ಕರ್ನಾಟಕದ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ, ಕೋಲಾರ ಟಿಕೆಟ್ ಇನ್ನೂ ನಿಗೂಢ!

| Updated By: ರಮೇಶ್ ಬಿ. ಜವಳಗೇರಾ

Updated on: Mar 29, 2024 | 10:01 PM

ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ 9ನೇ ಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಕರ್ನಾಟಕ ಮೂರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಘೋಷಣೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದ 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಒಂದು ಕ್ಷೇತ್ರದ ಅಭ್ಯರ್ಥಿ ಕಗ್ಗಂಟಾಗಿ ಉಳಿದಿದೆ.​

ಕರ್ನಾಟಕದ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ, ಕೋಲಾರ ಟಿಕೆಟ್ ಇನ್ನೂ ನಿಗೂಢ!
ಕಾಂಗ್ರೆಸ್
Follow us on

ಬೆಂಗಳೂರು, (ಮಾರ್ಚ್ 29): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳ ಪೈಕಿ ಚಾಮರಾಜನಗರ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ್ದು, ಕೋಲಾರ ಕ್ಷೇತ್ರದ ಟಿಕೆಟ್ ಕಾಯ್ದಿರಿಸಿದೆ. ನಿರೀಕ್ಷೆಯಂತೆ ಬಳ್ಳಾರಿ ಲೋಕಸಭಾ ಟಿಕೆಟ್ ಇ ತುಕರಾಂ, ಚಾಮರಾಜನಗರ ಕ್ಷೇತ್ರದ ಟಿಕೆಟ್​ ಸಚಿವ ಎಚ್​ಸಿ ಮಹಾದೇವಪ್ಪ ಪುತ್ರ ಸುನೀಲ್ ಬೋಸ್​ಗೆ ನೀಡಲಾಗಿದೆ. ಇದರೊಂದಿಗೆ ಕಾಂಗ್ರೆಸ್ ಒಟ್ಟು 28 ಕ್ಷೇತ್ರಗಳಲ್ಲಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಕೋಲಾರ ಒಂದು ಕ್ಷೇತ್ರವನ್ನು ಬಾಕಿ ಉಳಿಸಿಕೊಂಡಿದೆ.

ಎಂ.ಎಸ್.ರಾಮಯ್ಯನವರ ಮೊಮ್ಮಗ ರಕ್ಷಾ ರಾಮಯ್ಯ ಅವರಿಗೆ ಚಿಕ್ಕಬಳ್ಳಾಪುರ ಟಿಕೆಟ್ ನೀಡಲಾಗಿದೆ. ಬಳ್ಳಾರಿ ಲೋಕಸಭಾ ಟಿಕೆಟ್ ಸಂಡೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ತುಕರಾಂ ಅವರಿಗೆ ನೀಡಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿದ್ದರಾಮಯ್ಯನವರ ಆಪ್ತ ಸಚಿವ ಡಾ.ಹೆಚ್​ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್​ಗೆ ಮಣೆ ಹಾಕಲಾಗಿದೆ. ಇದರೊಂದಿಗೆ ಕಾಂಗ್ರೆಸ್ 27 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ.

ಮಾಜಿ ಸಿಎಂಗೆ ಮುಖಭಂಗ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್​ ಭಾರೀ ಕಗ್ಗಂಟಾಗಿತ್ತು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವ ಎನ್‌ಎಚ್‌ ಶಿವಶಂಕರರೆಡ್ಡಿ ಹಾಗೂ ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದ್ರೆ, ರಕ್ಷಾ ರಾಮಯ್ಯ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ, ಉಳಿದವರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಕಗ್ಗಂಟಾಗಿ ಉಳಿದಿತ್ತು. ಕೊನೆ ಹೈಕಮಾಂಡ್ ಅಂತಿಮವಾಗಿ ರಕ್ಷಾ ರಾಮಯ್ಯ ಅವರಿಗೆ ಮಣೆ ಹಾಕಿದೆ. ಇದರಿಂದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರಿಗೆ ಮುಖಭಂಗವಾಗಿದೆ.

ಕಗ್ಗಂಟಾದ ಕೋಲಾರ ಟಿಕೆಟ್

ಇನ್ನು ಕೋಲಾರ ಟಿಕೆಟ್ ಕಾಂಗ್ರೆಸ್​ನಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿದೆ.  ಸಚಿವ ಕೆಎಚ್​ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ನಡುವೆ ಟಿಕೆಟ್​ಗಾಗಿ ಭಾರೀ ಪೈಪೋಟಿ ನಡೆದಿದೆ. ಇದರ ಮಧ್ಯೆ ಮುನಿಯಪ್ಪನವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕೋಲಾರ ಟಿಕೆಟ್​ ಅಂತಿಮವಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ರಮೇಶ್ ಕುಮಾರ್ ಬಣದ ಶಾಸಕರು ರಾಜೀನಾಮೆಗೆ ಮುಂದಾಗಿದ್ದರು. ಇದು ರಾಜ್ಯ ರಾಜಕಾರನದಲ್ಲಿ ಬಾರೀ ಸಂಚಲನಕ್ಕೆ ಕಾರಣವಾಗಿತ್ತು.

ಕೊನೆಗೆ ಸಿದ್ದರಾಂಯ್ಯ, ಡಿಕೆ ಶಿವಕುಮಾರ್ ಸೇರಿಕೊಂಡು ಕೋಲಾರ ಕಾಂಗ್ರೆಸ್ ಶಾಸಕ ಸಂಧಾನ ಸಭೆ ನಡೆಸಿದ್ದು, ರಾಜೀನಾಮೆಗೆ ಮುಂದಾದ ನಾಯಕರುಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದು, ಯಾರಿಗೆ ನೀಡಬೇಕು ಎನ್ನುವುದನ್ನು ಚಿಂತನೆ ನಡೆಸಿದ್ದಾರೆ.

ಒಂದು ವೇಳೆ ಮುನಿಯಪ್ಪ ಅಳಿಯನಿಗೆ ನೀಡಿದರೆ ರಮೇಶ್ ಕುಮಾರ್ ಬಣ ಚುನಾವಣೆಯಲ್ಲಿ ಕೆಲಸ ಮಾಡಲ್ಲ. ಇನ್ನು ರಮೇಶ್ ಕುಮಾರ್​ ಬಣಕ್ಕೆ ನೀಡದರೆ ಮುನಿಯಪ್ಪ ಬಣ ಮುನಿಸಿಕೊಳ್ಳಲಿದೆ. ಹೀಗಾಗಿ ಇಬ್ಬರ ನಡುವೆ ಮೂರನೇ ಅಭ್ಯರ್ಥಿಗೆ ಟಿಕೆಟ್ ನೀಡದರೆ ಹೇಗೆ ಎನ್ನುವ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಹೀಗಾಗಿ ಕೋಲಾರ ಟಿಕೆಟ್ ಯಾರಿಗೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:46 pm, Fri, 29 March 24