ದೇವೇಗೌಡರನ್ನು ತುಮಕೂರಿಗೆ ಕರೆದೊಯ್ದು ಟೋಪಿ ಹಾಕಿದ್ರು: ಕಾಂಗ್ರೆಸ್ ವಿರುದ್ಧ ಹೆಚ್ಡಿ ರೇವಣ್ಣ ವಾಗ್ದಾಳಿ
ಕಾಂಗ್ರೆಸ್ನವರು ಮಾನ ಮರ್ಯಾದೆ ಇದ್ದರೆ ಯಾವ ಮುಖ ಇಟ್ಟುಕೊಂಡು ಓಟ್ ಕೇಳ್ತಾರೆ? ಅದೆಂಥದೊ ಗ್ಯಾರಂಟಿ ಕಾರ್ಡ್ ಇಡ್ಟುಕೊಂಡು ಅಧಿಕಾರಕ್ಕೆ ಬಂದ್ರು. ಈಗ ಒಂದು ಗಂಟೆ ಕರೆಂಟ್ ಕೊಡೋಕೆ ಆಗ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹೆಚ್ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಹಾಸನ, ಅಕ್ಟೋಬರ್ 21: ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರನ್ನು (HD Deve Gowda) ತುಮಕೂರಿಗೆ ಕರೆದೊಯ್ದು ಯಾವರೀತಿ ಟೋಪಿ ಹಾಕಿದರು ಎಂಬುದು ಗೊತ್ತಿದೆ. ಒಬ್ಬ ರಾಷ್ಟ್ರೀಯ ನಾಯಕನನ್ನು ಯಾವರೀತಿ ಬಲಿ ಪಡೆದರು ಎಂಬುದು ಗೊತ್ತಿದೆ ಎಂದು ಹಾಸನ ಕಾಂಗ್ರೆಸ್ ವಿರುದ್ಧ ಜೆಡಿಎಸ್ ನಾಯಕ ಹೆಚ್ಡಿ ರೇವಣ್ಣ (HD Revanna) ವಾಗ್ದಾಳಿ ನಡೆಸಿದರು. ಹಾಸನದ (Hassan) ಗೋರೂರಿನಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಹೆಚ್ಡಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಿ ಏನು ಮಾಡಿದ್ರು ಎಂದು ರೇವಣ್ಣ ಪ್ರಶ್ನಿಸಿದರು. ಬಿಜೆಪಿ ನಾಯಕರ ಮನೆ ಬಾಗಿಲು ಬಡಿದಿದ್ದ ನಾವಲ್ಲ. ಅವರು (ಕಾಂಗ್ರೆಸ್ನವರು) ಹೇಳಬೇಕಾಗಿತ್ತು, ದೇವೇಗೌಡರೇ ನಿಲ್ಲಬೇಡಿ ನಾವು ಒಳಗೆ ಬಿಜೆಪಿ ಬೆಂಬಲಿಸುತ್ತೇವೆ ಎಂಬುದಾಗಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು? ಇವರು ಬೇಕಾದಗ ಬಂದು ಕಾಲು ಕಟ್ಟುತ್ತಾರೆ ಇದು ಅವರ ಸಂಸ್ಕೃತಿ. ವಿದಾನಸಭೆ ಚುನಾವಣೆ ಆದಾಗ 2018 ರಲ್ಲಿ ದೇವೇಗೌಡರ ಪಾದಕ್ಕೆ ಯಾಕೆ ಬಿದ್ದರು ಎಂದು ರೇವಣ್ಣ ಪ್ರಶ್ನಿಸಿದರು. ಪ್ರಜ್ವಲ್ ಅವರು ಪಾರ್ಲಿಮೆಂಟ್ನಲ್ಲಿ ಎಂತೆಂತಾ ಪ್ರಶ್ನೆ ಕೇಳಿದ್ದಾರೆ ಎಂಬ ಪ್ರಶ್ನೆಗೆ ದಾಖಲೆ ಬಿಡುಗಡೆ ಮಾಡುತ್ತೇನೆ. 630 ಪ್ರಶ್ನೆ ಕೇಳಿದಾರೆ ದಾಖಲೆ ಬಿಡುಗಡೆ ಮಾಡ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಮಾತಾಡೋದು ಸುಲಭ ಅಲ್ಲ ಎಂದು ರೇವಣ್ಣ ಹೇಳಿದ್ದಾರೆ.
ಕಾಂಗ್ರೆಸ್ನವರು ಮಾನ ಮರ್ಯಾದೆ ಇದ್ದರೆ ಯಾವ ಮುಖ ಇಟ್ಟುಕೊಂಡು ಓಟ್ ಕೇಳ್ತಾರೆ? ಅದೆಂಥದೊ ಗ್ಯಾರಂಟಿ ಕಾರ್ಡ್ ಇಡ್ಟುಕೊಂಡು ಅಧಿಕಾರಕ್ಕೆ ಬಂದ್ರು. ಈಗ ಒಂದು ಗಂಟೆ ಕರೆಂಟ್ ಕೊಡೋಕೆ ಆಗ್ತಿಲ್ಲ. ನಾನು ಇಂಧನ ಸಚಿವನಾಗಿದ್ದಾಗ ಒಂದು ರೂಪಾಯಿ ಕರೆಂಟ್ ಬಿಲ್ ಏರಿಸಿರ್ಲಿಲ್ಲ. ಹಾಸನದ ಫ್ಲೈ ಓವರ್ ಗೆ ಇವರು ಹತ್ತು ವರ್ಷ ಅದಿಕಾರ ಮಾಡಿದ್ರಲ್ಲ ಆಗ ಹಣ ಕೊಟ್ಟಿದ್ರಾ? ಅದಕ್ಕೆ ಹಣ ಕೊಡೋಕೆ ದೇವೇಗೌಡರ ಮಗ ಕುಮಾರಸ್ವಾಮಿ ಬರಬೇಕಾಯ್ತು. ನಾವು ಯಾರ ಮನೆಮುಂದೆನು ಹೋಗಬೇಕಾಗಿಲ್ಲ. ನಮ್ಮ ಪಕ್ಷ ಉಳಿಸಿಕೊಳ್ಳಲು ದೃಢವಾಗಿ ಇದ್ದೇವೆ ಎಂದು ಅವರು ಹೇಳಿದರು.
ನಾನು ಆಗಲೇ ಹೇಳಿದ್ದೆ ಲೋಕಸಭಾ ಚುನಾವಣೆಯನ್ನು ಟ್ರಯಾಂಗಲ್ ಫೈಟ್ ಮಾಡೋಣ ಎಂದು ಹೇಳಿದ್ದೆ. ತೆಂಗು ಬೆಳೆಗಾರರಿಗೆ 250 ಕೋಟಿ ರೂ. ಪರಿಹಾರ ಕೊಡಿಸಿದ್ದು ನಾವು. ತಮಿಳುನಾಡಿಗೆ ನೀರು ಬಿಡ್ತಾರೆ, ನಮ್ಮ ರೈತರಿಗೆ ನೀರು ಬಿಡಲ್ಲ ಎಂದು ರೇವಣ್ಣ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಗುತ್ತಿಗೆದಾರನ ಮನೆಯಲ್ಲಿ ಹಣ ಸಿಕ್ಕ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಮಾತನಾಡಲ್ಲ. ಅರಸೀಕೆರೆ ಮೈಸೂರು ರೈಲು ಮಾರ್ಗದ ಕಂಬಿ ಕಿತ್ತುಕೊಂಡು ಹೋಗಿದ್ರು. ದೇವೇಗೌಡರು ಅದಿಕಾರಕ್ಕ ಬಂದಿದ್ದಕ್ಕೆ ಆಗ ಅದು ಉಳಿಯಿತು. ಹಾಸನದಲ್ಲಿ ವ್ಯಾಪಾರ ನಡೀತಿದೆ . ಚನ್ನರಾಯಪಟ್ಟಣ ತಹಶಿಲ್ದಾರ್ ನೇಮಕದಲ್ಲಿ ಜಗಳ ನಡೀತಿದೆ. ಒಬ್ಬ ರೆವಿನ್ಯು ಇನ್ಸ್ಪೆಕ್ಟರ್ ಹೇಳ್ತಾರೆ ಒಂದು ಲಕ್ಷ ಕೊಟ್ಟಿದಿನಿ, ಇನ್ನೂ ಒಂದು ಲಕ್ಷ ಕೇಳ್ತಾವ್ರೆ ಅಂತ. ನಾನು ಕಂದಾಯ ಸಚಿವರ ಬಗ್ಗೆ ಮಾತಾಡಲ್ಲ, ಅವರ ಬಗ್ಗೆ ನನಗೆ ಗೌರವ ಇದೆ. ಅವರು ಹಣ ತಗೊತಾರೆ ಅಂತಾ ನಾನು ಹೇಳಲ್ಲ. ಆದರೆ ಮಧ್ಯವರ್ತಿಗಳು ಎಲ್ಲಾ ಮಾಡ್ತಾ ಇದಾರೆ. ಮೂರು ಮೂರು ತಿಂಗಳಿಗೆ ಒಂದು ವರ್ಗಾವಣೆ ಈ ಜಿಲ್ಲೆಯಲ್ಲಿ ನಡೀತಿದೆ. ಶಾಂತಿಗ್ರಾಮ ಉಪ ತಹಶಿಲ್ದಾರ್ ಸ್ಥಾನಕ್ಕೆ ನಾಲ್ಕು ಲಕ್ಷ ಪಡೆದು ವರ್ಗಾವಣೆ ಆಗಿದೆ. ಯಾರ ಪತ್ರದಿಂದ ವರ್ಗಾವಣೆ ಆಗಿದೆ ತೋರಿಸ್ಲಾ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬೆಂಬಲಿಸಲು ಚಿನ್ನಸ್ವಾಮಿಗೆ ಹೋಯ್ತೇ ಸಂಪುಟ ಪಟಲಾಂ: ಕಾಂಗ್ರೆಸ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಜೆಡಿಎಸ್ ಬಗ್ಗೆ ಟೀಕೆ ಮಾಡುತ್ತಿರೊ ಹಾಸನ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯನ್ನೂ ಕೊಟ್ಟ ರೇವಣ್ಣ, ಗೌರವದಿಂದ ವ್ಯಾಪಾರ ಮಾಡಿಕೊಂಡು ಸುಮ್ಮನೆ ಇರಿ. ಇಲ್ಲಾಂದ್ರೆ ನಿಮ್ಮ ಚರಿತ್ರೆ ಬಿಚ್ಚಬೇಕಾಗುತ್ತೆ ಎಂದು ಗುಡುಗಿದ್ದಾರೆ. ನಮಗೆ ಪಾರ್ಟಿ ಮುಖ್ಯ ಅಲ್ಲಾ ಜನರನ್ನು ಉಳಿಸಿ. ಕರೆಂಟ್ ಇಲ್ಲದೆ ರೈತರ ಬೆಳೆ ನಾಶವಾಗಿದೆ. ರೈತರಿಗೆ ಕರೆಂಟ್ ಸಿಕ್ತಿಲ್ಲ. ಇಂದನ ಇಲಾಖೆಯೊಂದರಲ್ಲಿ 48 ಸಾವಿರ ಕೋಟಿ ನಷ್ಟ ಇದೆ. ರೈತರ ಜೋಳ ಖರೀದಿ ಮಾಡಿ ಅಂದ್ರೆ ಕೆಎಂಎಫ್ ಎಂಡಿ ಫಾರಿನ್ ಟೂರ್ ಹೊರಟಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ