ಸಿಎಂ ಕುರ್ಚಿಗಾಗಿ ಫೈಟ್: ಸಿದ್ದರಾಮಯ್ಯನವರೇ ಹೆಗ್ಗಣ ಬಿದ್ದಿರುವುದು ನಿಮ್ಮ ತಟ್ಟೆಯಲ್ಲಿ ಎಂದ ಆರ್ ಅಶೋಕ
ಕಾಂಗ್ರೆಸ್ ಪಕ್ಷದ ಒಳಗೆ ನಡೆಯುತ್ತಿರುವ ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಬಗ್ಗೆ ಮಾತನಾಡಿದ ಮಾಜಿ ಸಚಿವ ಆರ್ ಅಶೋಕ, ಸಿದ್ದರಾಮಯ್ಯ ಟೀಮ್ ಡಿ.ಕೆ.ಶಿವಕುಮಾರ್ ಅವರನ್ನು ಸನ್ಯಾಸಿ ಮಾಡಲು ಹೊರಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಸರ್ಕಾರ ರಚನೆಯಾಗಿ ಒಂದು ತಿಂಗಳು ಆಗುತ್ತಿದ್ದಂತೆ ಕಾಂಗ್ರೆಸ್ (Congress) ಪಕ್ಷದೊಳಗೆ ಮುಖ್ಯಮಂತ್ರಿ ಸ್ಥಾನಕಕ್ಕಾಗಿ ಪೈಪೋಟಿ ನಡೆಯಲು ಆರಂಭವಾಗಿದೆ. ಬಿಜೆಪಿ (BJP) ನಾಯಕರು ಕೂಡ ಅಲ್ಲೊಂದು ಇಲ್ಲೊಂದು ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಟೀಕೆಗೆ ತಿರುಗೇಟು ನೀಡಿದ ಮಾಜಿ ಸಚಿವ ಆರ್ ಅಶೋಕ (R Ashoka), ಕುರ್ಚಿಗಾಗಿ ಕಿತ್ತಾಡಿ ಎಂದು ನಾವು ಯಾರಿಗೂ ಹೇಳಿಲ್ಲ. ಸಿದ್ದರಾಮಯ್ಯನವರೇ ಹೆಗ್ಗಣ ಬಿದ್ದಿರುವುದು ನಿಮ್ಮ ತಟ್ಟೆಯಲ್ಲಿ. ನಿಮ್ಮ ಆಪ್ತರನ್ನು ಕರೆದು ಬುದ್ಧಿವಾದ ಹೇಳಿ ಎಂದಿದ್ದಾರೆ.
ಡಿ.ಕೆ.ಸುರೇಶ್ ಒಳ್ಳೆಯವರು, ಎಲ್ಲಾ ಕಡೆ ಕಣ್ಣೀರಿಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ಗಡ್ಡ ಬಿಟ್ಟಿದ್ದಾರೆ, ತಲೆಕೂದಲು ಬಿಳಿಯಾಗಿದೆ. ಸಿದ್ದರಾಮಯ್ಯ ಟೀಮ್ ಡಿ.ಕೆ.ಶಿವಕುಮಾರ್ರನ್ನು ಸನ್ಯಾಸಿ ಮಾಡಲು ಹೊರಟಿದೆ ಎಂದು ಹೇಳಿದ ಆರ್ ಅಶೋಕ, ಹೀಗೆಲ್ಲ ಆಗುತ್ತಿದೆ ಎಂದರೆ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದರು.
135 ಶಾಸಕರು ನಿಮ್ಮ ತಾಕತ್, ಧಮ್ ಪ್ರದರ್ಶಿಸಿ: ಆರ್ ಅಶೋಕ್
ಬಿಜೆಪಿ ಸಂಸದರಿಗೆ ಧಮ್, ತಾಕತ್ತಿದ್ದರೆ ಕೇಂದ್ರದ ಬಳಿ ಅಕ್ಕಿ ಕೇಳಲಿ ಅಂತಾರೆ. ಬಿಜೆಪಿಯ 25 ಸಂಸದರ ಬಗ್ಗೆ ಮಾತನಾಡುವ ಬದಲು ನಿಮ್ಮ 135 ಶಾಸಕರಿದ್ದೀರಲ್ವಾ, ಅವರ ತಾಕತ್, ಧಮ್ ಪ್ರದರ್ಶಿಸಿ ಎಂದು ತಿರುಗೇಟು ನೀಡಿದ ಅಶೋಕ, 135 ಶಾಸಕರನ್ನು ಕರೆದೊಯ್ದು ಅಕ್ಕಿ ತೆಗೆದುಕೊಂಡು ಬಂದು ತೋರಿಸಿ ಎಂದು ನೇರ ಸವಾಲು ಹಾಕಿದರು.
ಇದನ್ನೂ ಓದಿ: ಧೈರ್ಯವಿದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ನಾನೆ ಅಂತ ಹೇಳಲಿ: ಪ್ರತಾಪ್ ಸಿಂಹ
ನೀತಿ ಆಯೋಗದ ಮೀಟಿಂಗ್ ಕರೆದಾಗ ಯಾಕೆ ನೀವು ಸಭೆಗೆ ಹೋಗಿಲ್ಲ? ನಿಮಗೆ ನೀತಿ ಇಲ್ವಾ? ಕರ್ನಾಟಕದಲ್ಲಿ ಮಾತ್ರ ಈಟಿಂಗ್ ಸಿಕ್ಕಿದರೆ ಅದನ್ನು ಫಸ್ಟ್ ಮಾಡುತ್ತೀರಿ ಎಂದ ಮಾಜಿ ಸಚಿವರು, ಹೆಚ್ಚೆಚ್ಚು ಮಹಿಳೆಯರ ಓಡಾಟ ದಿಂದ ತೊಂದರೆ ಆದರೆ ಅಶೋಕ್ ಹೊಣೆ ಎಂಬ ಕಾಂಗ್ರೆಸ್ ಟ್ವಿಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದಚರು. ಸಮಸ್ಯೆಗಳ ಸಮಿತಿಯ ಅಧ್ಯಕ್ಷರಾಗಿ ಬೇಕಿದ್ರೆ ನನ್ನನ್ನು ಮಾಡಲಿ. ನನಗೆ ಗೊತ್ತು ಸಾರಿಗೆ ಸಚಿವರಿಗೆ ಸಮಸ್ಯೆ ಏನೇನು ಆಗುತ್ತದೆ ಅಂತಾ ಎಂದರು.
ಲೋಕಸಭೆ ಚುನಾವಣೆವರೆಗೂ ಕಾಂಗ್ರೆಸ್ನ ಐದು ಗ್ಯಾರಂಟಿ ಯೋಜನೆಗಳು ಇರುತ್ತದೆ. ಆ ಮೇಲೆ ನಿಂತು ಹೋಗುತ್ತದೆ ಎಂದು ಹೇಳಿದ ಅಶೋಕ, ಗ್ಯಾರಂಟಿಗಳ ವಿಚಾರದಲ್ಲಿ ಅವರು ಹೇಳಿದ್ದೇನು? ಮಾಡಿದ್ದೇನು? ಅಂತ ಜನತೆಗೆ ಮಾಹಿತಿ ಕೊಡುತ್ತೇವೆ. ಯುವಭತ್ಯೆ ಸ್ಕೀಂ ಮೋಸದ ಯೋಜನೆಯಾಗಿದೆ. ಯುವಕರ ಹಣೆಗೆ ತುಪ್ಪ ಸವರಿದ್ದಾರೆ ಎಂದರು.
ಜುಲೈ 4 ರಂದು ಬಿಜೆಪಿ ಪ್ರತಿಭಟನೆ
ವಿದ್ಯುತ್ ದರ ಹೆಚ್ಚಳ, ಗೋಹತ್ಯೆ ತಡೆ, ಮತಾಂತರ ತಡೆ ಕಾಯ್ದೆಗಳ ತಿದ್ದುಪಡಿ ವಿರುದ್ಧ ಜುಲೈ 4 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ವಿಧಾನಸಭೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದರು. ಮತಾತಂತರ ತಡೆ ಕಾಯ್ದೆ ರದ್ದು ಮಾಡಲು ಕಾಂಗ್ರೆಸ್ ಹೊರಟಿದೆ. ಮತಾಂತರ ತಡೆ ಕಾಯ್ದೆ ರದ್ದು ಮಾಡಿದರೆ ಅನಿರ್ದಿಷ್ಟಾವಧಿಗೆ ಹೋರಾಟ ಮಾಡುತ್ತೇವೆ. ಜೈಲ್ ಭರೋ ಹೋರಾಟವನ್ನೂ ಮಾಡುತ್ತೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ