ಹೆಲಿಕಾಪ್ಟರ್ ಅವಘಡದಿಂದ ಪಾರಾದ ಬೆನ್ನಲ್ಲೇ ಅಜ್ಜಯ್ಯನ ಮೊರೆ ಹೋದ ಡಿಕೆ ಶಿವಕುಮಾರ್, ಜ್ಯೋತಿಷಿ ಹೇಳಿದ್ದೇನು?
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ಹದ್ದು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಗಂಡಾಂತರದಿಂದ ಪಾರಾಗಿರುವ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ಮೊರೆ ಹೋಗಿದ್ದಾರೆ. ಇನ್ನು ಡಿಕ್ಕಿ ಹೊಡೆದಿದ್ದ ಹದ್ದು ಸತ್ತಿರುವುದಕ್ಕೆ ಜ್ಯೋತಿಷಿ ಹೇಳುವುದೇನು?
ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ದೈವ ಭಕ್ತರಾಗಿದ್ದು, ಒಂದಲ್ಲ ಒಂದು ಸಂಕಷ್ಟಗಳಿಂದ ಪಾರಾದ ಬಳಿಕ ಅವರು ಮೊದಲು ದೇವರ ಮೊರೆ ಹೋಗುತ್ತಾರೆ. ಈ ಹಿಂದೆ ಹವಾಲ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಸಿಕ್ಕ ಬೆನ್ನಲ್ಲೇ ಗಾಣಗಾಪುರದ ದತ್ತಾತ್ರೇಯನ ಆಶೀರ್ವಾದ ಪಡೆದುಕೊಂಡಿದ್ದು. ಅಲ್ಲದೇ ಮೊನ್ನೇ ಅಷ್ಟೇ ನಾಪಮತ್ರ ತಿರಸ್ಕೃತ ಆತಂಕ ದೂರುವಾದ ಬಳಿಕ ಅವರು ದೇವರ ಮೊರೆ ಹೋಗಿದ್ದರು. ಹೀಗೆ ಸಂಕಷ್ಟಗಳಿಂದ ಪಾರಾದ ಬಳಿಕ ಡಿಕೆ ಶಿವಕುಮಾರ್ ದೇವಸ್ಥಾನಗಳಿಗೆ ಹೋಗಿರುವ ಹಲವು ಉದಾಹರಣೆಗಳು ಇವೆ. ಅದರಂತೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೆಲಿಕಾಪ್ಟರ್ ಅವಘಡದಿಂದ ಪಾರಾಗುತ್ತಿದ್ದಂತೆಯೇ ನೊಣವಿನಕೆರೆ ಅಜ್ಜಯ್ಯನ ಮೊರೆ ಹೋಗಿದ್ದಾರೆ. ಅಲ್ಲದೇ ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರು ಕೆಲ ಸಲಹೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಹದ್ದು ಡಿಕ್ಕಿಗೆ ಡಿಕೆ ಶಿವಕುಮಾರ್ ಇದ್ದ ಹೆಲಿಕಾಪ್ಟರ್ ಗ್ಲಾಸ್ ಪೀಸ್ ಪೀಸ್: ಇಲ್ಲಿವೆ ಚಿತ್ರಗಳು
ಹೌದು..ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಡಿ.ಕೆ. ಶಿವಕುಮಾರ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ಬಳಿ ಇರುವ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದು, ನೊಣವಿನಕೆರೆ ಅಜ್ಜಯ್ಯನ ಆಶೀರ್ವಾದ ಪಡೆದುಕೊಂಡರು.
ನಿನ್ನೆ(ಏಪ್ರಿಲ್ 03) ಡಿಕೆ ಶಿವಕುಮಾರ್ ಅವರು ಜಕ್ಕೂರು ವಿಮಾನ ನಿಲ್ದಾಣದಿಂದ ಮುಳಬಾಗಿಲುಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್ಗೆ ಹದ್ದು ಡಿಕ್ಕೆ ಹೊಡೆದಿತ್ತು. ಪರಿಣಾಮ ಹೆಲಿಕಾಪ್ಟರ್ ಮುಂಭಾಗದ ಗಾಜು ಪುಡಿಪುಡಿಯಾಗಿತ್ತು. ಆದ್ರೆ, ಅದೃಷ್ಟವಶಾತ್ ಆಗಸದಲ್ಲಿ ಹೆಲಿಕಾಪ್ಟರ್ನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ. ಗ್ರೇಟ್ ಎಸ್ಕೇಪ್ ಆಗಿದ್ದರಿಂದ ಡಿಕೆ ಶಿವಕುಮಾರ್ ಅಜ್ಜಯ್ಯನ ಮೊರೆ ಹೋಗಿದ್ದಾರೆ.
ಜ್ಯೋತಿಷಿ ರಾಜಗುರು ದ್ವಾರಕನಾಥ್ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್, ಅವರ ಪತ್ನಿಯ ಗ್ರಹ ಗತಿ ಚೆನ್ನಾಗಿರುವುದರಿಂದ ಡಿಕೆ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯ ಗುರುಬಲ, ಶನಿ ಬಲ ಎರಡೂ ಇಲ್ಲ. ಆದರೆ, ಅವರ ಪತ್ನಿ ಉಷಾ ಅವರ ಗ್ರಹ ಗತಿ ಚೆನ್ನಾಗಿದ್ದು, ಆ ದೈವ ಬಲ ಶಿವಕುಮಾರ್ ಅವರನ್ನು ಕಾಪಾಡುತ್ತಿದೆ ಎಂದಿದ್ದಾರೆ.
ಹೆಲಿಕಾಪ್ಟರ್ ಗೆ ಕುಕ್ಕಿದ ರಣ ಹದ್ದು ಮೃತಪಟ್ಟಿದೆ. ಹೀಗಾಗಿ ಪಂಚ ಪಕ್ಷಿ ಶಾಸ್ತ್ರ ಪರಿಣಿತ ಗಜೇಂದ್ರ ಅವರೊಂದಿಗೆ ಚರ್ಚೆ ನಡೆಸಿದ್ದು, ಶಾಸ್ತ್ರದ ಅನುಸಾರ ದೋಷ ಪರಿಹಾರಕ್ಕೆ ಬೆಂಗಳೂರಿನ ಅಲಸೂರಿನಲ್ಲಿರುವ ಸಾವಿರ ವರ್ಷ ಹಳೆಯ ಸೋಮೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಿಸಬೇಕು. ಕುಕ್ಕೆ ಸುಬ್ರಹ್ಮಣ್ಯಕ್ಕೆ 22 ದಿನಗಳ ಒಳಗೆ ಭೇಟಿ ನೀಡಬೇಕು. ಘಟನೆಯನ್ನು ಹಗುರವಾಗಿ ಪರಿಗಣಿಸದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಡಿಕೆ ಶಿವಕುಮಾರ್ ಮುನ್ನಡೆಯಬೇಕು ಎಂದು ರಾಜಗುರು ದ್ವಾರಕನಾಥ್ ಸಲಹೆ ನೀಡಿದ್ದಾರೆ.
ಈ ಹಿಂದೆಯೂ ಅಜ್ಜಯ್ಯನ ಮೊರೆ ಹೋಗಿದ್ದ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷರಾದರೂ ಹೈಕಮಾಂಡ್ ಅಧ್ಯಕ್ಷಗಿರಿಗೆ ಹಸಿರು ನಿಶಾನೆ ತೋರಿಸಿದ್ದರೂ ಸಹ ಡಿ.ಕೆ.ಶಿವಕುಮಾರ್ ಗೆ ಅಧಿಕೃತವಾಗಿ ಪದಗ್ರಹಣ ಮಾಡಿಕೊಳ್ಳಲು ಸಾಧ್ಯವಾಗಿದ್ದಿಲ್ಲ. ಮೂರು ಬಾರಿ ಪದಗ್ರಹಣ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾದರೂ ಸಹ ಒಂದಲ್ಲ ಒಂದು ಕಾರಣಕ್ಕಾಗಿ ಅದು ಮುಂದೂಡಲ್ಪಟ್ಟಿತ್ತು. ಹೀಗಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಎದುರಾಗಿರುವ ಅಡೆತಡೆ ನಿವಾರಣೆಗೆ ಡಿ.ಕೆ.ಶಿವಕುಮಾರ್ , ತುಮಕೂರಿನ ಕಾಡುಸಿದ್ದೇಶ್ವರ ಮಠದ ಅಜ್ಜಯ್ಯನ ಸಲಹೆಯಂತೆ ಶಿವನ ದರ್ಶನ ಪಡೆದಿದ್ದರು.