‘ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ’ ಅಭಿಯಾನ ಆರಂಭ: ಸುನೀಲ್ ಕುಮಾರ್
ಕಾಂಗ್ರೆಸ್ ಸರಕಾರದ ರಾಮ ಹಾಗೂ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ‘ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಅಭಿಯಾನ ಇವತ್ತಿನಿಂದ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್ ಕುಮಾರ್ (Sunil Kumar) ಅವರು ಹೇಳಿದ್ದಾರೆ.
ಬೆಂಗಳೂರು, ಜ.04: ಕಾಂಗ್ರೆಸ್ ಸರಕಾರದ ರಾಮ ಹಾಗೂ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ‘ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಅಭಿಯಾನ ಇವತ್ತಿನಿಂದ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್ ಕುಮಾರ್ (Sunil Kumar) ಅವರು ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘1990 ಮತ್ತು 92ರ ಕರಸೇವೆಯಲ್ಲಿ ಕರ್ನಾಟಕದಿಂದಲೂ ಸಾವಿರಾರು ಜನರು ಅವತ್ತಿನ ಸರಕಾರದ ಬೆದರಿಕೆಗೂ ಬಗ್ಗದೆ ಭಾಗವಹಿಸಿದ್ದರು. ಅವತ್ತಿನ ಕಾಂಗ್ರೆಸ್ಸಿಗರು ಕರಸೇವೆಗೆ ಬೆದರಿಕೆ ಒಡ್ಡಿದ್ದರು. ಇವತ್ತು ಶ್ರೀರಾಮಮಂದಿರ ಉದ್ಘಾಟನೆ ಸಂದರ್ಭದಲ್ಲೂ ಕೂಡ ಕರಸೇವಕರು, ರಾಮಭಕ್ತರನ್ನು ಮತ್ತು ರಾಮಭಕ್ತರನ್ನು ಬೆದರಿಸುವ, ಭಯ ಪಡಿಸುವ ತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಆಕ್ಷೇಪಿಸಿದರು.
‘ನಾವೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸಿದವರು. ರಾಮಮಂದಿರದ ನಿರ್ಮಾಣವು ಬಿಜೆಪಿಯ ಬದ್ಧತೆ. ನಮ್ಮ ಪ್ರಣಾಳಿಕೆಯಲ್ಲಿ ಹತ್ತಾರು ವರ್ಷಗಳಿಂದ ಹೇಳುತ್ತಲೇ ಬಂದಿದ್ದೇವೆ. ರಾಮಮಂದಿರವು ಒಂದು ರಾಜಕೀಯ ವಸ್ತುವಲ್ಲ. ಅದೊಂದು ಭಾವನೆಯ, ನಡವಳಿಕೆಯ ಹಾಗೂ ಬದ್ಧತೆಯ ಪ್ರಶ್ನೆ ಎಂದರು. ಈ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವಾಗ ರಾಮ ಭಕ್ತರನ್ನು ಕ್ರಿಮಿನಲ್‍ಗಳಿಗೆ ಹೋಲಿಸುವ ಕೆಲಸವನ್ನು ಸಿದ್ದರಾಮಯ್ಯನವರು ಇವತ್ತು ಮಾಡುತ್ತಿದ್ದಾರೆ.
ಇದನ್ನೂ ಓದಿ:ರಾವಣ ಮಾತ್ರ ಅಲ್ಲ, ಸಿದ್ದರಾಮಯ್ಯ ಕೂಡ ರಾಮ ವಿರೋಧಿ -ಶಾಸಕ ಸುನೀಲ್ ಕುಮಾರ್
ಹುಬ್ಬಳ್ಳಿಯ ಕಾರ್ಯಕರ್ತನನ್ನು ಕ್ರಿಮಿನಲ್ ಎಂದು ಹೇಳಿ ತನ್ನನ್ನು ಸಮರ್ಥಿಸಿಕೊಳ್ಳಲು ಸರಕಾರ ಹೊರಟಿದೆ. ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಕಾಂಗ್ರೆಸ್ಸಿಗರಿಗೆ ಅಮಾಯಕನಂತೆ ಕಾಣುತ್ತಾನೆ. ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಕೆ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು ಕಾಂಗ್ರೆಸ್ ಪಕ್ಷಕ್ಕೆ ಬ್ರದರ್ಸ್ ಆಗಿ ಕಾಣುತ್ತಾರೆ. ಆದರೆ, ಕರಸೇವೆಯಲ್ಲಿ ಭಾಗವಹಿಸಿದ ರಾಮಭಕ್ತರು ಮಾತ್ರ ಕಾಂಗ್ರೆಸ್ಸಿಗರಿಗೆ ಕ್ರಿಮಿನಲ್ ರೂಪದಲ್ಲಿ ಕಾಣುತ್ತಾರೆ ಎಂದು ಆಕ್ಷೇಪಿಸಿದರು.
ಈ ಎಲ್ಲ ನಡವಳಿಕೆಯ ಮೂಲಕ ರಾಜ್ಯದ ಹಿಂದುಗಳಿಗೆ ಈ ಸರಕಾರ ಸತ್ತು ಹೋದಂತೆ ಕಾಣುತ್ತದೆ. ಈ ಸರಕಾರ ರೈತರ ಪರವಾಗಿಯೂ ಇಲ್ಲ, ಹಿಂದೂಗಳ ಪರವಾಗಿಯೂ ಇಲ್ಲ, ಕನ್ನಡ ಪರವಾಗಿಯೂ ಇಲ್ಲ. ಕೇವಲ ಅಲ್ಪಸಂಖ್ಯಾತರನ್ನು ವೈಭವೀಕರಿಸುವುದರಲ್ಲಿ, ತುಷ್ಟೀಕರಿಸುವುದರಲ್ಲಿ ಈ ಸರಕಾರ ಇವತ್ತು ಮುಂದುವರೆಯುತ್ತಿದೆ ಎಂದು ಸುನೀಲ್‍ಕುಮಾರ್ ಅವರು ಟೀಕಿಸಿದರು. ಜೊತೆಗೆ ಈ ಅಭಿಯಾನ ಮುಂದುವರೆಯಲಿದೆ. ರಾಮಭಕ್ತರನ್ನು ಬೆದರಿಸುವ ಕಾರ್ಯವನ್ನು ಸರಕಾರ ಕೈಬಿಡಬೇಕು. ಮಂದಿರ ನಿರ್ಮಾಣ ಕಾರ್ಯದಲ್ಲಿ ಸರಕಾರವೂ ಸಹಕರಿಸಬೇಕು ಎಂದು ಆಗ್ರಹಿಸಿದರು.
ನಾನು ಕೂಡ ಹತ್ತಾರು ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಹೋರಾಟದಲ್ಲಿ ಭಾಗವಹಿಸಿದಾಗ ಪೊಲೀಸರು ಕೇಸುಗಳನ್ನು ಹಾಕಿಯೇ ಹಾಕುತ್ತಾರೆ. ಹಾಗಿದ್ದರೆ ನಾನೂ ಕೂಡ ಕ್ರಿಮಿನಲ್ಲಾ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಮರುಪ್ರಶ್ನೆ ಹಾಕಿದರು. ರಾಜಕಾರಣಿಗಳೆಲ್ಲರೂ ಒಂದಲ್ಲ ಒಂದು ಹೋರಾಟದಲ್ಲಿ ಪಾಲ್ಗೊಂಡವರು. ಕೇಸು ಹಾಕಿದ ತಕ್ಷಣ ಕ್ರಿಮಿನಲ್ ಎನ್ನುವುದಾದರೆ ಎಲ್ಲ ರಾಜಕಾರಣಿಗಳೂ ಕೂಡ ಕ್ರಿಮಿನಲ್ ಆಗುತ್ತಾರೆ. ನನ್ನ ಮೇಲೆ 27 ಕೇಸಿತ್ತು. ಹಾಗಿದ್ದರೆ ನಾನು ಕೂಡ ಕ್ರಿಮಿನಲ್ಲಾ ಎಂದು ಕೇಳಿದರು. ಇದನ್ನು ಇವತ್ತು ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:39 pm, Thu, 4 January 24