಂದೇ ವರ್ಷದಲ್ಲಿ ಭುಗಿಲೆದ್ದ ಭಿನ್ನಮತ
ಕರ್ನಾಟಕದಲ್ಲಿ 135 ಸ್ಥಾನ ಗೆದ್ದು ಭರ್ಜರಿ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದಲ್ಲಿ, ಅಧಿಕಾರಕ್ಕೇರಿ ಒಂದು ವರ್ಷ ಕಳೆಯುತ್ತಿದ್ದಂತೆಯೇ ಭಿನ್ನಮತ ಭುಗಿಲೇಳತೊಡಗಿದೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗ್ರಹದ ಜತೆಗೆ ಇದೀಗ ಸಿಎಂ ಬದಲಾವಣೆಯ ಚರ್ಚೆ ಕೂಡ ಶುರುವಾಗಿದೆ. ‘ಕೈ’ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮತ್ತೆ ಮತ್ತೆ ನಿರೂಪಿಸುತ್ತಿರುವ ಘಟನಾವಳಿಗಳ ಸಮಗ್ರ ವಿವರ ಇಲ್ಲಿದೆ.
ಬೆಂಗಳೂರು, ಜೂನ್ 29: ಲೋಕಸಭೆ ಚುನಾವಣೆ ಮುಗಿದು ಕೆಲವೇ ದಿನಗಳಾಗುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್ನಲ್ಲಿ ಆಂತರಿಕ ಸಂಘರ್ಷ ಹೆಚ್ಚಾಗತೊಡಗಿದೆ. ಇದರೊಂದಿಗೆ, ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಪಕ್ಷದಲ್ಲಿ ಭಿನ್ನಮತ ಹೆಚ್ಚಾಗುವಂತಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದಕ್ಕೆ ಪುಷ್ಟಿ ನೀಡಿವೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ವಿವಿಧ ಸಮುದಾಯಗಳ ಮುಖಂಡರ ಆಗ್ರಹ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಶುರುವಾಗಿರುವ ಚರ್ಚೆ ಹಾಗೂ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವುದು ಆಡಳಿತ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿದೆ.
ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆಯಿಂದ ಶುರುವಾದ ವಾಕ್ಸಮರ
ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವುದಕ್ಕಾಗಿ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಕೆಲವು ದಿನಗಳ ಹಿಂದೆ ಸಚಿವ ಕೆಎನ್ ರಾಜಣ್ಣ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಸತೀಶ್ ಜಾರಕಿಹೊಳಿ ಕೂಡ ಇದೇ ರೀತಿಯ ಮಾತುಗಳನ್ನಾಡಿದ್ದರು. ಆದರೆ, ರಾಜಣ್ಣ ಹೇಳಿಕೆಯ ಬೆನ್ನಲ್ಲೇ ಆ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ಜೋರಾಗತೊಡಗಿತು.
ಈ ಹಿಂದೆ ಬಿಜೆಪಿ ಕೂಡ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಸಲುವಾಗಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿತ್ತು. ಅಧಿಕಾರ ಹಂಚಿಕೆ ವಿಚಾರಕ್ಕೆ ಬಂದಾಗ ಎಲ್ಲ ಸಮುದಾಯಗಳಿಗೂ ಅವಕಾಶ ನೀಡಬೇಕು. ಆಗ ಎಲ್ಲರಿಗೂ ಪಕ್ಷದಲ್ಲಿ ವಿಶ್ವಾಸ ಮೂಡುತ್ತದೆ. ಕೆಲವೇ ಜನ ಅಧಿಕಾರ ಅನುಭವಿಸಿ ಇತರರಿಗೆ ನೀಡದೇ ಇದ್ದಾಗ ಆ ಪಕ್ಷದ ಬಗ್ಗೆ ಪ್ರೀತಿ ಆ ಸಮುದಾಯದ ಜನರಲ್ಲಿ ಪ್ರೀತಿ ಕಡಿಮೆಯಾಗುತ್ತದೆ ಎಂದು ರಾಜಣ್ಣ ಹೇಳಿದ್ದರು.
ಕೆರಳಿದ ಡಿಕೆ ಶಿವಕುಮಾರ್ ಬಣ
ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡ ಕೆಲವು ನಾಯಕರು ಅದಕ್ಕೆ ವಿರುದ್ಧ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಯಾಕಂದರೆ, ಹೆಚ್ಚುವರಿ ಡಿಸಿಎಂ ಬೇಕೆಂದು ಪಟ್ಟುಹಿಡಿದವರಲ್ಲಿ ಬಹುತೇಕರು ಸಿಎಂ ಸಿದ್ದರಾಮಯ್ಯ ಆಪ್ತರೇ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆಗೆ ಶಾಸಕ ಮಾಗಡಿ ಬಾಲಕೃಷ್ಣ, ಮಾಜಿ ಸಂಸದ ಡಿಕೆ ಸುರೇಶ್ ಸೇರಿ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದ ಶಾಸಕ ಬಸವರಾಜ್ ಶಿವಗಂಗಾ
ಈ ಮಧ್ಯೆ, ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಶಾಸಕ ಬಸವರಾಜ್ ಶಿವಗಂಗಾ ಬಹಿರಂಗ ಹೇಳಿಕೆ ನೀಡಿದರು. ಕೆಲವು ದಿನಗಳ ಹಿಂದೆ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ, ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ್ದ ಅವರು, ಕೆಪಿಸಿಸಿ ಅಧ್ಯಕ್ಷರಾಗಿದ್ದವರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ ಪದ್ಧತಿ. ಹೆಚ್ಚುವರಿ ಡಿಸಿಎಂ ಆಯ್ಕೆ ಮಾಡುವುದೇ ಆದರೆ, ಡಿಕೆ ಶಿವಕುಮಾರ್ರನ್ನು ಮುಖ್ಯಮಂತ್ರಿ ಮಾಡಿ, ಆಮೇಲೆ ಹತ್ತು ಡಿಸಿಎಂ ಬೇಕಾದರೂ ಮಾಡಿಕೊಳ್ಳಲಿ ಎಂದಿದ್ದರು. ಅಷ್ಟೇ ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಲೀಡ್ ತಂದುಕೊಡದ ಸಚಿವರನ್ನು ಸ್ಥಾನದಿಂದ ಕೈಬಿಡಲಿ ಎಂದು ಆಗ್ರಹಿಸಿದ್ದರು.
ಕಾಂಗ್ರೆಸ್ ಸರ್ಕಾರದ ಮೊದಲ ಎರಡೂವರೆ ವರ್ಷ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿದ್ದಾರೆ. ನಂತರದ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಸಿಎಂ ಆಗಿರಲಿದ್ದಾರೆ ಎಂಬ ವದಂತಿ ಕಳೆದ ವರ್ಷದಿಂದಲೂ ಚಾಲ್ತಿಯಲ್ಲಿದೆ. ಆದರೆ, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ನಾಯಕರಾಗಲಿ, ಸಂಬಂಧಪಟ್ಟ ನಾಯಕರಾಗಲಿ ಅಧಿಕೃತ ಹೇಳಿಕೆಯನ್ನು ಈವರೆಗ ನೀಡಿಲ್ಲ. ಆದರೆ, ಕಾಂಗ್ರೆಸ್ ಆಂತರಿಕ ವಲಯದಲ್ಲಿ ಈ ಗುಸುಗುಸು ಇದ್ದೇ ಇದೆ.
ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಖುದ್ದು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದರು. ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆ ಯಾರೂ ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ಅವರು ಶಾಸಕರು, ಸಚಿವರಿಗೆ ಎಚ್ಚರಿಕೆ ನೀಡಿದರು. ಬಹಿರಂಗ ಹೇಳಿಕೆಗಳಿಂದ ಸರ್ಕಾರ, ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಡಿಸಿಎಂ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆ ನೀಡಲೇಬಾರದು ಎಂದು ಅವರು ತಾಕೀತು ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಬದಲಾವಣೆಯ ಪಟ್ಟು
ಹೆಚ್ಚುವರಿ ಡಿಸಿಎಂ ಹುದ್ದೆ ಸಂಬಂಧಿತ ಚರ್ಚೆಯ ಮಧ್ಯದಲ್ಲೇ, ಕೆಪಿಸಿಸಿ ಅಧ್ಯಕ್ಷ ಬದಲಾವಣೆಗೂ ಪಕ್ಷದ ನಾಯಕರ ಒಂದು ಬಣ ಪಟ್ಟು ಹಿಡಿಯಲು ಮುಂದಾಗಿರುವ ಬಗ್ಗೆ ವರದಿಯಾಗಿದೆ. ಅಸಲಿಗೆ, ಹೆಚ್ಚುವರಿ ಡಿಸಿಎಂ ಬೇಡಿಕೆ ಹಿಂದಿನ ಅಸಲಿಯತ್ತೇ ಅಧ್ಯಕ್ಷಗಿರಿ ಬದಲಾವಣೆ ಎಂದು ಕಾಂಗ್ರೆಸ್ನ ಕೆಲವು ಮೂಲಗಳು ಹೇಳಿವೆ. ಮೂಲಗಳ ಪ್ರಕಾರ, ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಸಿ ಎನ್ನುತ್ತಿರುವ ನಾಯಕರು ಹೆಚ್ಚು ಡಿಸಿಎಂ ಕೇಳಿದರೆ, ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ.
ಒನ್ ಮ್ಯಾನ್ ಒನ್ ಪೋಸ್ಟ್ ಎಂಬ ಅಜೆಂಡಾ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ರನ್ನು ಕಟ್ಟಿ ಹಾಕಬೇಕು ಎಂಬುದು ತೆರೆಮರೆಯ ಕಸರತ್ತು ಎನ್ನಲಾಗಿದೆ. ಕಾಂಗ್ರೆಸ್ಗೆ ಮತ ಹಾಕಿದ ಸಮುದಾಯಕ್ಕೆ ಅಧಿಕಾರ ನೀಡಿ, ವೋಟು ಕೊಡದ ಸಮುದಾಯದ ನಾಯಕರಿಗೆ ಪಕ್ಷದಲ್ಲಿ ಮಣೆ ಯಾಕೆ? ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ, ಲಿಂಗಾಯತ ಮತಗಳು ಕೈಹಿಡಿದಿಲ್ಲ. ದಲಿತ, ಮುಸ್ಲಿಂ, ಹಿಂದುಳಿದ ಮತಗಳು ಹೆಚ್ಚು ಕಾಂಗ್ರೆಸ್ಗೆ ಬಂದಿವೆ. ಈ ಸಮುದಾಯದ ನಾಯಕರಿಗೆ ಹೆಚ್ಚು ಅಧಿಕಾರ ನೀಡಬೇಕೆಂಬ ಕೂಗು ಒಂದು ವರ್ಗದ ನಾಯಕರದ್ದಾಗಿದೆ.
ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಲಿಂಗಾಯತ ನಾಯಕರ ಕಣ್ಣು
ಏತನ್ಮಧ್ಯೆ, ಅಧ್ಯಕ್ಷರ ಬದಲಾವಣೆ ಮಾಡುವುದೇ ಆದರೆ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಿ ಎಂದು ಅತ್ತ ವಿನಯ್ ಕುಲಕರ್ಣಿ ನೇತೃತ್ವದ ಶಾಸಕರ ನಿಯೋಗ ಆಗ್ರಹಿಸಿದೆ. ಈ ವಿಚಾರವಾಗಿ ನಿಯೋಗವು ಕೆಲವು ದಿನ ಹಿಂದಷ್ಟೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಕೂಡ ಭೇಟಿ ಮಾಡಿದೆ.
ಅಖಾಡಕ್ಕಿಳಿದ ಸ್ವಾಮೀಜಿಗಳು
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ನೀಡಿದ ಹೇಳಿಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು. ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ಗೆ ಬಿಟ್ಟುಕೊಡುವಂತೆ ಬಹಿರಂಗವಾಗಿಯೇ ಅವರು ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದರು. ಇದಕ್ಕೆ ನಂತರ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯನವರೇ ದಯವಿಟ್ಟು ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ಬಿಟ್ಟುಕೊಡಿ: ಚಂದ್ರಶೇಖರಶ್ರೀ ಮನವಿ
ಈ ಬೆಳವಣಿಗೆಯ ಬೆನ್ನಲ್ಲೇ, ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಆದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
‘ಯಾವನೋ ಹೇಳಿಕೊಟ್ಟು ಮಾಡ್ಸಿರೋದು’
ಚಂದ್ರಶೇಖರ ಶ್ರೀ ಹೇಳಿಕೆ ಬಗ್ಗೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಗೃಹ ಸಚಿವ ಜಿ ಪರಮೇಶ್ವರ ಜತೆ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಲಿಫ್ಟ್ನಲ್ಲಿ ಪರಮೇಶ್ವರ್ ಜತೆ ಮಾತನಾಡಿದ ಅವರು, ಅವನ್ಯಾವನೋ ಸ್ವಾಮೀಜಿ ಕೈಲಿ ಹೇಳಿಸಿದ್ದಾನೆ ಎಂದಿದ್ದಾರೆ. ಸಿದ್ದರಾಮಯ್ಯರ ಈ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಖಚಿತಪಡಿಸಿದೆ.
ರಾಜಣ್ಣ ವಿರುದ್ಧ ಬಹಿರಂಗವಾಗಿ ಗುಡುಗಿದ ಡಿಕೆ ಸುರೇಶ್
ಡಿಕೆ ಶಿವಕುಮಾರ್ ಖಡಕ್ ವಾರ್ನಿಂಗ್
ಇಷ್ಟೆಲ್ಲ ಬೆಳವಣಿಗೆಗಳಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಹೇಳಿಕೆಗಳನ್ನು ನೀಡದಂತೆ ಎಲ್ಲ ಶಾಸಕರು, ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಉಲ್ಲಂಘಿಸಿದರೆ ನೋಟಿಸ್ ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ತಾರಕಕ್ಕೇರಿದ ಡಿಸಿಎಂ ಹುದ್ದೆ ಪೈಪೋಟಿ, ಬೀದಿಗೆ ಬಂದ ಡಿಸಿಎಂ ದಂಗಲ್
ಇಷ್ಟೆಲ್ಲ ಆದರೂ ಕಾಂಗ್ರೆಸ್ ನಾಯಕರ ಹೇಳಿಕೆಗಳು ಮಾತ್ರ ನಿಂತಿಲ್ಲ. ಕೆಪಿಸಿಸಿ ಅಧ್ಯಕ್ಷರ ಎಚ್ಚರಿಕೆಗೂ ಬಗ್ಗದ ರಾಜಣ್ಣ, ನೋಟಿಸ್ ಕೊಡಲಿ ಬಿಡಿ. ಆಮೇಲೆ ಉತ್ತರ ಕೊಡುತ್ತೇನೆ ಎಂದು ಉಡಾಫೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಆಂತರಿಕ ಸಂಘರ್ಷ ಎಷ್ಟರ ಮಟ್ಟಿಗೆ ಮುಂದುವರಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ