ಬಿಜೆಪಿಗೆ ನಾನು ಅಂದರೆ ಭಯ: ಜಗದೀಶ್ ಶೆಟ್ಟರ್

| Updated By: Rakesh Nayak Manchi

Updated on: Sep 17, 2023 | 3:05 PM

ಶೆಟ್ಟರ್ ಬಿಜೆಪಿ ಬಿಟ್ಟು ಹೋದ ಮೇಲೆ ಏನಾಗಿದೆ ಅನ್ನೋದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಅದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಬಗ್ಗೆ ಬಿಜೆಪಿಯವರಿಗೆ ಭಯ ಇದೆ. ಭಯ ಇರುವ ಕಾರಣಕ್ಕೆ ಪದೇಪದೆ ನನ್ನ ಹೆಸರು ಪ್ರಸ್ತಾಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇದರಿಂದ ಬಿಜೆಪಿಗೆ ನಷ್ಟ ಹೊರತು ಲಾಭ ಅಲ್ಲ ಅಂತಾನೂ ಹೇಳಿದ್ದಾರೆ.

ಬಿಜೆಪಿಗೆ ನಾನು ಅಂದರೆ ಭಯ: ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್
Follow us on

ಹುಬ್ಬಳ್ಳಿ, ಸೆ.17: ಬಿಜೆಪಿಗೆ ನಾನು ಅಂದರೆ ಭಯ. ನಾನು ಪಕ್ಷ ಬಿಟ್ಟು ಹೋದ ಮೇಲೆ ಏನಾಗಿದೆ ಅನ್ನೋದು ಗೊತ್ತಾಗಿದೆ. ಅದನ್ನು ಇನ್ನೂ ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗಿಲ್ಲ ಎಂದು ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು. ಈದ್ಗಾ ಮೈದಾನದ ಹೋರಾಟದಲ್ಲಿ ಜಗದೀಶ್ ಶೆಟ್ಟರ್ ವಿರುದ್ದವೂ ಬಿಜೆಪಿ ಕಾರ್ಯಕರ್ತರು ದಿಕ್ಕಾರ ಕೂಗಿದ ವಿಚಾರವಾಗಿ ಈ ಹೇಳಿಕೆ ನೀಡಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರನ್ನ ವಿಧಾನಸಭೆ ಚುನಾವಣೆಯಲ್ಲಿ ಟಾರ್ಗೆಟ್ ‌ಮಾಡಿದ್ದೀರಿ. ಇವಾಗಲೂ ಟಾರ್ಗೆಟ್ ‌ಯಾಕೆ? ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನನ್ನ ಭಯ ಆರಂಭವಾಗಿದೆ. ಭಯ ಇರುವ ಕಾರಣಕ್ಕೆ ಪದೇಪದೆ ನನ್ನ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಇದರಿಂದ ಬಿಜೆಪಿಗೆ ನಷ್ಟ ಹೊರತು ಲಾಭ ಅಲ್ಲ. ಪದೇಪದೆ ಶೆಟ್ಟರ್ ಹೆಸರು ಹೇಳಿದರೆ ನೀವು ಉದ್ಧಾರವೂ ಆಗುವುದಿಲ್ಲ ಎಂದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಜಗದೀಶ್​ ಶೆಟ್ಟರ್​ ಗೇಮ್​ ಪ್ಲ್ಯಾನ್​: ಲಿಂಗಾಯತ ನಾಯಕರೇ ಟಾರ್ಗೆಟ್

ಈದ್ಗಾ ಮೈದಾನದಲ್ಲಿ ಗಣೇಶ ಆಚರಣೆ ಮಾಡಿ, ಯಾರು ಬೇಡಾ ಅಂತಾರೆ ಎಂದು ಹೇಳಿದ ಶೆಟ್ಟರ್, ನಾನು‌ ಪ್ರತಿ ವರ್ಷ ಮನೆಯಲ್ಲಿ ಗಣೇಶ ಕೂರಿಸುತ್ತೇನೆ. ಕೆಲವರು ಮನೆಯಲ್ಲಿ ಗಣೇಶ ಕೂರಿಸಲ್ಲ. ತೋರಿಕೆಗೆ ಮಾಡುತ್ತಾರೆ ಎಂದರು.

ಮಹಾದಾಯಿ ಬಗ್ಗೆ ಹೋರಾಟ ಮಾಡಿ, ಮೋದಿ ಬಂದು ಒಂಬತ್ತು ವರ್ಷ ಆಯ್ತು. ಹನಿ ನೀರು‌ ಕೊಡಲು ಇಷ್ಟು ವರ್ಷ ಬೇಕಾ ಎಂದು ಪ್ರಶ್ನಿಸಿದ ಶೆಟ್ಟರ್, ಮಹದಾಯಿ ನೀರು ಕೊಡಿ. ನಿಮ್ಮ ಜನ್ಮ ಸಾರ್ಥಕ ಆಗತ್ತದೆ ಎಂದರು. ಅಲ್ಲದೆ, ಪ್ರತಿ ವರ್ಷ ಕಳಸಾ ಬಂಡೂರಿ ಹೆಸರಲ್ಲಿ ವೋಟ್ ತೆಗೆದುಕೊಳ್ಳುವುದಾ? ಮೋದಿ ಅವರಿದ್ದಾಗಲೇ ಕಳಸಾ ಬಂಡೂರಿ‌ ಮುಕ್ತಾಯ ಮಾಡಿ ಎಂದರು.

ಹಣಕೊಟ್ಟು ಟಿಕೆಟ್ ಕೊಟ್ಟಿರುವ ಬಗ್ಗೆ ಬಿಜೆಪಿ ಉತ್ತರಿಸಬೇಕು: ಶೆಟ್ಟರ್

ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಗೆ ಐದು ಕೋಟಿ ವಂಚಿಸಿದ ಪ್ರಕರಣದ ಬಗ್ಗೆ ಮಾತನಾಡಿದ ಶೆಟ್ಟರ್, ​ಹಣ ಪಡೆದು ಬಿಜೆಪಿ ಟಿಕೆಟ್ ಕೊಟ್ಟಿರುವ ಬಗ್ಗೆ ಊಹಾಪೋಹ ಇದೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದರು.

ಹಣ ಪಡೆದ ಬಗ್ಗೆ ಕೆಲವು ಕಡೆ ಸುದ್ದಿ ಹೊರಗೆ ಬರುತ್ತಿವೆ, ಇನ್ನೂ ಕೆಲವೆಡೆ ಹೊರಗೆ ಬರುತ್ತಿಲ್ಲ. ಟಿಕೆಟ್ ಕೊಡಿಸಲು ಇಂಥದ್ದೊಂದು ಟೀಮ್ ರೆಡಿಯಾಗಿದೆ ಅಂದರೆ ಇದನ್ನು ಗಂಭೀರವಾಗಿ ವಿಚಾರ ಮಾಡಬೇಕು. ಮಾಹಿತಿ‌ ಪ್ರಕಾರ ಹಿಂದೂ ಕಾರ್ಯಕರ್ತರೇ ಪ್ರಕರಣದಲ್ಲಿದ್ದಾರೆ. ಕನಕಗಿರಿಯಲ್ಲಿ‌ ಟಿಕೆಟ್ ಡೀಲ್ ವಿಷಯಕ್ಕೆ ‌ದೂರು ದಾಖಲಾಗಿದೆ. ದೂರು ಕೊಡದೆ ಇರುವವರು ಇನ್ನೂ ಸಾಕಷ್ಟು ಜನ ಇರಬಹುದು ಎಂದರು.

ಕೆಲವೇ ವ್ಯಕ್ತಿಗಳ ಕೈಯಲ್ಲಿ ಬಿಜೆಪಿ ಇದೆ ಎಂದು ನಾನು ಹೇಳಿದ್ದೆ. ಅದು ಈಗ ಪ್ರೂವ್ ಆಗುತ್ತಿದೆ ಎಂದ ಜಗದೀಶ್ ಶೆಟ್ಟರ್, ವ್ಯಕ್ತಿಯನ್ನು ನೋಡಿ ಟಿಕೆಟ್ ಕೊಡುವ ಪ್ರಕ್ರಿಯೆ ಮೊದಲು ಇತ್ತು. ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೆಟ್ ಕೊಡಿಸಿದ್ದೇನೆ. ರಾಮದುರ್ಗದಲ್ಲಿ ರಿಯಲ್ ಎಸ್ಟೇಟ್ ವ್ಯಕ್ತಿಗೆ ಟಿಕೆಟ್ ಕೊಡುತ್ತಾರೆ. ಏನೋ ವ್ಯವಹಾರ ನಡೆದಿದೆ ಅನ್ನೋದಂತೂ ಸತ್ಯ ಎಂದರು.

ಪ್ರಾಥಮಿಕ ಹಂತದಲ್ಲಿ ವ್ಯವಹಾರ ನಡೆದಿರುವ ಬಗ್ಗೆ ಸಾಬೀತಾಗಿದೆ ಎಂದ ಶೆಟ್ಟರ್, ಚೈತ್ರಾ ಕುಂದಾಪೂರ ಅಪರಾಧಿ ಸ್ಥಾನದಲ್ಲಿ ‌ನಿಂತಿದ್ದಾರೆ. ಚೈತ್ರಾ ಕುಂದಾಪೂರ ಪ್ರಕರಣ ಹೊರಬರುತ್ತಿದ್ದಂತೆ ಕೆಲವರಿಗೆ ಧೈರ್ಯ ಬಂದಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ