ಕಾಂಗ್ರೆಸ್​​ನಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್: ಸತೀಶ್ ಜಾರಕಿಹೊಳಿ ನಿವಾಸದಲ್ಲಿ ದಲಿತ ನಾಯಕರ ಸಭೆ

ಸಚಿವ ಸತೀಶ್ ಜಾರಕಿಹೊಳಿ ಗುರುವಾರ ಡಿನ್ನರ್ ನೆಪದಲ್ಲಿ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಹೆಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ ಸಭೆಯಲ್ಲಿ ಭಾಗವಹಿಸಿದ್ದಾರೆ. ರಾತ್ರಿ 9 ಗಂಟೆಯಿಂದ 11 ಗಂಟೆಯವೆರೆಗೆ ರಹಸ್ಯವಾಗಿ ಮಾತುಕತೆ ನಡೆದಿದೆ.

ಕಾಂಗ್ರೆಸ್​​ನಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್: ಸತೀಶ್ ಜಾರಕಿಹೊಳಿ ನಿವಾಸದಲ್ಲಿ ದಲಿತ ನಾಯಕರ ಸಭೆ
ಸತೀಶ್ ಜಾರಕಿಹೊಳಿ
Follow us
TV9 Web
| Updated By: Ganapathi Sharma

Updated on: Jan 05, 2024 | 7:37 AM

ಬೆಂಗಳೂರು, ಜನವರಿ 5: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಕಾಂಗ್ರೆಸ್​​ನಲ್ಲಿ (Congress) ಮತ್ತೆ ಡಿನ್ನರ್ ಪಾಲಿಟಿಕ್ಸ್ ಸದ್ದು ಮಾಡುತ್ತಿದ್ದು, ಸತೀಶ್​​ ಜಾರಕಿಹೊಳಿ ಮತ್ತೆ ಗಮ ಸೆಳೆಯುತ್ತಿದ್ದಾರೆ. ಇತ್ತೀಚಿಗಷ್ಟೇ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ ಭೇಟಿಮಾಡಿದ್ದ ಸತೀಶ್ ಜಾರಕಿಹೊಳಿ ಮೂರು ಡಿಸಿಎಂ ಹುದ್ದೆಯ ದಾಳ ಉರುಳಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಹಿಂದುಳಿದ ವರ್ಗದ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಡಿಸಿಎಂ ಆಗಬೇಕು ಎಂದು ಚರ್ಚೆ ನಡೆಸಿದ್ದೇನೆ. ನಾನು ಡಿಸಿಎಂ ಆಗಬೇಕು ಎಂದು ಕಾರ್ಯಕರ್ತರು ಹಾಗೂ ಮಠಾಧೀಶರು ಒತ್ತಾಯಿಸುತ್ತಿರೋದನ್ನು ವರಿಷ್ಠರ ಗಮನಕ್ಕೆ ತಂದಿರೋದಾಗಿ ಹೇಳಿದ್ದರು.

ಸಹಕಾರ ಸಚಿವ ರಾಜಣ್ಣ ಕೂಡ ಬಹಿರಂಗವಾಗೇ ಹೋದಲ್ಲಿ ಬಂದಲೆಲ್ಲಾ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಒತ್ತಾಯಿಸುತ್ತಿದ್ದಾರೆ. ವೀರಶೈವ ಲಿಂಗಾಯತ, ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ವರ್ಗದವರಿಗೆ ಡಿಸಿಎಂ ಹುದ್ದೆ ನೀಡಬೇಕು. ಇದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಹೇಳ್ತಿದ್ದಾರೆ. ಗುರುವಾರ ತುಮಕೂರಿನಲ್ಲಿ ಮತ್ತೆ ಇದೇ ಮಾತನ್ನು ಪುನರುಚ್ಚರಿಸಿದ್ದರು.

ಸತೀಶ್ ಜಾರಕಿಹೊಳಿ ಮನೆಯಲ್ಲಿ ತಡರಾತ್ರಿವರೆಗೂ ರಹಸ್ಯ ಸಭೆ

ಸಚಿವ ಸತೀಶ್ ಜಾರಕಿಹೊಳಿ ಗುರುವಾರ ಡಿನ್ನರ್ ನೆಪದಲ್ಲಿ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಹೆಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ ಸಭೆಯಲ್ಲಿ ಭಾಗವಹಿಸಿದ್ದಾರೆ. ರಾತ್ರಿ 9 ಗಂಟೆಯಿಂದ 11 ಗಂಟೆಯವೆರೆಗೆ ರಹಸ್ಯವಾಗಿ ಮಾತುಕತೆ ನಡೆದಿದೆ. ಸಭೆಯಲ್ಲಿ ಹಾಜರಿದ್ದವರ ಪೈಕಿ ಸತೀಶ್ ಜಾರಕಿಹೊಳಿ, ಗೃಹ ಸಚಿವ ಪರಮೇಶ್ವರ್ ಕೂಡ ಡಿಸಿಎಂ ಸ್ಥಾನದ ರೇಸ್‌ನಲ್ಲಿ ಪ್ರಮುಖವಾಗಿ ಇದ್ದಾರೆ ಎಂಬುದು ಗಮನಾರ್ಹ. ಇವರೆಲ್ಲ ಸತೀಶ್ ಜಾರಕಿಹೊಳಿ, ಮಹದೇವಪ್ಪ, ಕೆ.ಎನ್.ರಾಜಣ್ಣ ಇವರೆಲ್ಲಾ ಸಿಎಂ ಸಿದ್ದರಾಮಯ್ಯ ಬಣಕ್ಕೆ ಸೇರಿದವರು ಎಂಬುದೂ ವಿಶೇಷ.

ಡಿಸಿಎಂ ಡಿಕೆಶಿ ಓಟಕ್ಕೆ ಬ್ರೇಕ್ ಹಾಕಲು ನಡೆಯುತ್ತಿದೆಯಾ ಪ್ಲ್ಯಾನ್?

ಡಿಸಿಎಂ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದರೂ ಕೂಡ ಸಿಎಂ ಸಿದ್ದರಾಮಯ್ಯಗಿಂತ ತುಂಬಾ ಚುರುಕಿನಿಂದ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದಾರೆ. ಸಂಪುಟ ವಿಸ್ತರಣೆ ವೇಳೆಯೇ ಎರಡು-ಮೂರು ಡಿಸಿಎಂ ಹುದ್ದೆ ಸೃಷ್ಟಿಸೋದಾದರೆ ತಮಗೆ ಆ ಸ್ಥಾನವೇ ಬೇಡ. ಕೊಡೋಡಿದ್ದರೆ ಒಬ್ಬನಿಗೇ ಕೊಡಿ ಎಂದು ಹೈಕಮಾಂಡ್ ಮುಂದೆ ಪಟ್ಟುಹಾಕಿದ್ದರು. ಅದರಲ್ಲಿ ಯಶಸ್ವಿಯೂ ಆಗಿದ್ದರು. ಇನ್ನು ಡಿ.ಕೆ. ಶಿವಕುಮಾರ್ ಬೆಂಬಲಿಗ ಶಾಸಕರಂತೂ ಎರಡೂವರೆ ವರ್ಷದ ಬಳಿಕ ಡಿ.ಕೆ. ಶಿವಕುಮಾರ್ ಅವರೇ ಸಿಎಂ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅಷ್ಟು ಸುಲಭವಾಗಿ ಸಿಎಂ ಸ್ಥಾನ ಬಿಟ್ಟುಕೊಟ್ಟುಕೊಡುವುದು ಅನುಮಾನ. ಪ್ರತಿದಾಳ ಉರುಳಿಸೋದ್ರಲ್ಲಿ ಅವರು ನಿಸ್ಸೀಮರಾಗಿದ್ದಾರೆ. ಹೀಗಿರುವಾಗಲೇ ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಕೊಳಿ, ರಾಜಣ್ಣ ಮೂರು ಡಿಸಿಎಂ ದಾಳ ಉರುಳಿಸಿದ್ದಾರೆ. ಒಂದು ವೇಳೆ ಮೂರು ಡಿಸಿಎಂ ಹುದ್ದೆ ಸೃಷ್ಟಿಯಾದ್ರೆ ಡಿಕೆಶಿ ನಾಗಾಲೋಟಕ್ಕೆ ಬ್ರೇಕ್ ಬೀಳಲಿದೆ ಎಂಬುದು ಸಿದ್ದರಾಮಯ್ಯ ಬಣದ ಲೆಕ್ಕಾಚಾರವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಊಟಕ್ಕಷ್ಟೇ ಬಂದೆವು ಎಂದ ಮಹದೇವಪ್ಪ!

ಸಭೆ ಬಳಿಕ ಮಾತನಾಡಿದ ಹೆಚ್‌.ಸಿ. ಮಹದೇವಪ್ಪ, ಸಚಿವ ಸತೀಶ್ ಜಾರಕಿಹೊಳಿ ಊಟಕ್ಕೆ ಕರೆದಿದ್ದರು ಬಂದಿದ್ದೆವು ಎಂದಷ್ಟೇ ಹೇಳಿದ್ದಾರೆ. ಕೆ.ಎಚ್. ಮುನಿಯಪ್ಪ ಮಾತನಾಡಿ, ನಾನು ಊಟಕ್ಕೆ ಬಂದಿದ್ದೆ, ಉಳಿದವರು ಯಾವ ಕಾರಣಕ್ಕೆ ಬಂದಿದ್ದರೋ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಾಬಾಬುಡನ್​ಗಿರಿಯಲ್ಲಿ ಗೋರಿ ಧ್ವಂಸ ಕೇಸ್​ ರೀ‌ ಓಪನ್: ಇದು ಅಪ್ಪಟ ಸುಳ್ಳು: ಸಿಎಂ ಸಿದ್ದರಾಮಯ್ಯ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ 3 ಡಿಸಿಎಂ ಹುದ್ದೆ ಸೃಷ್ಟಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಎಲ್ಲ ಬೆಳವಣಿಗೆ ಮಧ್ಯೆ ಮತ್ತೆ ಸತೀಶ್ ಜಾರಕಿಹೊಳಿ ದಲಿತ ನಾಯಕರ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ರಾಜ್ಯದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ