BJP Protest: ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರತಿಭಟನೆಗೆ ಬಿಜೆಪಿ ನಿರ್ಧಾರ
ಅನ್ನಭಾಗ್ಯ ಯೋಜನೆಯ ಸಮರ್ಪಕ ಜಾರಿಯಾಗದಿರುವ ಬಗ್ಗೆ ಜುಲೈ 1 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರತಿಭಟನೆ ನಡೆಸಲು ಪ್ರತಿಪಕ್ಷ ಬಿಜೆಪಿ (BJP) ನಿರ್ಧರಿಸಿದೆ. ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಹಂತ ಹಂತವಾಗಿ ಪ್ರತಿಭಟನೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಜೆಪಿ ನಾಯಕರು ತೀರ್ಮಾನಿಸಿದರು. ಮೊದಲಿಗೆ, ಅನ್ನಭಾಗ್ಯ (Anna Bhagya Scheme) ಯೋಜನೆಯ ಸಮರ್ಪಕ ಜಾರಿಯಾಗದಿರುವ ಬಗ್ಗೆ ಜುಲೈ 1 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ, ಕಾಂಗ್ರೆಸ್ನವರು ಚುನಾವಣಾ ಪೂರ್ವದಲ್ಲಿ ವಾಗ್ದಾನ ಕೊಟ್ಟಂತೆ ಹತ್ತು ಕೆಜಿ ಅಕ್ಕಿ ವಿತರಿಸುವಂತೆ ಒತ್ತಾಯಿಸಲಾಗುವುದು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಶಾಲಾ ಪಠ್ಯ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ಹಿಂಪಡೆಯಲು ಸಂಪುಟ ಸಭೆ ನಿರ್ಧಾರ ಕೈಗೊಂಡ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ವಿಪಕ್ಷ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿವಿ ಸದಾನಂದಗೌಡ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಆರ್ ಅಶೋಕ್, ಮುರುಗೇಶ್ ನಿರಾಣಿ, ಕೋಟ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ, ಶ್ರೀರಾಮುಲು, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಯತ್ನಾಳ್ ಸೇರಿ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣ; ಪ್ರತಾಪ್ ಸಿಂಹ ಹೇಳಿಕೆಗೆ ಹೀಗಿತ್ತು ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ
ಅನ್ನಭಾಗ್ಯ ಯೋಜನೆಗೆ ಅಕ್ಕಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಗೂಬೆಕೂರಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಕ್ಕಿ ಬಿಡುಗಡೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಕೇಂದ್ರ ಪಾಲಿನ ಅಕ್ಕಿಯನ್ನಷ್ಟೇ ಬಿಡುಗಡೆ ಮಾಡಲಾಗುತ್ತದೆ. ಹೆಚ್ಚುವರಿ ಅಕ್ಕಿ ನೀಡುವ ಬಗ್ಗೆ ಕೇಂದ್ರ ಭರವಸೆ ನೀಡಿರಲಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಈ ಮಧ್ಯೆ, ವಿದ್ಯುತ್ ಬಿಲ್ ಹೆಚ್ಚಳ ವಿಚಾರದಲ್ಲಿಯೂ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಮೇಲೆ ಜಟಾಪಟಿ ನಡೆದಿದೆ. ವಿದ್ಯುತ್ ಬಿಲ್ ಅನ್ನು ಹಿಂದಿನ ಬಿಜೆಪಿ ಸರ್ಕಾರ ಹೆಚ್ಚಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ